ಚಾಮರಾಜನಗರ: ಜಿಲ್ಲೆಯ ಸಾರ್ವಜನಿಕರು ದಿನನಿತ್ಯದ ವಹಿವಾಟುಗಳಲ್ಲಿ 10 ರೂ. ನಾಣ್ಯಗಳನ್ನು ಬಳಸಬೇಕು. ಈ ಸಂಬಂಧ ಇರುವ ಆಧಾರ ರಹಿತ ವದಂತಿಗಳಿಗೆ ಕಿವಿಗೊಡಬಾರದೆಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮನವಿ ಮಾಡಿದ್ದಾರೆ.
10 ರೂ. ಬೆಲೆಯ ನಕಲಿ ನಾಣ್ಯಗಳು ಚಾಲ್ತಿಯಲ್ಲಿವೆ ಎಂಬ ವದಂತಿಗಳು ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ತಪ್ಪು ಮಾಹಿತಿಯಿಂದಾಗಿ ಜನಸಾಮಾನ್ಯರು 10 ರೂ. ನಾಣ್ಯಗಳನ್ನು ಸ್ವೀಕರಿಸಲು ಹಿಂಜರಿಯುತ್ತಿರುವುದು ಗಮನಕ್ಕೆ ಬಂದಿದೆ. 10 ರೂ. ನಾಣ್ಯವು ರಿಸರ್ವ್ ಬ್ಯಾಂಕ್ ನೀಡಿದ ಕಾನೂನು ಬದ್ದ ಮತ್ತು ದೇಶಾದ್ಯಂತ ಬಳಕೆಗೆ ಮಾನ್ಯವಾಗಿರುತ್ತದೆ ಎಂದು ಸ್ಪಷ್ಟ ಪಡಿಸುತ್ತಿದ್ದೇವೆ. ಎಲ್ಲಾ ರಾಜ್ಯಗಳಲ್ಲಿ ದೈನಂದಿನ ವಹಿವಾಟುಗಳಲ್ಲಿ ಈ ನಾಣ್ಯವನ್ನು ಸ್ವೀಕರಿಸಲಾಗುತ್ತಿದೆ ಮತ್ತು ಬಳಸಲಾಗುತ್ತಿದೆ.
ಸಾರ್ವಜನಿಕರು ದಿನನಿತ್ಯದ ವಹಿವಾಟುಗಳಲ್ಲಿ 10 ರೂ. ನಾಣ್ಯಗಳನ್ನು ಬಳಸುವುದನ್ನು ಮುಂದುವರಿಸಬೇಕು. ಸಾಮಾನ್ಯ ಆರ್ಥಿಕ ಚಟುವಟಿಕೆ ಅಡ್ಡಿಪಡಿಸುವ ಆಧಾರ ರಹಿತ ವದಂತಿಗಳಿಗೆ ಕಿವಿಗೊಡಬಾರದು. ಜಿಲ್ಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ಕಂಡಕ್ಟರ್, ಆಟೋ ಚಾಲಕರು, ಹೋಟೆಲ್, ರೆಸ್ಟೋರೆಂಟ್, ಇಂದಿರಾ ಕ್ಯಾಂಟೀನ್, ಆಸ್ಪತ್ರೆ, ಮೆಡಿಕಲ್ ಶಾಪ್, ಚಲನಚಿತ್ರಮಂದಿರ, ಬೀದಿ ವ್ಯಾಪಾರಿಗಳು, ಖಾಸಗಿ ಸಂಶ್ಥೆಗಳು ಸೇರಿದಂತೆ ಎಲ್ಲಾ ಸಂಬಂಧಿತ ಸಂಸ್ಥೆಗಳು 10 ರೂ. ನಾಣ್ಯವನ್ನು ಸ್ವೀಕರಿಸಬೇಕು ಮತ್ತು ಚಲಾವಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.