ಜಿಲ್ಲೆ

ಅತ್ಯಾಚಾರಿಗೆ 10 ವರ್ಷ ಜೈಲು ಶಿಕ್ಷೆ

ಮಂಜುನಾಥ ತಿಮ್ಮಯ್ಯ

ಮೈಸೂರು: ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದವನಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.


ಹುಣಸೂರು ತಾಲೂಕಿನ ರತ್ನಪುರಿ ಗ್ರಾಮದ ಸಲ್ಮಾನ್ ಖಾನ್(20) ಶಿಕ್ಷೆಗೆ ಗುರಿಯಾದ ಅಪರಾಧಿ. ಈತ ಅದೇ ಗ್ರಾಮದ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಎಸಗಿದ್ದ. ಇದರಿಂದ ಸಂತ್ರಸ್ತೆ ಗಭಿರ್ಣಿಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಳು.

ಬಳಿಕ ಮದುವೆಗೆ ನಿರಾಕರಿಸಿ ಮೋಸ ಮಾಡಿದ್ದರಿಂದ, ಈ ಬಗ್ಗೆ ಸಂತ್ರಸ್ತೆ ಆರೋಪಿ ವಿರುದ್ಧ ದೂರು ದಾಖಲಿಸಿದ್ದಳು. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿಯಾಗಿದ್ದ ಕೆ.ಸಿ.ಪೂವಯ್ಯ ತನಿಖೆ ನಡೆಸಿ ಆರೋಪಿ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಕ್ಕೆ ಸಲ್ಲಿಸಿದ್ದರು.


ಈ ಕುರಿತು ನಗರದ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ನಡೆಸಿತು. ಆರೋಪಿ ವಿರುದ್ಧ ಪೂರಕ ಸಾಕ್ಷ್ಯಾಧಾರಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಎಂ.ರಮೇಶ್ ಅವರು, ಅಪರಾಧಿಗೆ ಕಲಂ. 376(2) (ಎನ್) ಐಪಿಸಿ ರೀತ್ಯಾ 10 ವರ್ಷಗಳ ಕಠಿಣ ಸೆರೆಮನೆ ವಾಸ ಶಿಕ್ಷೆ, 30 ಸಾವಿರ ರೂ. ದಂಡ ಹಾಗೂ ಕಲಂ, 417 ಐಪಿಸಿ ರೀತ್ಯಾ ಒಂದು ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ, 5 ಸಾವಿರ ರೂ. ದಂಡವನ್ನು ವಿಧಿಸಿದೆ. ದಂಡ ಮೊತ್ತದ 35 ಸಾವಿರ ರೂ. ಪೈಕಿ 30 ಸಾವಿರ ರೂ.ಗಳನ್ನು ಸಂತ್ರಸ್ತೆಗೆ ಪರಿಹಾರವನ್ನಾಗಿ ಆರೋಪಿ ನೀಡುವಂತೆ , 5 ಸಾವಿರ ರೂ. ಸರ್ಕಾರಕ್ಕೆ ದಂಡ ಪಾವತಿಸುವಂತೆ ಆದೇಶಿಸಿದ್ದಾರೆ.


ಸಂತ್ರಸ್ತೆಗೆ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕಾನೂನಾತ್ಮಕ ಪರಿಹಾರ ನೀಡುವಂತೆ ಮೈಸೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ನಾಗರಾಜ ವಾದ ಮಂಡಿಸಿದ್ದರು.