ಜಿಲ್ಲೆ

10 ವರ್ಷಗಳ ಅಭಿವೃದ್ಧಿ ಕಾಮಗಾರಿ ತನಿಖೆಗೆ ಆಗ್ರಹ

ಮಳವಳ್ಳಿ: ಮಳವಳ್ಳಿ ಕ್ಷೇತ್ರದಲ್ಲಿ ಪ್ರಸ್ತುತ ನನ್ನ ಅವಧಿ ಸೇರಿದಂತೆ 10 ವರ್ಷಗಳ ಹಿಂದೆ ಮಾಜಿ ಶಾಸಕರ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ತನಿಖೆಗೆ ಒಳಪಡಿಸಲು ನಾನೇ ಲೋಕಾಯುಕ್ತಕ್ಕೆ ದೂರು ನೀಡುತ್ತೇನೆ ಎಂದು ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.


ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣವನ್ನು 1 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
2004 ರಲ್ಲಿ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದಾಗ 20 ತಿಂಗಳ ಸಮ್ಮಿಶ್ರ ಸರ್ಕಾರದ ಕುಮಾರಸ್ವಾಮಿ ಸಿಎಂ ಆಗಿದ್ದ ಸಂದರ್ಭದಲ್ಲಿ ನೂರಾರು ಕಾಮಗಾರಿಗಳನ್ನು ತಾಲೂಕಿಗೆ ತಂದಿರುವ ಇತಿಹಾಸವಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮಾಜಿ ಶಾಸಕ ನರೇಂದ್ರಸ್ವಾಮಿ, 2008 ರ ಚುನಾವಣೆಯಲ್ಲಿ ಲಕ್ಷಗಳಲ್ಲಿದ್ದ ಆದಾಯಯನ್ನು 2013 ರ ಹೊತ್ತಿಗೆ 12 ಕೋಟಿ ರೂ. ತೋರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.


ನಾನೊಬ್ಬ ಸಾಹಿತಿಯಾಗಿ ನನ್ನ ಜೀವನವೇ ಸರಳ, ಸಜ್ಜನಿಕೆಯಿಂದ ಕೂಡಿರುವುದರ ಜತೆಗೆ ತೆರೆದ ಪುಸ್ತಕದಂತೆ ಜನರ ನಡುವೆ ಇದ್ದುಕೊಂಡು ಸಮಾನತೆಯ ಆಡಳಿತ ನಡೆಸಿದ್ದೇನೆ. ಅಭಿವೃದ್ಧಿಯ ಹೆಸರಿನಲ್ಲಿ ಭ್ರಷ್ಟಚಾರ ಮಾಡಿಲ್ಲ. ಸರ್ಕಾರದ ಯಾವ ತನಿಖಾ ಸಂಸ್ಥೆಗಳಿಂದ ಬೇಕಾದರೂ ನನ್ನ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡು ತನಿಖೆ ನಡೆಸಲು ನಾನೇ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. 596 ಕೋಟಿ ರೂ. ಹನಿ ನೀರಾವರಿ ಯೋಜನೆ ಹಾಗೂ ಕೋಟ್ಯಂತರ ರೂ. ಅನುದಾನದ ಕೆರೆಗಳ ಹೂಳೆತ್ತುವ ಕಾಮಗಾರಿಯಲ್ಲಿ ಯಾರು ಎಷ್ಟು ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂಬುದು ತಿಳಿದಿಲ್ಲವೇ ಎಂದು ಪ್ರಶ್ನಿಸಿದರು.


ಪುರಸಭೆ ಅಧ್ಯಕ್ಷೆ ರಾಧಾನಾಗರಾಜು , ಉಪಾಧ್ಯಕ್ಷ ಪ್ರಶಾಂತ, ಸದಸ್ಯರಾದ ಟಿ.ನಂದಕುಮಾರ್, ಸಿದ್ದರಾಜು, ಕುಮಾರ, ಪುಟ್ಟಸ್ವಾಮಿ, ನೂರುಲ್ಲಾ, ಪ್ರಮಿಳಾ, ಮುಖಂಡರಾದ ಮಲ್ಲೇಗೌಡ, ಮುತ್ತುರಾಜು, ಸಂತೋಷ್ ಸೇರಿದಂತೆ ಇತರರಿದ್ದರು.