ಸಕಲೇಶಪುರ: ನಗರೋತ್ಥಾನ ಯೋಜನೆ 10 ಕೋಟಿ ರೂ. ಅನುದಾನದಲ್ಲಿ ಪಟ್ಟಣವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾಹಿತಿ ನೀಡಿದರು.
ಪಟ್ಟಣದ ಪುರಭವನದ ಎದುರು ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಪುರಸಭೆ ಸದಸ್ಯರ ಕೋರಿಕೆಯಂತೆ ಮೊದಲ ಹಂತದಲ್ಲಿ ಪಟ್ಟಣದ ಹಲವು ಮುಖ್ಯರಸ್ತೆಗಳ ಅಭಿವೃದ್ಧಿಪಡಿಸಲು ಅನುದಾನ ಬಳಸಿಕೊಳ್ಳಲಾಗುತ್ತಿದೆ. ನಂತರ ಹಳೇ ಬಸ್ ನಿಲ್ದಾಣದಲ್ಲಿನ ವಾಣಿಜ್ಯ ಸಂಕೀರ್ಣ ಅಭಿವೃದ್ಧಿಪಡಿಸಲಾಗುವುದು. ಪುರಸಭೆ ಕಟ್ಟಡ ನಿರ್ಮಾಣಕ್ಕೆ 1.5 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಇದಲ್ಲದೆ ಪಟ್ಟಣದ ಬಾಳೆಗದ್ದೆ ಹಾಗೂ ಚಂಪಕನಗರ ಬಡಾವಣೆ ಟೋಲ್‌ಗೆಟ್ ಸಮೀಪ ಸ್ವಾಗತ ಕಮಾನು ನಿರ್ಮಾಣ ಮಾಡಲಾಗುವುದು. ಪಾರ್ಕ್ ಅಭಿವೃದ್ಧಿ, ಪಾದಚಾರಿ ರಸ್ತೆಗೆ ಇಂಟರ್‌ಲಾಕ್ ಹಾಗೂ ಬೀದಿದೀಪ ಆಳವಡಿಸಲು ಈ ಯೋಜನೆಯ ಅನುದಾನ ಬಳಸಿಕೊಳ್ಳಲಾಗುವುದು ಎಂದು ವಿವರಿಸಿದರು.
ಇದೇ ವೇಳೆ ವಿವಿಧ ಸಹಕಾರ ಸಂಘಟನೆಗಳಿಗಾಗಿ ತ್ಯಾಜ್ಯ ವಿಲೇವಾರಿ ವಾಹನಗಳನ್ನು ಬಿಡುಗಡೆಗೊಳಿಸಲಾಯಿತು. ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷ ಕಾಡಪ್ಪ ವಹಿಸಿದ್ದರು.ಪುರಸಭೆ ಉಪಾಧ್ಯಕ್ಷೆ ವಿದ್ಯಾ ಪಿ. ಶೆಟ್ಟಿ, ಮುಖ್ಯಾಧಿಕಾರಿ ಮಂಜುನಾಥ್ ಇತರರು ಇದ್ದರು.