ಜಿಲ್ಲೆ

10 ಕೋಟಿ ಅನುದಾನಕ್ಕೆ ವಾರದಲ್ಲೇ ತಡೆ

ಯು.ಎಸ್. ಪಾಟೀಲ ದಾಂಡೇಲಿ

ಸರ್ಕಾರ 10 ಕೋಟಿ ಅನುದಾನ ಬಿಡುಗಡೆಗೆ ಆದೇಶ ಹೊರಡಿಸಿದ ವಾರದಲ್ಲಿ ಅದನ್ನು ತಡೆ ಹಿಡಿದ ಕಾರಣ ನಗರಸಭೆಯ ಮೌಲ್ಯಯುತ ಆಸ್ತಿಯೊಂದು ಬಳಕೆಯಿಲ್ಲದೇ ವ್ಯರ್ಥವಾಗುತ್ತಿದೆ.

ನಗರದ ಜೆಎನ್ ರಸ್ತೆಯ 24-ಟೆನಮೆಂಟ್ ಪ್ರದೇಶದ ಮರು ನಿರ್ಮಾಣ ಕಾರ್ಯ ಅನುದಾನದ ಕೊರತೆಯಿಂದ ನನೆಗುದಿಗೆ ಬಿದ್ದಿದೆ. ನಗರಸಭೆ ಕಚೇರಿಯ ಎದುರು 20 ಗುಂಟೆ ಜಾಗದಲ್ಲಿ 8 ಲಕ್ಷ ರೂ.ವೆಚ್ಚದಲ್ಲಿ 1966 ರಲ್ಲಿ 2 ವಿಭಾಗಗಳಲ್ಲಿ ಒಟ್ಟು 24 ವಸತಿಗೃಹಗಳನ್ನು ನಿರ್ಮಾಣ ಮಾಡಲಾಗಿತ್ತು. 24 ಮನೆಗಳಿರುವ ಕಾರಣ ಕಟ್ಟಡಕ್ಕೆ 24-ಟೆನಮೆಂಟ್ ಎಂದು ಹೆಸರು ಬಂದಿತ್ತು. ನಗರಸಭೆ ಸಿಬ್ಬಂದಿ ಅಲ್ಲಿ ವಾಸ ಮಾಡುತ್ತಿದ್ದರು. ಕಟ್ಟಡ ಶಿಥಿಲವಾಗಿ ಕುಸಿದು ಬೀಳುವ ಪರಿಸ್ಥಿತಿ ತಲುಪಿದ್ದರಿಂದ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ಸೂಚನೆಯಂತೆ 2017 ರಲ್ಲಿ ಅಲ್ಲಿನ ನಿವಾಸಿಗಳನ್ನು ಖಾಲಿ ಮಾಡಿಸಲಾಗಿತ್ತು.

ಯೋಜನೆ ನನೆಗುದಿಗೆ: 24-ಟೆನಮೆಂಟ್ ಜಾಗದಲ್ಲಿ ನಗರಸಭೆ ನೂತನ ವಾಣಿಜ್ಯ ಹಾಗೂ ವಸತಿ ಸಮುಚ್ಚಯ ನಿರ್ವಣಕ್ಕೆ ಒಟ್ಟು 10 ಕೋಟಿ ರೂ. ಯೋಜನೆ ರೂಪಿಸಿತ್ತು. ಎಸ್​ಎಫ್​ಸಿ ಅಡಿ 10 ಕೋಟಿ ರೂ.ಗಳನ್ನು ಸರ್ಕಾರ 2019 ರ ಜುಲೈ 27 ರಂದು ಬಿಡುಗಡೆ ಮಾಡಿ ಆದೇಶ ಹೊರಡಿಸಿತ್ತು. ಆದರೆ, ಆಗಸ್ಟ್ 6 ರಂದು ಮತ್ತೊಂದು ಆದೇಶ ಹೊರಡಿಸಿದ ಪೌರಾಡಳಿತ ಇಲಾಖೆ ಅನುದಾನವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ತಿಳಿಸಿತ್ತು. ಅಂದಿನಿಂದ ಯೋಜನೆ ನನೆಗುದಿಗೆ ಬಿದ್ದಿದೆ. ನಗರಸಭೆ ಅಧಿಕಾರಿ, ಸಿಬ್ಬಂದಿ ವಾಸ್ತವ್ಯಕ್ಕೆ ಬಾಡಿಗೆ ಕಟ್ಟಡ ಹುಡುಕುವಂತಾಗಿದೆ.

ಸರ್ಕಾರ ಬದಲಾಗಿದ್ದೆ ಅನುದಾನಕ್ಕೂ ತಡೆ ಬಿತ್ತೇ?
ದಾಂಡೇಲಿ ನಗರಸಭೆಗೆ ಎಸ್​ಎಫ್​ಸಿ ಅಡಿ 10 ಕೋಟಿ ಬಿಡುಗಡೆ ಮಾಡುವ ಆದೇಶ ಸಿದ್ಧವಾಗುವ ಹೊತ್ತಿಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿತ್ತು. ಆರ್.ವಿ. ದೇಶಪಾಂಡೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಜುಲೈ ಅಂತ್ಯಕ್ಕೆ ಸಮ್ಮಿಶ್ರ ಸರ್ಕಾರ ಪತನವಾಯಿತು. ಸಚಿವರಾಗಿದ್ದ ಆರ್.ವಿ.ದೇಶಪಾಂಡೆ ಕೇವಲ ಶಾಸಕರಾಗಿ ಉಳಿದರು. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು. ಸರ್ಕಾರ ಬದಲಾಗಿದ್ದಕ್ಕೂ 24-ಟೆನಮೆಂಟ್ ಅನುದಾನ ತಡೆಗೂ ಸಂಬಂಧವಿದೆಯೇ ಎಂಬ ಚರ್ಚೆ ನಡೆದಿದೆ.

ಮೌಲ್ಯಯುತ ಜಾಗ
ನಗರಸಭೆಯ ಕಟ್ಟಡದ ಎದುರೇ ಇರುವುದರಿಂದ 24-ಟೆನಮೆಂಟ್ ಜಾಗಕ್ಕೆ ಭಾರಿ ಬೇಡಿಕೆ ಇದೆ. ಗುಂಟೆಗೆ ಕನಿಷ್ಠ 20 ಲಕ್ಷ ರೂ. ವಾಣಿಜ್ಯ ದರವಿದೆ. ಹರಾಜು ಹಾಕಿದರೆ ನಗರಸಭೆಗೆ ಕೋಟಿಗೂ ಅಧಿಕ ಆದಾಯ ಬರಲಿದೆ. ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಿದರೂ ನಗರಸಭೆಗೆ ಆದಾಯಕ್ಕೆ ಕೊರತೆ ಇಲ್ಲ. ಆದರೆ, ಮೌಲ್ಯಯುತ ಜಾಗವೊಂದು ನಗರಸಭೆಯ ವಾಹನಗಳ ನಿಲುಗಡೆಯ ರ್ಪಾಂಗ್ ಸ್ಥಳವಾಗಿ ವ್ಯರ್ಥವಾಗುತ್ತಿದೆ. ಅದನ್ನು ಶೀಘ್ರ ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದು ನಗರದ ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.

24-ಟೆನಮೆಂಟ್ ಕಟ್ಟಡವನ್ನು ಒಡೆದು ನೆಲ ಮಹಡಿಯಲ್ಲಿ ವಾಣಿಜ್ಯ ಮಳಿಗೆಗಳು ಮೇಲ್ಗಡೆ ಸಿಬ್ಬಂದಿ ವಸತಿಗೃಹ ನಿರ್ವಣದ ಯೋಜನೆ ಇದೆ. ನಗರಸಭೆ ಸಾಮಾನ್ಯ ಸಭೆಲ್ಲಿ ರ್ಚಚಿಸಿ ಶೀಘ್ರ ನಿರ್ಣಯ ಕೈಗೊಳ್ಳಲಾಗುವುದು. | ಸರಸ್ವತಿ ರಜಪೂತ್ ನಗರಸಭೆ ಅಧ್ಯಕ್ಷೆ