ಕೆ.ಆರ್.ನಗರದಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಪ್ರಜಾಧ್ವನಿ-2 ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು. ಕೃಷಿ ಸಚಿವ ಚಲುರಾಯಸ್ವಾಮಿ, ಶಾಸಕ ಡಿ.ರವಿಶಂಕರ್, ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು), ದೊಡ್ಡಸ್ವಾಮೇಗೌಡ, ಬಿ.ಜೆ.ವಿಜಯ್‌ಕುಮಾರ್ ಇದ್ದರು. 
ಜಿಲ್ಲೆ

10 ವರ್ಷದಲ್ಲಿ ಬಿಜೆಪಿಯಿಂದ ಜನರಿಗೆ ಅನ್ಯಾಯ

ಲೋಕೇಶ್ ಮನು. ಡಿ

ಕೆ.ಆರ್.ನಗರ: ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ಮಾತ್ರ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಬಡವರು, ರೈತರು, ಶೋಷಿತರು, ಮಹಿಳೆಯರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರ ಪರವಾಗಿರುವ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.


ಪಟ್ಟಣದ ಡಾ.ರಾಜಕುಮಾರ್ ಬಾನಂಗಳದಲ್ಲಿ ಶನಿವಾರ ಕಾಂಗ್ರೆಸ್ ವತಿಯಿಂದ ಆಯೋಜಿಸಿದ ಪ್ರಜಾಧ್ವನಿ-2 ಕಾರ್ಯಕ್ರಮದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಪರ ಮತಯಾಚಿಸಿ ಮಾತನಾಡಿದರು. 10 ವರ್ಷದ ಅವಧಿಯಲ್ಲಿ ಕೇಂದ್ರ ಬಿಜೆಪಿ ಸರ್ಕಾರ ರೈತರು, ಬಡವರು, ಯುವಕರು, ಮಹಿಳೆಯರಿಗೆ ಏನು ಸಹಾಯ ಮಾಡಿಲ್ಲಿ. ಯಾವ ಮುಖ ಇಟ್ಟುಕೊಂಡು ಬಿಜೆಪಿ ನಾಯಕರು ರಾಜ್ಯಕ್ಕೆ ವೋಟು ಕೇಳಲು ಬರುತ್ತಿದ್ದಾರೆ? ಎಂದು ಜರಿದರು.


ದೇಶದಲ್ಲಿ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ, ರೈತರ ಸಾಲ ಮನ್ನಾ ಮಾಡುತ್ತೇವೆ ಎಂದೆಲ್ಲ ಹೇಳಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಇಲ್ಲಿಯವರೆಗೂ ಯಾವುದನ್ನು ಮಾಡಲಿಲ್ಲ. ಕರ್ನಾಟಕಕ್ಕೆ ತೆರಿಗೆ ಹಣ ಹಂಚಿಕೆ, ಬರಪರಿಹಾರದಲ್ಲಿ ಅನ್ಯಾಯ ಎಸಗಿದ್ದು, ಚುನಾವಣಾ ಸಂದರ್ಭದಲ್ಲಿ ಮಾತ್ರ ಮೋದಿಗೆ ಕರ್ನಾಟಕ ರಾಜ್ಯ ನೆನಪಾಗುತ್ತದೆ. ಅತಿವೃಷ್ಟಿ, ಬರಗಾಲ ಸಮಯದಲ್ಲಿ ಕರ್ನಾಟಕ ನೆನಪಾಗಲಿಲ್ಲವೆ? ನಿರುದ್ಯೋಗದ ಬಗ್ಗೆ ಪ್ರಶ್ನಿಸುವ ಯುವಕರಿಗೆ ಪಕೋಡ ಮಾರಿ ಎಂದು ಹೇಳುವ ಪ್ರಧಾನ ಮಂತ್ರಿ ಆ ಹುದ್ದೆಗೆ ಲಾಯಕ್ಕಲ್ಲ ಎಂದರು.


ಮನಮೋಹನ್ ಸಿಂಗ್ ಅವರ ಕಾಲದಲ್ಲಿ, ನನ್ನ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ನಿಮ್ಮ ಅವಧಿಯಲ್ಲಿ ರೈತರ ಸಾಲಮನ್ನಾ ಮಾಡಿ ಎಂದರೇ ನಾನೇನು ನೋಟು ಪ್ರಿಂಟ್ ಮಾಡುವ ಮಿಷನ್ ಇಟ್ಟುಕೊಂಡಿದ್ದೇನೆಯೇ ಎಂದಿರಿ. ನಿಮ್ಮ ಸರ್ಕಾರದ ಅವಧಿಯಲ್ಲಿ 600 ಭರವಸೆಯನ್ನು ನೀಡಿ 60 ಭರವಸೆಗಳನ್ನು ಈಡೇರಿಸಿಲ್ಲ, ನಾವು ಕಳೆದ ಅವಧಿಯಲ್ಲಿ 160ರಲ್ಲಿ 158 ಭರವಸೆ ಈಡೇರಿಸಿದ್ದೆವು. ಈ ಬಾರಿ ಚುನಾವಣಾ ಪೂರ್ವದಲ್ಲಿ ನೀಡಿದ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ ಎಂದು ತಿಳಿಸಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ವಾಚಾಮಗೋಚರವಾಗಿ ಬಿಜೆಪಿಗೆ ಬೈಯ್ಯುತ್ತಿದ್ದರು. ಮೋದಿ ಪ್ರಧಾನಿಯಾದರೇ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದರು. ಆದರೆ ಈಗ ನಾಚಿಗೆ ಇಲ್ಲದೆ ಮೂರು ಸೀಟಿಗಾಗಿ ಬಿಜೆಪಿ ಜತೆ ಹೋಗಿ ಅವರನ್ನೇ ಹೊಗಳುತ್ತಿದ್ದಾರೆ. ಅವರ ಜತೆ ನನಗೆ ಬೈಯ್ಯುತ್ತಿದ್ದಾರೆ. ಮಗ, ಅಳಿಯ, ಮೊಮ್ಮಗ ಚುನಾವಣೆಗೆ ನಿಂತಿದ್ದಾರೆ. ಕೋಲಾರ ಮೀಸಲು ಕ್ಷೇತ್ರ ಅಲ್ಲದಿದ್ದರೆ ಅಲ್ಲೂ ಇವರು ಕುಟುಂಬದ ಸದಸ್ಯನಿಗೆ ಟಿಕೆಟ್ ಕೊಡುತ್ತಿದ್ದರು. ರಾಜ್ಯಕ್ಕೆ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು.


ದೇವೇಗೌಡರಿಗೆ ಹೊಟ್ಟೆಕಿಚ್ಚು: ದೇವೇಗೌಡರು ತಮ್ಮ ಕುಟುಂಬದವರನ್ನು ಬಿಟ್ಟು ಬೇರೆ ಯಾರ ಬೆಳವಣಿಗೆಯನ್ನೂ ಸಹಿಸೋದಿಲ್ಲ. ಹೊಟ್ಟೆಕಿಚ್ಚು ಪಡುತ್ತಾರೆ. ನಾನು ಕುರುಬರ ಪರವಾಗಿಲ್ಲ. ಚೆಲುವರಾಯಸ್ವಾಮಿ, ಡಿ.ಕೆ.ಶಿವಕುಮಾರ್ ಒಕ್ಕಲಿಗರು ಅವರನ್ನು ಕಂಡರೂ ಇವರಿಗೆ ಸಹಿಸೋದಿಲ್ಲ. ದೇವೇಗೌಡರು, ಕುಮಾರಸ್ವಾಮಿ, ವಿಜೇಂದ್ರ ನಮ್ಮ ಸರ್ಕಾರ ಪತನ ಮಾಡುವ ಬಗ್ಗೆ ಪದೇಪದೆ ಮಾತನಾಡುತ್ತಾ ಹಗಲುಗನಸು ಕಾಣ್ತಿದ್ದಾರೆ. ನಿಮ್ಮ ಕನಸೂ ನನಸಾಗಲ್ಲ, ಆಗೋದಿಲ್ಲ. ನಮ್ಮ ಸರ್ಕಾರ ಐದು ವರ್ಷ ಇರುತ್ತೆ. ಮುಂದೆಯು ನಾವೇ ಅಧಿಕಾರಕ್ಕೆ ಬರುತ್ತೇವೆ. ನಮ್ಮ ಯೋಜನೆಗಳನ್ನುಮುಂದುವರೆಸುತ್ತೇವೆ ಎಂದರು.


ನನಗೆ ಗರ್ವವಿಲ್ಲ: ನಾನು ಸತ್ಯ ಹೇಳಿದರೆ ಸಿದ್ದರಾಮಯ್ಯನಿಗೆ ಗರ್ವವಿದೆ. ಅವರ ಗರ್ವ ಭಂಗ ಮಾಡುತ್ತೇವೆ ಎಂದು ಶಪಥ ಮಾಡಿರುವ ದೇವೇಗೌಡರೇ ನನಗೆ ಗರ್ವವೇ ಇಲ್ಲ. ಭಂಗ ಎಲ್ಲಿಂದ ಮಾಡುತ್ತೀರಿ ಎಂದರು. ಸತ್ಯ ಸುಳ್ಳಿನ ನಡುವೆ ನಡೆಯುತ್ತಿರುವ ಈ ಲೋಕಸಭಾ ಚುನಾವಣಾ ಹೋರಾಟದಲ್ಲಿ ಸತ್ಯದ ಪರವಾಗಿರುವ ಕಾಂಗ್ರೆಸ್ ಗೆಲ್ಲಬೇಕಿದೆ. ರಾಜ್ಯದ ಅಭಿವೃದ್ಧಿ ಮತ್ತು ಗ್ಯಾರಂಟಿ ಯೋಜನೆಗಳ ಜಾರಿಗಾಗಿ ನಮ್ಮ ಪಕ್ಷದ ಅಭ್ಯರ್ಥಿ ವೆಂಕಟರಮಣೇಗೌಡ ಅವರನ್ನು 30 ಸಾವಿರ ಲೀಡ್‌ನಲ್ಲಿ ಗೆಲ್ಲಿಸಿ ಎಂದು ಮತದಾರರಲ್ಲಿ ಕೋರಿದರು.
ಶಾಸಕ ಡಿ.ರವಿಶಂಕರ್ ಮಾತನಾಡಿ ವಿಧಾನಸಭಾ ಚುನಾವಣೆಯಲ್ಲಿ ಸೋತ ಸಾ.ರಾ.ಮಹೇಶ್ ಈಗ ಕ್ಷೇತ್ರಕ್ಕೆ ಬಂದು ನಮ್ಮ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಮ್ಮದು ಭಿಕ್ಷೆ ಬೇಡುವ ವಂಶವಲ್ಲ. ಅದು ನಿಮ್ಮ ಜಾಯಮಾನದಲ್ಲಿ ಇರಬೇಕೇನೋ ಅಷ್ಟೇ. ನಾವು ಎರಡು ಬಾರಿ ಚುನಾವಣೆಯಲ್ಲಿ ಸೋತರು ಕೂಡ ಕ್ಷೇತ್ರ ಬಿಟ್ಟಿಲ್ಲ. ಜನರ ನಡುವೆ ಇದ್ದು ಸೇವೆ ಮಾಡಿ ಆಯ್ಕೆಯಾಗಿದ್ದೇನೆ ಎಂದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ನಾನು ವಿಷದ ಬಾಟಲ್ ಹಿಡಿದು ಕೊಂಡು ಮತಯಾಚನೆ ಮಾಡಿ ಗೆದ್ದಿದ್ದಾರೆ ಎಂದು ಆರೋಪಿಸಿದ್ದಾರೆ. ಜನರ ಕಾಲಿಗೆ ಬಿದ್ದು ಜನಾಶೀರ್ವಾದದಿಂದ ಗೆದ್ದಿದ್ದೇನೆಯೇ ಹೊರತು ವಿಷದ ಬಾಟಲ್ ನಿಂದಲ್ಲ. ನನಗೆ ಗಿಮಿಕ್ ರಾಜಕಾರಣ ಬರುವುದಿಲ್ಲ ಎಂದು ಟಾಂಗ್ ನೀಡಿದರು.
ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಮಾತನಾಡಿ, ನಾನು ಮಂಡ್ಯ ಜಿಲ್ಲೆಯ ಸ್ಥಳೀಯನೇ ಆಗಿದ್ದು, ರಾಜಕಾರಣ ನನಗೇನು ಹೊಸದಲ್ಲ. ಪಕ್ಷದ ನಾಯಕರ ಒಮ್ಮತದ ಅಭ್ಯರ್ಥಿಯಾಗಿದ್ದೇನೆ. ಆದ್ದರಿಂದ ನಿಮ್ಮಲ್ಲೆರ ಸೇವೆ ಮಾಡಲು ನನಗೆ ಹೆಚ್ಚಿನ ಮತ ನೀಡಿ ಆಶೀರ್ವದಿಸಿ ಎಂದು ಮನವಿ ಮಾಡಿದರು.

ಕೃಷಿ ಸಚಿವ ಚಲುವರಾಸ್ವಾಮಿ ಮಾತನಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಳವಳ್ಳಿ ಶಿವಣ್ಣ, ಕಾರ್ಯಕಾರಣಿ ಸದಸ್ಯ ದೊಡ್ಡಸ್ವಾಮೇಗೌಡ, ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಜಿಪಂ ಮಾಜಿ ಸದಸ್ಯ ಚಿಬುಕಳ್ಳಿ ಸುಬ್ಬಯ್ಯ, ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ಮಹಿಳಾ ಘಟಕದ ಅಧ್ಯಕ್ಷರಾದ ರಾಣಿ, ಲತಾ, ಪಕ್ಷ ವಕ್ತಾರ ಸೈಯದ್ ಜಾಬೀರ್, ನಗರಾಧ್ಯಕ್ಷ ಎಂಜೆ.ರಮೇಶ್, ಮುಖಂಡರಾದ ಕಲ್ಲಹಳ್ಳಿ ಶ್ರೀನಿವಾಸ್, ಚೀರ‌್ನಹಳ್ಳಿ ಶಿವಣ್ಣ, ಕೃಷ್ಣರಾಜೇ ಅರಸ್, ಸುನಿತಾ ರವಿಶಂಕರ್ ಇದ್ದರು.