ಜಿಲ್ಲೆ

10 ರಂದು ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮರಥೋತ್ಸವ

ಚಾಮರಾಜನಗರ: ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಶ್ರೀ ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮರಥೋತ್ಸವವು ಮೇ 10ರಂದು ನಡೆಯಲಿದ್ದು, ರಥೋತ್ಸವದ ಅಂಗವಾಗಿ ವಿವಿಧ ಪೂಜೆ ಕೈಂಕರ್ಯಗಳು ಜರುಗಲಿವೆ.

ಮೇ 9ರಂದು ಹಗಲು ಪಲ್ಲಕ್ಕಿ ಉತ್ಸವ ಸಂಜೆ 7 ಗಂಟೆಗೆ ಸಿಂಹ ವಾಹನ ಗಜೇಂದ್ರಮೋಕ್ಷ, ಆನೆ ವಾಹನ ನಡೆಯಲಿದೆ. ಮೇ 10ರಂದು ನಿತ್ಯರಾಧನೆ ಬೆಳಿಗ್ಗೆ 4.30 ಗಂಟೆಗೆ ಕಲ್ಯಾಣೋತ್ಸವ, 6 ಗಂಟೆಯ ನಂತರ ಪ್ರಸ್ಥಾನ ಮಂಟಪೋತ್ಸವಗಳು, ನಂತರ ಬೆಳಗ್ಗೆ 11.02 ರಿಂದ 11.15 ಗಂಟೆಯೊಳಗೆ ರಥಾರೋಹಣ ನಂತರ ಶ್ರೀಮಾನ್ ಮಹಾರಥೋತ್ಸವ ಜರುಗಲಿದೆ. ನಂತರ ಮಂಟಪೋತ್ಸವಗಳು ರಾತ್ರಿ ತೇರಡಿ ಉತ್ಸವ, ಆಂಜನೇಯಾರೋಹಣ ಮಹೋತ್ಸವ ನಡೆಯಲಿದೆ.

ಮೇ 11ರಂದು ಬೆಳಗ್ಗೆ 11 ಗಂಟೆಗೆ ಗರುಡೋತ್ಸವ ಸೇವೆಗಳು, ಸಂಜೆ 6 ಗಂಟೆಗೆ ರಾಸ ಕ್ರೀಡೋತ್ಸವ ನಂತರ ಪ್ರಹ್ಲಾದೋತ್ಸವ ರಾತ್ರಿ 8.30 ಗಂಟೆಗೆ ಶಾಂತೋತ್ಸವ, ಮಂಟಪೋತ್ಸವ ಶಯನೋತ್ಸವ ಸೇವೆ, 12ರಂದು ಬೆಳಿಗ್ಗೆ ಕುದುರೆ ವೈಯಾಳಿ ಉತ್ಸವ, ನಂತರ ಅವಕೃತ ಮಂಗಳಸ್ನಾನ, ಸಾಯಂಕಾಲ ಧ್ವಜಾವರೋಹಣ, ಅನಂತರ ನರಾಂದೋಳಿಕಾರೋಹಣ ಮಹೋತ್ಸವ, 13ರಂದು ರಾತ್ರಿ ಶ್ರೀಯವರಿಗೆ ಗಂಧಾಭಿಷೇಕ, ಅಮ್ಮನವರಿಗೆ ಹರಿದ್ರಾ ಕುಂಕುಮ ಚೂರ್ಣ ಅಲಂಕಾರ ಮಹೋತ್ಸವ, ದ್ವಾದಶ ತಿರುವಾರಾಧನೆ, ಪುಷ್ಪಯಾಗೋತ್ಸವ ಚಂದ್ರ ಮಂಡಲೋತ್ಸವ, ಮಂಟಪೋತ್ಸವ, ಮಹಾಮಂಗಳಾರತಿ, ಅನಂತರ 12 ಪ್ರಾಕಾರ ಉತ್ಸವಗಳು ನಡೆಯಲಿವೆ.

ಮೇ 14ರಂದು ಬೆಳಿಗ್ಗೆ ಮಹಾಭಿಷೇಕವೆಂಬ ಸಹಸ್ರ ಕಳಶಾಭಿಷೇಕ ಮಹೋತ್ಸವ ನಂತರ ಮಹಾಪ್ರಸಾದ ವಿನಿಯೋಗ. 15ರಂದು ಶ್ರೀಯವರಿಗೆ ಆಯಾಸಪರಿಹಾರ ರೂಪ ಕೋಟೆ ತಿರುನಾಳೆಂಬ ವೈಮಾಳಿಹೆ ಉತ್ಸವ, 16ರಂದು ಶ್ರೀಯವರಿಗೆ ವೈಮಾಳಿಹೆ ಉತ್ಸವ ಮಂಟಪೋತ್ಸವ, ಮಂಗಳಾರತಿ ಹಾಗೂ 17ರಂದು ಶ್ರೀಯವರಿಗೆ ವೈಮಾಳಿಹೆ ಉತ್ಸವ ಮಂಟಪೋತ್ಸವ, ಮಂಗಳಾರತಿ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.