ಜಿಲ್ಲೆ

10 ದಿನದಲ್ಲಿ ಬರ ಪರಿಹಾರ ಫಲಾನುಭವಿಗಳ ನೋಂದಣಿ ಆಗಬೇಕು:ಸಚಿವ ಕೃಷ್ಣ ಬೈರೇಗೌಡ

ಹಾಸನ: ರಾಜ್ಯದಲ್ಲಿ ಬರಗಾಲವಿದ್ದು ಬೆಳೆ ಹಾನಿ ಸಮೀಕ್ಷೆ ಮುಗಿದಿದ್ದು, ಇನ್ನೇನು ರೈತರಿಗೆ ಪರಿಹಾರ ವಿತರಣೆ ಮಾಡಬೇಕಿದೆ. ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾದ ಮಾಹಿತಿಯಂತೆ ಏಕಕಾಲಕ್ಕೆ ನೇರವಾಗಿ ರೈತರ ಖಾತೆಗೆ ಹಣ ಜಮೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿಯ ಹೊಯ್ಸಳ ಸಭಾಂಗಣದಲ್ಲಿ ಶುಕ್ರವಾರ ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬೆಳೆ ಹಾನಿ ಪರಿಹಾರ ಸಂಬಂಧ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ನಿಖರ ಮಾಹಿತಿ ನೋಂದಣಿ ಮಾಡುವಲ್ಲಿ ಜಿಲ್ಲೆಯ ಅಧಿಕಾರಿಗಳು ತೀರಾ ಹಿಂದೆ ಉಳಿದಿದ್ದಾರೆ. ನೋಂದಣಿ ಆರಂಭವಾಗಿ ಎರಡು ತಿಂಗಳು ಕಳೆದರೂ ಇನ್ನೂ ಸಾವಿರ ಲೆಕ್ಕದಲ್ಲಿ ಮಾತ್ರ ನೋಂದಣಿಯಾಗಿದೆ. ಇದು ನಾಚಿಕೆಗೇಡಿನ ಸಂಗತಿ ಎಂದು ಅಧಿಕಾರಿಗಳ ಕಾರ್ಯಕ್ಷಮತೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದೆ ಬರ ಪರಿಹಾರ ವಿತರಣೆಯಲ್ಲಿ ಸಾಕಷ್ಟು ಮೋಸ, ಅನ್ಯಾಯಗಳು ನಡೆದಿವೆ. ಗ್ರಾಮ ಲೆಕ್ಕಿಗರು ತಮಗೆ ಬೇಕಾದವರ ಹೆಸರನ್ನು ಮಾತ್ರ ಸೇರಿಸಿ ತಮ್ಮ ಕಡೆಯವರಿಗೆ ಪರಿಹಾರ ಸೇರುವ ಹಾಗೆ ಮಾಡಿ ಬಡವರಿಗೆ ಅನ್ಯಾಯ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ. ಆದರೆ, ಈ ಬಾರಿ ಹಾಗೆ ಆಗಲು ಬಿಡುವುದಿಲ್ಲ. ಫ್ರೂಟ್ಸ್ ತಂತ್ರಾಂಶದಲ್ಲಿ ಎಷ್ಟು ವಿಸ್ತೀರ್ಣದ ಬೆಳೆ ಹಾನಿಯಾಗಿದೆ ಎಂದು ದಾಖಲಿಸಿದ ಪ್ರತಿಯೊಬ್ಬ ಫಲಾನುಭವಿಗೆ ಬರ ಪರಿಹಾರ ನೇರವಾಗಿ ಹೋಗಲಿದೆ. ಗ್ರಾಮ ಲೆಕ್ಕಿಗರಿಗೆ ಆಯಾ ಗ್ರಾಮದ ಪ್ರತಿಯೊಂದು ಮಾಹಿತಿ ಇರುತ್ತದೆ. ಭೂಮಿ ತಂತ್ರಾಂಶದಲ್ಲಿ ಪ್ರತಿಯೊಬ್ಬರ ಖಾತೆಗಳ ಮಾಹಿತಿ ಸಿಗಲಿದೆ. ಇನ್ನು 10 ದಿನದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ರೈತರ ನಿಖರ ಮಾಹಿತಿ ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಾಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ದಾಖಲೆ ಅಪ್ಲೋಡ್ ಮಾಡಲು ಏನಾದರೂ ಸಮಸ್ಯೆಗಳು ಆಗುತ್ತಿವೆಯೇ ಎಂದು ವಿಎ ಗಳನ್ನು ಸಚಿವರು ಕೇಳಿದರು. ಆಗ ಕೆಲ ಗ್ರಾಮ ಲೆಕ್ಕಿಗರು ಪೌತಿ ಖಾತೆ, ಊರು ಬಿಟ್ಟು ಹೊರಗೆ ಹೋಗಿರುವವರ ಖಾತೆಗಳ ಮಾಹಿತಿ ಸಿಗುವುದಿಲ್ಲ ಎಂದು ಹೇಳಿದರು. ಅದು ಕೇವಲ ಶೇ. 1 ಅಥವಾ ಶೇ.2ರಷ್ಟು ಇರುತ್ತದೆ. ಉಳಿದವರ ಮಾಹಿತಿ ದಾಖಲಿಸಿ ಎಂದು ಸಚಿವರು ಹೇಳಿದರು. ಮತ್ತೊಬ್ಬ ವಿಎ ಎದ್ದು ಒಬ್ಬ ವ್ಯಕ್ತಿಯ ಹೆಸರಿನ ಖಾತೆಯಲ್ಲಿ ಅದೇ ಹೆಸರಿನ ಮತ್ತೊಬ್ಬರು ಫ್ರೂಟ್ಸ್ ಐಡಿ ಕ್ರಿಯೆಟ್ ಮಾಡುವ ಸಮಸ್ಯೆಗಳು ಎದುರಾಗುತ್ತಿವೆ ಎಂದು ಸಭೆಯ ಗಮನಕ್ಕೆ ತಂದರು. ಆಗ ಸಚಿವರು ಹೌದು, ಅಂತಹ ಸಮಸ್ಯೆಗಳು ವಿಪರೀತವಾಗಿದ್ದು, ಅದಕ್ಕೆ ಪರಿಹಾರ ಎಂದರೆ ಖಾತೆಗಳನ್ನು ಅವರವರ ಆಧಾರ್ ಕಾರ್ಡ್‌ಗಳಿಗೆ ನೋಂದಣಿ ಮಾಡಿಸುವುದು. ಬೇರೆ ರಾಜ್ಯಗಳಲ್ಲಿ ಖಾತೆಗಳನ್ನು ಆಧಾರ್ ಕಾರ್ಡ್‌ಗೆ ನೋಂದಣಿ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಆಗಿಲ್ಲ. ಇದೇ ವೇಳೆ ಫ್ರೂಟ್ಸ್ ತಂತ್ರಾಂಶದಲ್ಲಿ ಖಾತೆಯೊಂದಿಗೆ ಆಧಾರ್ ಕಾರ್ಡ್ ನಂಬರ್ ಜೋಡಣೆ ಹಾಗೂ ಬಯೋಮೆಟ್ರಿಕ್ ಮಾಡಿ. ಇದರಿಂದ ಹಲವು ಮೋಸಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಸೂಚನೆ ನೀಡಿದರು.

ಪೂರ್ವಸಿದ್ಧತೆ ಬಗ್ಗೆ ಗಮನ ಹರಿಸಿ;
ರಾಜ್ಯದಲ್ಲಿ ಈ ವರ್ಷ ಬರ ಆವರಿಸಿದೆ. ಸದ್ಯಕ್ಕೆ ಹಾಸನ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಗೂ ಮೇವಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಆ ಸಮಸ್ಯೆ ಮುಂದಿನ ಕೆಲ ತಿಂಗಳುಗಳಲ್ಲೇ ಸೃಷ್ಟಿಯಾಗಬಹುದು. ಅದಕ್ಕೆ ನಾವು ಈಗಿನಿಂದಲೇ ಸನ್ನದ್ಧರಾಗಿರಬೇಕು. ಸಮಸ್ಯೆ ಎದುರಾದಾಗ ಅದನ್ನು ನಿವಾರಿಸುವುದಕ್ಕಿಂತ ಅದಕ್ಕೆ ಅಗತ್ಯ ಪೂರ್ವಸಿದ್ಧತೆಗಳನ್ನು ಇಂದಿನಿಂದಲೇ ಕೈಗೊಳ್ಳಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಕುಡಿಯುವ ನೀರಿನ ಸಂಬಂಧ ಈಗಲೇ ಪರ್ಯಾಯ ವ್ಯವಸ್ಥೆಗಳ ಬಗ್ಗೆ ಗಮನ ಹರಿಸಬೇಕು. ಟ್ಯಾಂಕರ್ ಹಾಗೂ ಆಯಾ ಊರಿನ ಖಾಸಗಿ ಬೋರ್‌ವೆಲ್‌ಗಳನ್ನು ಕಾಯ್ದಿರಿಸಿಕೊಳ್ಳಿ. ಸಮಸ್ಯೆ ಎದುರಾದ ದಿನದಲ್ಲೇ ಸಮಸ್ಯೆ ಬಗೆಹರಿಯಬೇಕು. ಕುಡಿಯುವ ನೀರಿನ ವಿಷಯದಲ್ಲಿ ಆಯಾ ಗ್ರಾಮಗಳ ಪಿಡಿಒ, ವಿಎ ಹಾಗೂ ನೀರು ಸರಬರಾಜು ಎಇಇ ನೀಡುವ ಜಂಟಿ ವರದಿಯನ್ನು ಮೊದಲು ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳಿ ಎಂದು ಜಿಪಂ ಸಿಇಒ ಹಾಗೂ ಡಿಸಿಗೆ ಹೇಳಿದರು. ಹಾಗೆ ಮೇವಿನ ವಿಷಯದಲ್ಲೂ ಯಾವುದೇ ಕೊರತೆ ಎದುರಾಗದಂತೆ ನೋಡಿಕೊಳ್ಳಿ ಎಂದರು.

ತಹಸೀಲ್ದಾರ್ ಬಗ್ಗೆ ಅಸಮಾಧಾನ:
ಬಗರ್ ಹುಕುಂ ಸಾಗುವಳಿ ಚೀಟಿಗಳ ಬಾಕಿ ಅರ್ಜಿಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಳವಾಗಿದೆ. ಅದರಲ್ಲೂ ಅರಕಲಗೂಡಿನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಬಾಕಿ ಉಳಿದಿವೆ, ಏಕೆ ಎಂದು ಹೇಳಿ ಅರಕಲಗೂಡು ತಹಸೀಲ್ದಾರ್‌ಗೆ ಪ್ರಶ್ನೆ ಸಚಿವರು ಮಾಡಿದರು. ಆಗ ತಹಸೀಲ್ದಾರ್ ಬಸವ ರೆಡ್ಡಪ್ಪ ರೋಣದ್ ಮೇಲೆದ್ದು ಏನನ್ನೂ ಉತ್ತರಿಸದೆ ಮೌನಕ್ಕೆ ಶರಣಾದರು. ಆಗ ಸಚಿವರು, ಇವರಿಗೆ ಏನೊಂದು ಗೊತ್ತಿಲ್ಲ. ಕಡತಗಳ ಬಗ್ಗೆ ಪರಿಶೀಲನೆ ನಡೆಸಿದರೆ ತಾನೆ ಗೊತ್ತಾಗುವುದು. ಇವರು ಅಲ್ಲಿ ಮಾಡುತ್ತಿರುವುದೇ ಬೇರೆ. ಎಲ್ಲರ ಮುಂದೆ ಅದನ್ನು ಹೇಳುವುದು ಬೇಡ ಬಿಡಿ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇನ್ನೊಂದು ವಾರದಲ್ಲಿ ಆರು ತಾಲೂಕುಗಳ ಬಗರ್‌ಹುಕುಂ ಸಮಿತಿ ರಚನೆಯ ಆದೇಶ ಆಗಲಿದೆ. ಬಾಕಿ ಅರ್ಜಿಗಳನ್ನು ನ್ಯಾಯಬದ್ಧವಾಗಿ ಹಾಗೂ ಪ್ರಾಮಾಣಿಕವಾಗಿ ಬಗೆಹರಿಸಿ ಎಂದು ಸೂಚನೆ ನೀಡಿದರು.

ಅಧಿಕಾರಿಗಳಿಗೆ ಮಾನವೀಯತೆ ಪಾಠ:
ಕಂದಾಯ ಇಲಾಖೆಯಲ್ಲಿ ಸಾಕಷ್ಟು ಕೆಲಸಗಳು ಬಾಕಿ ಉಳಿದಿವೆ. ಖಾತಾ ದುರಸ್ತಿ, ಜಮೀನಿನ ರಸ್ತೆ ಸೇರಿ ಹಲವು ಕೆಲಸಗಳಿಗಾಗಿ ಜನರು ಕಚೇರಿಗೆ ಅಲೆಯುತ್ತಿದ್ದಾರೆ. ಸಣ್ಣ ಸಣ್ಣ ವಿಷಯಗಳಿಗೆ ಜನರನ್ನು ಗೋಳು ಉಯ್ದುಕೊಂಡರೆ ನಿಮಗೆ ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರು ಬರುವುದಿಲ್ಲವೇ? ನಾವು ಜನರ ಜೀವನಕ್ಕೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡಿಕೊಡುತ್ತಿದ್ದೆವೆಯೇ? ಇಲ್ಲ ಜನಗಳಿಗೆ ಹೊರೆಯಾಗುವ ಕೆಲಸ ಮಾಡುತ್ತಿದ್ದೆವಾ? ವರ ಕೊಟ್ಟವರಿಗೆ ನಾವು ಭಸ್ಮಾಸುರರ ರೀತಿ ವರ್ತಿಸುತ್ತಾ ಇದ್ದೇವೆ. ಜನರಿಗೆ ಪ್ರಾಮಾಣಿಕತೆ ಜತೆಗೆ ಮಾನವೀಯ ನೆಲೆಗಟ್ಟಿನಲ್ಲಿ ಕೆಲಸ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಮಾನವೀಯತೆಯ ಪಾಠ ಮಾಡಿದರು.