ಜಿಲ್ಲೆ

ಎನ್.ಆರ್.ಪುರ ಪಟ್ಟಣ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ

ಎನ್.ಆರ್.ಪುರ: ತಾಲೂಕಿನ ಹೊನ್ನೇಕುಡಿಗೆ ಸಂಪರ್ಕ ಸೇತುವೆಯಿಂದ ಹಿಡಿದು ಅಗ್ರಹಾರದ ಸುಂಕದಕಟ್ಟೆವರೆಗೆ ಅಭಿವೃದ್ಧಿಗೆ 100 ಕೋಟಿ ಅನುದಾನ ತರಲಾಗಿದೆ ಎಂದು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.

ಹೊನ್ನೇಕುಡಿಗೆ ಸಂಪರ್ಕ ಸೇತುವೆ ಕಾಮಗಾರಿ ವೀಕ್ಷಿಸಿ ಮಾತನಾಡಿ, ಎನ್.ಆರ್.ಪುರದ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ಕೊಡುಗೆ ಅಪಾರ. 100 ಕೋಟಿ ಅನುದಾನವನ್ನು ಹಿಂದೆ ಶಾಸಕರಾದವರು, ಮಂತ್ರಿಯಾದವರು ಯಾರೂ ಕೂಡ ಇಷ್ಟು ಕೋಟಿಗಟ್ಟಲೆ ಅನುದಾನ ತಂದ ಇತಿಹಾಸವಿಲ್ಲ. ಸಿಎಂ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದೇ ಎನ್.ಆರ್.ಪುರಕ್ಕೆ ಅದೃಷ್ಟದಂತಾಗಿದೆ. ಪಟ್ಟಣದಲ್ಲಿ ಮೊದಲು ಶಾಲೆಗಳ ಅಭಿವೃದ್ಧಿಯಿಂದ ಪ್ರಾರಂಭವಾದ ಅಭಿವೃದ್ಧಿ ಕಾರ್ಯ ನಂತರ ದೇವಸ್ಥಾನ, ಚರ್ಚ್, ಮಸೀದಿ, ಸಮುದಾಯ ಭವನಗಳು ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದರು.

ಕಡಹಿನಬೈಲು ಏತ ನೀರಾವರಿ ಕಾಮಗಾರಿಗೆ ಸಿಎಂ ಅವರು 5 ಕೋಟಿ ಅನುದಾನದಿಂದ ಪ್ರಾರಂಭವಾದ ಕಾಮಗಾರಿ ನಂತರ 16 ಕೋಟಿ ತಲುಪಿತು, ಅದಕ್ಕೂ ಕೂಡ ಅನುದಾನ ಕೊರತೆಯಾಗದಂತೆ ನೀಡಿದ್ದರ ಲವಾಗಿ ಇಂದು ಕಡಹಿನಬೈಲು ಏತ ನೀರಾವರಿಯಿಂದ 69 ಕೆರೆಗಳು ತುಂಬುತ್ತಿವೆ. ಇದರಿಂದ ಈ ಭಾಗದ ರೈತರ ಬಾಳು ಹಸನಾಗಿದೆ. ಮುಳ್ಳಯನಗಿರಿ ಅಭಿವೃದ್ಧಿ, ಎನ್.ಆರ್.ಪುರದ ಹೊನ್ನೇಕುಡಿಗೆ ಸೇತುವೆ ಬಳಿ ರೆಸಾರ್ಟ್ ನಿರ್ಮಾಣ ಸೇರಿದಂತೆ ಜಿಲ್ಲೆಯಲ್ಲಿ ಒಂದು ತ್ರಿ ಸ್ಟಾರ್ ಹೋಟೆಲ್ ಸ್ಥಾಪಿಸುವ ಚಿಂತನೆ ನಡೆಸಲಾಗಿದೆ. ಶೀಘ್ರದಲ್ಲೇ ಎಲ್ಲವೂ ಅನುಮೋದನೆಯಾಗಲಿವೆ ಎಂಬ ಭರವಸೆ ಇದೆ ಎಂದರು.

ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ, ಮಾಜಿ ಸದಸ್ಯ ಸುನೀಲ್‌ಕುಮಾರ್, ಮುಖಂಡರಾದ ನಾರಾಯಣಮೂರ್ತಿ, ಗಾಂಧಿ ಗ್ರಾಮ ನಾಗರಾಜು ಇದ್ದರು.