ಮೈಸೂರು: ಕೂಲಿ ಕಾರ್ಮಿಕನ ಕೊಲೆಗೆ ಯತ್ನ ನಡೆಸಿದ ಮೂವರಿಗೆ ನಗರದ ನಾಲ್ಕನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ತಲಾ 49,500 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಮೈಸೂರು ತಾಲೂಕಿನ ಮಾರ್ಬಳ್ಳಿಯ ವೆಂಕಟೇಶ್ (40) ಅವರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಅದೇ ಗ್ರಾಮದ ಶಿವಪ್ಪ, ಬಾಂಡ್ ರವಿ, ನವೀನ್ ಶಿಕ್ಷೆಗೆ ಗುರಿಯಾಗಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ರಘು ಮೃತಪಟ್ಟಿದ್ದಾರೆ.
2015 ರ ಡಿಸೆಂಬರ್ 27 ರಂದು ಕ್ಷುಲ್ಲಕ ವಿಚಾರಕ್ಕೆ ವೆಂಕಟೇಶ್ ಜತೆ, ಶಿವಪ್ಪ ಜಗಳ ತೆಗೆದು ಬಾಂಡ್ ರವಿ, ನವೀನ್, ರಘುವಿನೊಂದಿಗೆ ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಜಯಪುರ ಠಾಣೆ ಪೊಲೀಸರು, ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮಲ್ಲನಗೌಡ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ಎಸ್.ಟಿ.ಸುಧಾ ವಕಾಲತ್ತು ವಹಿಸಿದ್ದರು.