ಶಿರಸಿ: ಕೊಲೆ ಮಾಡುವ ಉದ್ದೇಶದಿಂದ ವ್ಯಕ್ತಿಯೋರ್ವನಿಗೆ ಕತ್ತಿಯಿಂದ ಕುತ್ತಿಗೆಗೆ ಬಡಿದು ಹಾಗೂ ಕಾಲು ಕಡಿದಿದ್ದ ಪ್ರಕರಣವನ್ನು ವಿಚಾರಣೆ ನಡೆಸಿದ ಇಲ್ಲಿನ ಒಂದನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ, ಸಂತ್ರಸ್ತನಿಗೆ 10 ಸಾವಿರ ರೂ. ಪರಿಹಾರ ನೀಡುವಂತೆ ಗುರುವಾರ ಆದೇಶಿಸಿದೆ.
ಇಲ್ಲಿಯ ಗಜಾನನ ನಾರಾಯಣ ಹೆಗಡೆ ಅಪರಾಧಿಯಾಗಿದ್ದಾನೆ. ಈತ ತಾಲೂಕಿನ ತಟ್ಟಗುಣಿಯಲ್ಲಿ 2020ರ ಏಪ್ರಿಲ್ 14ರಂದು ಮಂಜುನಾಥ ಗಜಾನನ ಹೆಗಡೆ ಅವರ ಮೇಲೆ ಹಲ್ಲೆ ನಡೆಸಿದ್ದ. ಸೊಪ್ಪಿನ ಬೆಟ್ಟದಲ್ಲಿ ಆರೋಪಿ ದರಕು ಸಂಗ್ರಹಿಸುತ್ತಿದ್ದ ವೇಳೆ ಮಂಜುನಾಥ ಹೆಗಡೆ ಅವರು ಇದು ತನಗೆ ಸೇರಿದ ಬೆಟ್ಟ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಕುಪಿತಗೊಂಡ ಆರೋಪಿ ಹಲ್ಲೆ ನಡೆಸಿದ್ದನಲ್ಲದೇ ತಪ್ಪಿಸಲು ಬಂದ ಮಂಜುನಾಥ ಹೆಗಡೆ ಅವರ ಮಗ ಮತ್ತು ಮಗಳನ್ನು ದೂಡಿ ಗಾಯಪಡಿಸಿದ್ದ. ಈ ಕುರಿತಂತೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕಿರಣ ಕಿಣಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ ಮಳಗಿಕರ್ ವಾದ ಮಂಡಿಸಿದ್ದರು.
ಇದನ್ನು ಓದಿ: ಮಂಗನ ಕಾಯಿಲೆಯಿಂದ ಮೃತರಿಗೆ ಅರಣ್ಯ ಇಲಾಖೆಯಿಂದ ಪರಿಹಾರ