ಜಿಲ್ಲೆ

10 ಲಕ್ಷ ಜನರಿಂದ ಬೌದ್ಧ ಮಹಾದೀಕ್ಷೆ

ಬೀದರ್: ವಿಶ್ವ ಬುದ್ಧ ಧಮ್ಮ ಸಂಘದಿಂದ 65ನೇ ವಾರ್ಷಿಕ ಧಮ್ಮ ಪರಿವರ್ತನ ದಿನ ನಿಮಿತ್ತ ಬರುವ ಅಕ್ಟೋಬರ್ 14ರಂದು 10 ಲಕ್ಷ ಜನರ ಮಹಾದೀಕ್ಷಾ ಸಮಾರಂಭ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಪ್ರಧಾನ ಸಂಚಾಲಕ ಡಾ.ವೆಂಕಟಸ್ವಾಮಿ ಹೇಳಿದರು.

ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ಬೌದ್ಧ ಧರ್ಮ ದೀಕ್ಷೆ ಪಡೆದು ಅಕ್ಟೋಬರ್ 14ಕ್ಕೆ 65 ವರ್ಷವಾಗಲಿದೆ. ಹೀಗಾಗಿ ಅಂದು ಬೃಹತ್ ದೀಕ್ಷಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಶ್ವದ ಎಲ್ಲ ಭಾಗಗಳಿಂದ ಬೌದ್ಧ ಅನುಯಾಯಿಗಳು ನಾಗಪುರ ಕ್ಷೇತ್ರಕ್ಕೆ ಬಂದು ಪ್ರತಿ ಅಕ್ಟೋಬರ್ 14ಕ್ಕೆ ಧಮ್ಮ ಜನಸ್ತೋಮವನ್ನು ಕಣ್ತುಂಬಿಕೊಳ್ಳುತ್ತಾರೆ. ಅಂಬೇಡ್ಕರ್ ಅವರ ಧಮ್ಮ ದರ್ಶನವು ಭಾರತದಲ್ಲಿನ ಶೋಷಿತ, ತುಳಿತಕ್ಕೆ ಒಳಗಾದವರಿಗೆ ಮಾರ್ಗದರ್ಶನವಾಗಲಿದೆ. ಅಲ್ಲದೆ ನವ ಬೌದ್ಧಯಾನದ ಕ್ರಾಂತಿಗೆ ದಾರಿ ಮಾಡಿಕೊಟ್ಟಿದೆ. ಕರ್ನಾಟಕದಿಂದಲೂ ಲಕ್ಷಾಂತರ ಅಂಬೇಡ್ಕರ್ ಅನುಯಾಯಿಗಳು ನಾಗಪುರದ ದೀಕ್ಷಾ ಭೂಮಿಗೆ ಹೋಗಿ ಬಂದಿದ್ದಾರೆ. ಇದರ ಪ್ರಭಾವದಿಂದ ಅಂಬೇಡ್ಕರ್ ಅವರ ಕನಸು ನನಸು ಮಾಡಲು ಬುದ್ಧ ಧಮ್ಮ ಸಂಘದಿಂದ ಮಹಾದೀಕ್ಷಾ ಆಯೋಜಿಸಲಾಗಿದೆ ಎಂದರು.

1954ರಲ್ಲಿ ಅಂಬೇಡ್ಕರ್ ಅವರಿಗೆ ಅಂತಾರಾಷ್ಟ್ರೀಯ ಬೌದ್ಧ ಅಧ್ಯಯನ ಕೇಂದ್ರ ತೆರೆಯಲು ಮೈಸೂರಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಅರಮನೆ ಮೈದಾನದಲ್ಲಿ 5 ಎಕರೆ ಜಮೀನು ದಾನವಾಗಿ ನೀಡಿದ ಧಮ್ಮ ಭೂಮಿಯಲ್ಲಿ ನಾಗಸೇನ ಬುದ್ಧ ವಿಹಾರ ಮತ್ತು ವಿದ್ಯಾಲಯ ಸ್ಥಾಪನೆಯಾಗಿದೆ. ಈ ನಾಗಸೇನ ಬುದ್ಧ ವಿಹಾರವು ಬರುವ ಅಕ್ಟೋಬರ್ 14ರ ಮಹಾ ಸಮಾವೇಶಕ್ಕೆ ಕೇಂದ್ರವಾಗಿ ಕೆಲಸ ಮಾಡಲಿದೆ ಎಂದರು.

ಮಹಾದೀಕ್ಷೆ ಪೂರ್ವಸಿದ್ಧತೆಗಾಗಿ ರಾಜ್ಯದ ಎಲ್ಲ ಭಾಗಗಳಲ್ಲಿ ಸಭೆ ನಡೆಸಲಾಗುತ್ತಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿನ ಬೌದ್ಧ ಧಮ್ಮ ಅನುಯಾಯಿಗಳ ದೀಕ್ಷಾ ಸಮಾರಂಭ ಫೆ.28ರಂದು ಬೆಳಗ್ಗೆ 11.30ಲ್ಲೆ ಯಾದಗಿರಿ ಜಿಲ್ಲೆಯ ಶಹಾಪುರನ ಬುದ್ಧ ಮಂದಿರ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಸಮತಾ ಸೈನಿಕ ದಳದ ರಾಜ್ಯ ಉಪಾಧ್ಯಕ್ಷ ನಾಗೇಂದ್ರ ದಂಡೆ, ಭಾರತೀಯ ಬೌದ್ಧ ಮಹಾಸಭಾದ ಬಾಬು ಆಣದೂರೆ, ಧಮ್ಮ ಸಂಘದ ಜಿಲ್ಲಾ ಸಂಚಾಲಕ ಮಾರುತಿ ಕಂಟಿ ಇತರರಿದ್ದರು.

ನಾವು ಯಾವುದೇ ಧರ್ಮದ ವಿರೋಧಿಗಳಲ್ಲ. ಯಾವ ಧರ್ಮದಲ್ಲಿ ಸಮಾನತೆ, ಸಹೋದರತ್ವ ಮತ್ತು ಮಾನವೀಯತೆ ಇರುತ್ತದೆ ಆ ಧರ್ಮ ಅನುಸರಿಸಬೇಕು. ಅದುವೇ ಬೌದ್ಧ ಧರ್ಮವಾಗಿದೆ. 2022ನೇ ಜನಗಣತಿಯಲ್ಲಿ ನವ ಬೌದ್ಧರ ಸಂಖ್ಯೆ ಹೆಚ್ಚಿನ ರೀತಿಯಲ್ಲಿ ನೋಂದಣಿ ಮಾಡುವ ಉದ್ದೇಶದಿಂದ 10 ಲಕ್ಷ ಜನರ ಧಮ್ಮ ದೀಕ್ಷೆ ಸಮಾರಂಭ ಆಯೋಜಿಸಲಾಗಿದೆ.| ಡಾ.ವೆಂಕಟಸ್ವಾಮಿವಿಶ್ವ ಬುದ್ಧ ಧಮ್ಮ ಸಂಘದ ಪ್ರಧಾನ ಸಂಚಾಲಕ