ಮಧುಗಿರಿ: ತಾಲೂಕಿನ ಕವಣದಾಲ ಗ್ರಾಮದಲ್ಲಿ ಪೂಜೆ ಮಾಡಿಸಲು ರಾಮಾಂಜನೇಯ ದೇವಾಲಯ ಪ್ರವೇಶಿಸಿದ್ದ ಪರಿಶಿಷ್ಟ ಜಾತಿ ಸ್ವಾಮಿನಾಥ ಎಂಬ ಯುವಕನನ್ನು ಹೊರಗಡೆ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಮಹಿಳೆಯರು ಸೇರಿ 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಯುವಕ ನೀಡಿದ ದೂರಿನ ಮೇರೆಗೆ ಕವಣದಾಲ ಗ್ರಾಮಸ್ಥರಾದ ಗಿರಿಯಣ್ಣಗೌಡ, ಅನಂತ, ಶಿವಾನಂದ, ಯೋಗೀಶ, ಶಿವಮ್ಮ, ನಿಂಗಮ್ಮ, ಮಂಜುನಾಥ, ಮಹಾಂತೇಶ, ವೀರೇಶ, ಯಶೋದಮ್ಮ ವಿರುದ್ಧ (ಶಾಂತಿ ಭಂಗ, ಉದ್ದೇಶ ಪೂರ್ವಕವಾಗಿ ಅವಮಾನ) ಸೇರಿ ವಿವಿಧ ಕಲಂ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
"ನೀನು ದೇವಸ್ಥಾನದ ಒಳಗಡೆ ಇದ್ದರೆ ಮೈಲಿಗೆಯಾಗುತ್ತದೆ, ಹೊರಗಡೆ ಹೋಗು. ಇಲ್ಲದಿದ್ದರೆ ನಿನ್ನ ಕೊಲೆ ಮಾಡುತ್ತೇವೆ. ನಿನ್ನ ಮುಗಿಸಿ ಬಿಡುತ್ತೇವೆ' ಎಂದು ಬೆದರಿಕೆ ಹಾಕಿದ್ದರು ಎಂದು ಯುವಕ ದೂರಿನಲ್ಲಿ ಉಲ್ಲೇಖಿಸಿದ್ದು, "ನಿನ್ನ ಜಾತಿಯವರು
ಎಂದೂ ದೇವಸ್ಥಾನದ ಒಳಗೆ ಬಂದಿಲ್ಲ. ನೀನೊಬ್ಬನೇ ಬಂದಿರುವುದು ಎಂದು ಬೆದರಿಕೆ ಹಾಕಿದ್ದಾರೆ' ಎಂದೂ ಆರೋಪಿಸಿದ್ದಾರೆೆ.
ಆಗಿದ್ದೇನು?: ಸ್ವಾಮಿನಾಥ ಮೇ 10ರಂದು ಸಂಜೆ ಪೂಜೆ ಮಾಡಿಸಲು ಗ್ರಾಮದ ಶ್ರೀ ರಾಮಾಂಜನೇಯ ದೇವಸ್ಥಾನಕ್ಕೆ ಹೋಗಿದ್ದರು. ಸ್ಥಳದಲ್ಲಿದ್ದ ಅನ್ಯ ಸಮುದಾಯದವರು ಅವರನ್ನು ಹೊರಗೆೆ ಕಳುಹಿಸಿದ್ದರು. ಇದೇ ವಿಚಾರವಾಗಿ ದೇಗುಲದ ಮುಂಭಾಗದಲ್ಲಿ ಮಾತಿನ ಚಕಮಕಿ ನಡೆದಿತ್ತು. ಗಲಾಟೆ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದರ ಬೆನ್ನಲ್ಲೇ ಮೇ 11ರಂದು ಪೊಲೀಸರು, ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ನಡೆಸಿದ್ದರು. ಮುಂದಿನ ದಿನಗಳಲ್ಲಿ ದೇವಾಲಯಕ್ಕೆ ಹೋಗಲು ಯಾರಿಗೂ ರ್ನಿಬಂಧ ವಿಧಿಸದಂತೆ ಸೂಚಿಸಿದ್ದರು.