ನಾಗಮಂಗಲ: ಪಟ್ಟಣದ ಜೂನಿಯರ್ ಕಾಲೇಜಿನಲ್ಲಿ ನನ್ನ ಆಡಳಿತ ಅವಧಿ ಹೊರತುಪಡಿಸಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. 10 ವರ್ಷಗಳ ಅವಧಿಯಲ್ಲಿ ಕಾಲೇಜಿನಲ್ಲಿರಲಿ ಇಡೀ ತಾಲೂಕಿನಲ್ಲಿ ಒಂದು ಕಲ್ಲುಚಪ್ಪಡಿಯೂ ಬದಲಾಗಿಲ್ಲ ಎಂದು ಸಚಿವ ಎನ್.ಚಲುವರಾಯಸ್ವಾಮಿ ಅವರು ಮಾಜಿ ಶಾಸಕ ಸುರೇಶ್‌ಗೌಡರ ಅವರನ್ನು ಪರೋಕ್ಷವಾಗಿ ಟೀಕಿಸಿದರು.
ಪಟ್ಟಣದ ಜೂನಿಯರ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕಾಲೇಜಿನ ಪ್ರೌಢಶಾಲೆ ವಿಭಾಗದ ಅಮೃತ ಮಹೋತ್ಸವ ಹಾಗೂ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೂನಿಯರ್ ಕಾಲೇಜಿನಲ್ಲಿ ಈ ಹಿಂದೆ ಮೂಲ ಸೌಲಭ್ಯಗಳಿರಲಿಲ್ಲ. ನಾನು ಎರಡು ಬಾರಿ ಶಾಸಕನಾದ ಸಂದರ್ಭದಲ್ಲಿ ಕೊಠಡಿಗಳು, ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಜತೆಗೆ ಕೆಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿತ್ತು. ಅಂದಿನಿಂದ ಈವರೆಗೂ ಯಾವುದೇ ಬದಲಾವಣೆಯಾಗಿಲ್ಲ. ಕಾಲೇಜನ್ನು ಸಂಪೂರ್ಣ ಅಭಿವೃದ್ಧಿಪಡಿಸಲು ಅಂದಾಜು 40 ಲಕ್ಷ ರೂ.ಅಗತ್ಯವಿದೆ. ಅದನ್ನು ಒದಗಿಸಿಕೊಡುವ ಜವಾಬ್ದಾರಿ ನನ್ನದು. 5 ವರ್ಷದೊಳಗೆ ಖಾಸಗಿ ಕಾಲೇಜುಗಳನ್ನು ಮೀರಿಸುವಂತೆ ಅಭಿವೃದ್ಧಿಪಡಿಸುತ್ತೇನೆ ಎಂದರು.
ಶಾಲಾ-ಕಾಲೇಜುಗಳು ದೇವಾಲಯಗಳಂತಿದ್ದು ವಾತಾವರಣ ಚೆನ್ನಾಗಿರಬೇಕು. ಶಿಕ್ಷಕರು ಸಂಸ್ಕಾರಯುತ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡಬೇಕು ಎಂದರು.
ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್, ತಾಪಂ ಇಒ ಚಂದ್ರಮೌಳಿ, ಬಿಇಒ ಸುರೇಶ್, ಮಂಡ್ಯ ಡಯಟ್ ಪ್ರಾಂಶುಪಾಲ ಪುರುಷೋತ್ತಮ್, ಕಾಲೇಜಿನ ಪ್ರಾಂಶುಪಾಲ ಎಂ.ಶಿವಪ್ಪ, ಉಪಪ್ರಾಂಶುಪಾಲ ರಮೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಧನಂಜಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ನೇತ್ರಾವತಿ, ನಿವೃತ್ತ ಪ್ರಾಂಶುಪಾಲ ಕೃಷ್ಣೇಗೌಡ, ಉಪನ್ಯಾಸಕರಾದ ಚಂದ್ರಶೇಖರ್, ಶುಭಾ ಇದ್ದರು.
ಕ್ರೀಡಾಕೂಟ: ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಹಿರಿಯ ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು. ಮಕ್ಕಳು ಪ್ರಾಥಮಿಕ ಶಾಲಾ ಹಂತದಲ್ಲಿಯೇ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ. ಉನ್ನತ ಶಿಕ್ಷಣಕ್ಕೆ ಹಾಗೂ ಉದ್ಯೋಗಕ್ಕೆ ಕ್ರೀಡೆ ಸಹಕಾರಿಯಾಗಲಿದೆ ಎಂದರು.