ಕಾರವಾರ: ಜಿಲ್ಲೆಯಲ್ಲಿ ಒಟ್ಟಾರೆ ಕರೊನಾ ಸೋಂಕಿತರ ಸಂಖ್ಯೆ 10 ಸಾವಿರ ದಾಟಿದೆ. ಬುಧವಾರ ಒಂದೇ ದಿನ 462 ಹೊಸ ಕರೊನಾ ಸೋಂಕಿತರು ಪತ್ತೆಯಾಗಿದ್ದು, ಇದುವರೆಗಿನ ಒಟ್ಟಾರೆ ಸೋಂಕಿತರ ಸಂಖ್ಯೆ 10503 ಕ್ಕೆ ಏರಿಕೆಯಾಗಿದೆ. ಬುಧವಾರ 818 ಜನ ಗುಣವಾಗಿದ್ದು, ಒಟ್ಟಾರೆ ಗುಣವಾದವರ ಸಂಖ್ಯೆ 8173 ಕ್ಕೆ ಏರಿದೆ. 6 ಜನರು ಸಾವನ್ನಪ್ಪಿದ್ದು, ಒಟ್ಟಾರೆ ಕರೊನಾ ಸಾವಿನ ಸಂಖ್ಯೆ 121 ಕ್ಕೆ ಏರಿದೆ. 2215 ಸಕ್ರಿಯ ಪ್ರಕರಣಗಳಿವೆ.
ಕರೊನಾ ಪರೀಕ್ಷೆ ನಿರಾಕರಿಸುವಂತಿಲ್ಲ
ಕುಮಟಾ: ಆರೋಗ್ಯ ಇಲಾಖೆ ಯಾರನ್ನು ಮಹಾಮಾರಿ ಕರೊನಾ ಪರೀಕ್ಷೆ ಮಾಡುವ ನಿರ್ಧಾರ ಕೈಗೊಳ್ಳುತ್ತದೆಯೋ ಅವರು ನಿರಾಕರಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಜರೀಶಕುಮಾರ ತಿಳಿಸಿದರು.
ಅವರು ಬುಧವಾರ ಉಪವಿಭಾಗಾಧಿಕಾರಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಪರೀಕ್ಷೆಯನ್ನು ಕಾನೂನು ಭಯ ತೋರಿಸಿ ಮಾಡುವಂಥದ್ದಲ್ಲ. ಜನರನ್ನು ಪ್ರೀತಿ ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕಾಗುತ್ತದೆ. ನಮ್ಮ ಉದ್ದೇಶ ಒಂದೇ ಮಹಾಮಾರಿಯಿಂದ ಜನರ ಜೀವ ಉಳಿಸುವಂಥದ್ದಾಗಿದೆ. ಕರೊನಾ ತಪಾಸಣೆ ಹಾಗೂ ಕ್ವಾರಂಟೈನ್ ವಿಚಾರದಲ್ಲಿ ಸಾಕಷ್ಟು ನಿಯಮ ಸಡಿಲಿಕೆ ಮಾಡಲಾಗಿದೆ. ಸೋಂಕಿತರ ಎರಡನೇ ಹಂತದ ಸಂರ್ಪತರ ತಪಾಸಣೆ ಮಾತ್ರ ನಡೆದು ನೆಗೆಟಿವ್ ಬಂದರೆ 7 ದಿನಗಳ ಬಳಿಕ ಸಾರ್ವಜನಿಕವಾಗಿ ಅಡ್ಡಾಡಬಹುದಾಗಿದೆ. ಕೇವಲ ಆರೋಗ್ಯ ಇಲಾಖೆಗೆ ವರದಿ ಮಾಡಿಕೊಂಡರೆ ಸಾಕಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಚೆನ್ನಾಗಿ ತಪಾಸಣೆ ರಾಜಕ್ಕೆ ಮಾದರಿಯೆಂಬಂತೆ ನಡೆೆದಿದೆ. ಕಳೆದ 10 ದಿನಗಳಲ್ಲಿ ಕರೊನಾ ಮರಣ ಪ್ರಮಾಣವೂ ತೀರಾ ಕಡಿಮೆಯಾಗಿದೆ. ಮನುಷ್ಯ ಸಂಘಜೀವಿಯಾಗಿರುವದರಿಂದ ವೈಯಕ್ತಿಕ ಕಾಳಜಿಯ ಜೊತೆಗೆ ಸಮುದಾಯದ ಜಾಗೃತ ಕಾಳಜಿಯೂ ಸೋಂಕು ಪ್ರಸರಣ ತಡೆಯಲ್ಲಿ ಮಹತ್ವದ್ದಾಗುತ್ತದೆ. ಇಡೀ ರಾಜ್ಯದಲ್ಲೇ ಅತಿಹೆಚ್ಚು ಕರೊನಾ ಪರೀಕ್ಷೆ ಮಾಡಿದ್ದೇವೆ. ಲಕ್ಷಕ್ಕಿಂತ ಹೆಚ್ಚು ಪರೀಕ್ಷೆ ಮಾಡುವತ್ತ ಗಮನವಿದೆ. ಜನರ ಸಹಕಾರ ಬೇಕು ಎಂದರು. ಉಪವಿಭಾಗಾಧಿಕಾರಿ ಅಜಿತ್ ಎಂ.ರೈ ಇದ್ದರು.