ಶಿವಮೊಗ್ಗ: ಆಂಧ್ರಪ್ರದೇಶದಿಂದ ಶಿವಮೊಗ್ಗಕ್ಕೆ ಇನ್ನೋವಾ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದ ನಾಲ್ವರಿಗೆ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶನಿವಾರ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ 1.05 ಲಕ್ಷ ರೂ. ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲರಾದಲ್ಲಿ ಹೆಚ್ಚುವರಿ ಒಂದು ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಶಿವಮೊಗ್ಗ ಇಂದಿರಾನಗರದ ದೌಲತ್ ಅಲಿಯಾಸ್ ಗುಂಡು(27), ಮುಜೀಬ್ ಅಲಿಯಾಸ್ ಬಸ್ಟ್(27), ಕಡೇಕಲ್‌ನ ಶೋಯೆಬ್ ಅಲಿಯಾಸ್ ಚೂಡಿ(24), ಮಹಮ್ಮದ್ ಜಫ್ರುಲ್ಲಾ (24) ಬಂಧಿತರು.
2021ರ ಡಿ.11ರಂದು ನಾಲ್ವರು ಇನ್ನೋವಾ ಕಾರಿನಲ್ಲಿ ಆಂಧ್ರಪ್ರದೇಶದಿಂದ ಗಾಂಜಾ ಸಾಗಿಸುತ್ತಿದ್ದರು. ಶಿವಮೊಗ್ಗಕ್ಕೆ ಗಾಂಜಾ ತರುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ತುಂಗಾನಗರದ ಅಂದಿನ ಇನ್‌ಸ್ಪೆಕ್ಟರ್ ಎಂ.ಎಸ್.ದೀಪಕ್ ನೇತೃತ್ವದ ತಂಡ ಲಕ್ಕಿನಕೊಪ್ಪ ಕ್ರಾಸ್ ಬಳಿ ತಡೆದು ಪರಿಶೀಲಿಸಿದಾಗ ಕಾರಿನ ಸ್ಟೆಫ್ನಿ, ಹಿಂಭಾಗ ಮತ್ತು ಮುಂಭಾಗದ ಡೋರ್‌ಗಳು, ಬಾನೆಟ್ ಒಳಗೆ 6.50 ಲಕ್ಷ ರೂ. ಮೌಲ್ಯದ 315 ಗ್ರಾಂ ಗಾಂಜಾ ಪ್ಯಾಕೇಜ್‌ಗಳನ್ನು ಬಚ್ಚಿರುವುದು ಪತ್ತೆಯಾಗಿತ್ತು. ಕಾರು ಜಪ್ತಿ ಮಾಡಿ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ತನಿಖಾಧಿಕಾರಿಯಾಗಿದ್ದ ತುಂಗಾನಗರ ಠಾಣೆಯ ಪಿಎಸ್‌ಐ ಬಿ.ಎಚ್.ಭಾರತಿ ಅವರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಮಂಜುನಾಥ ನಾಯಕ್ ನಾಲ್ವರಿಗೆ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಎ.ಎಂ.ಸುರೇಶ್‌ಕುಮಾರ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.