ಹಿರೇಬಾಗೇವಾಡಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್‌ಸಿಯು)ದ ನೂತನ ಕ್ಯಾಂಪಸ್ ಅನ್ನು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಸ್ಥಾಪಿಸಲು ಸರ್ಕಾರ ನಿರ್ಧರಿಸಿದ್ದು, ಮೊದಲ ಹಂತದಲ್ಲಿ 100 ಕೋಟಿ ರೂ. ಒದಗಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ.
ಹಿರೇಬಾಗೇವಾಡಿಗೆ ಶನಿವಾರ ಭೇಟಿ ನೀಡಿದ ಅವರು, ಆರ್‌ಸಿಯುಗೆ ಮಂಜೂರಾದ ಮಲ್ಲಪ್ಪನ ಗುಡ್ಡದಲ್ಲಿ ಜಮೀನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ವಿವಿಗೆ ಈಗಾಗಲೇ 127 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಇಲ್ಲಿ ಅಕಾಡೆಮಿಕ್ ಮತ್ತು ಆಡಳಿತ ಕೇಂದ್ರ ಎರಡೂ ಕಾರ್ಯ ನಿರ್ವಹಿಸಲಿವೆ ಎಂದು ಮಾಹಿತಿ ನೀಡಿದರು.
ಸ್ಥಳದ ಪ್ರತಿಷ್ಠ ಬೇಡ: ವಿಶ್ವ ವಿದ್ಯಾಲಯದ ಪ್ರಗತಿಗೆ ಸ್ವಂತ ಕ್ಯಾಂಪಸ್ ನಿರ್ಮಿಸಬೇಕು ಎಂಬುದು ಅನೇಕ ವರ್ಷಗಳ ಬೇಡಿಕೆಯಾಗಿತ್ತು. ಆ ಪ್ರಕಾರ ಸ್ಥಳ ನಿಗದಿ ಮಾಡಲಾಗಿದೆ. ನಗರಕ್ಕೆ ಸಮೀಪ ಜಮೀನು ಸಿಗುವುದು ಕಷ್ಟ. ಹೀಗಾಗಿ ಸ್ಥಳ ನಿಗದಿಗೆ ಪ್ರತಿಷ್ಠೆ ಬೇಡ. ಶಿಕ್ಷಣ ವ್ಯವಸ್ಥೆ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು. ಸ್ಥಳೀಯ ರೈತರು ಸ್ವ ಇಚ್ಛೆಯಿಂದ ಜಮೀನು ನೀಡಿದರೆ ಮಾತ್ರ ಖರೀದಿಸಲಾಗತ್ತದೆ. ಆದರೆ, ಜಮೀನು ನೀಡುವಂತೆ ಯಾರನ್ನೂ ಒತ್ತಾಯಿಸುವುದಿಲ್ಲ ಎಂದು ಅವರು ತಿಳಿಸಿದರು.
ರಾಜಕೀಯ ಚರ್ಚೆ ಬೇಡ: ವಿಶ್ವ ವಿದ್ಯಾಲಯದ ಸ್ಥಾಪನೆಗೆ ನಿಗದಿಪಡಿಸಿರುವ ಸ್ಥಳದಲ್ಲಿಯೇ ನಡೆಯುತ್ತಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆ ರದ್ದು ಆಗುವುದಿಲ್ಲ. ಆದರೆ, ಪರ್ಯಾಯ ವ್ಯವಸ್ಥೆ ಬಗ್ಗೆ ಪರಿಶೀಲಿಸಲು ಅವಕಾ ಶಗಳಿವೆ. ಜಮೀನು ವಿಚಾರವಾಗಿ ರಾಜಕೀಯ ಚರ್ಚೆ ಮಾಡುವುದಿಲ್ಲ. ಪ್ರಸ್ತಾವಿತ ಜಮೀನಿನಲ್ಲಿರುವ ಮಲ್ಲಯ್ಯಜ್ಜನ ದೇವಸ್ಥಾನವನ್ನೂ ಅಭಿವೃದ್ಧಿ ಪಡಿಸಲಾಗುವುದು ಎಂದು ಗ್ರಾಮಸ್ಥರಿಗೆ ಡಿಸಿಎಂ ಅಶ್ವತ್ಥನಾರಾಯಣ ಭರವಸೆ ನೀಡಿದರು.
ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಡಿಸಿ ಎಂ.ಜಿ. ಹಿರೇಮಠ, ವಿವಿ ಕುಲಪತಿ ಪ್ರೊ.ರಾಮಚಂದ್ರಗೌಡ, ಕುಲಸಚಿವ ಪ್ರೊ. ಬಸವರಾಜ ಪದ್ಮಶಾಲಿ, ಹಣಕಾಸು ಅಧಿಕಾರಿ ಡಿ.ಎನ್.ಪಾಟೀಲ, ಪ್ರೊ. ಎಸ್.ಎಂ.ಹುರಕಡ್ಲಿ, ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ.ಆನಂದ ಹೊಸೂರ, ಎಚ್.ಎಸ್. ಶಿಗ್ಗಾಂವ, ಉಪವಿಭಾಗಾಧಿಕಾರಿ ಅಶೋಕ ತೇಲಿ, ತಹಸೀಲ್ದಾರ್ ಆರ್.ಕೆ. ಕುಲಕರ್ಣಿ, ಗ್ರಾಮಸ್ಥರಾದ ವೈಜನಾಥಗೌಡ ಪಾಟೀಲ, ಉಳವಪ್ಪ ನಂದಿ, ಬಸವಣ್ಣೆಪ್ಪ ಗಾಣಗಿ, ಎನ್.ಎಸ್. ಪಾಟೀಲ, ಪಡಿಗೌಡ ಪಾಟೀಲ, ಯಲ್ಲಪ್ಪ ಧರೆಣ್ಣವರ, ಮಂಜುನಾಥ ವಸ್ತ್ರದ ಇತರರು ಇದ್ದರು.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಮರ್ಥ ನಾಯಕತ್ವದಲ್ಲಿ ಉತ್ತಮ ಆಡಳಿತ ಕೊಡುತ್ತಿದ್ದೇವೆ. ಹೀಗಾಗಿ ಮುಂಬರುವ ಬೆಳಗಾವಿ ಲೋಕಸಾಭಾ ಉಪಚುನಾವಣೆಯಲ್ಲಿ ಪಕ್ಷದಿಂದ ಸಮರ್ಥರನ್ನೇ ನಿಲ್ಲಿಸಲಾಗುವುದು. ಮತದಾರರ ಆಶೀರ್ವಾದ ಬಿಜೆಪಿಗೆ ಇರುವುದರಿಂದ ಗೆಲುವು ನಮ್ಮದೇ ಆಗಲಿದೆ.| ಡಾ. ಸಿ.ಎನ್.ಅಶ್ವತ್ಥನಾರಾಯಣ, ಡಿಸಿಎಂ