ಜಿಲ್ಲೆ

ಜೆಡಿಎಸ್ ಸಮಾವೇಶದಲ್ಲಿ 10 ಸಾವಿರ ಕಾರ್ಯಕರ್ತರು ಭಾಗಿ; ಕುಮಾರಸ್ವಾಮಿ

Bengaluru - Political - Vilas Melagiri

ಬೆಂಗಳೂರು: ಮುಂಬರುವ ಲೋಕಸಭೆ, ಜಿಲ್ಲಾ, ತಾಲ್ಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆ ಹಾಗೂ ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಅರಮನೆ ಮೈದಾನದಲ್ಲಿ ನಡೆಯುವ ಜೆಡಿಎಸ್ ಸಮಾವೇಶದಲ್ಲಿ 10 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಮಾಧ್ಯಮದ ಜತೆ ಮಾತನಾಡಿರುವ ಅವರು, ಮಹತ್ವದ ರಾಜಕೀಯ ಬೆಳವಣೀಗೆಗಳ ನಡುವೆ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಈಗಾಗಲೇ ಮುಖಂಡರ ಸಭೆ ನಡೆಸಿದ್ದೇವೆ. ಭಾನುವಾರ ಕೂಡ ಮಹತ್ವದ ಸಭೆ ಕರೆಯಲಾಗಿದೆ. ಲೋಕಸಭೆ ಚುನಾವಣೆಗೆ ಮುನ್ನ ಇಂತಹ ಸಭೆ ನಡೆಯಬೇಕು ಎಂದು ದೇವೇಗೌಡರು ಬಯಸಿದ್ದರು. ಅದರಂತೆ ಸಭೆ ನಡೆಯುತ್ತಿದೆ. 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗುತ್ತಾರೆ. ಆ ಸಭೆಯಲ್ಲಿ ಮುಕ್ತವಾಗಿ ಚರ್ಚೆ ನಡೆಸುತ್ತೇವೆ. ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಘಟಾನುಘಟಿ ನಾಯಕರು ಭಾಗಿ

ಮಾಜಿ ಪ್ರಧಾನಿ ಎಚ್,ಡಿ.ದೇವೇಗೌಡ, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಸೇರಿದಂತೆ ಪಕ್ಷದ ಎಲ್ಲ ಶಾಸಕರು, ಮಾಜಿ ಶಾಸಕರು, ಹಿರಿಯ ಮುಖಂಡರು, ಸಾವಿರಾರು ಕಾರ್ಯಕರ್ತರು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಅರಮನೆ ಮೈದಾನದ ನಲಪಾಡ್ ಪೆವಿಲಿಯನ್‌ನಲ್ಲಿ ಭಾನುವಾರ ಬೆಳಗ್ಗೆ 11ಕ್ಕೆ ಸಮಾವೇಶ ನಡೆಯಲಿದೆ ಎಂದು ವಿವರಿಸಿದರು.

ಕಾಂಗ್ರೆಸ್ ಈಗ ಡೆಸ್ಪರೇಟ್ ಆಗಿದೆ

ರಾಜಕಾರಣದಲ್ಲಿ ನಿರಾಶೆ, ಹತಾಶೆ ಎನ್ನುವುದು ಬರಲ್ಲ. ಡೆಸ್ಪರೇಟ್ ಅನ್ನುವ ಪದ ರಾಜಕಾರಣದಲ್ಲಿ ಬರಲ್ಲ. ರಾಜಕಾರಣದ ಡಿಕ್ಷನರಿಯಲ್ಲೇ ಆ ಪದ ಇಲ್ಲ. ಈಗ ಕಾಂಗ್ರೆಸ್‌ಗೆ ಡೆಸ್ಪರೇಟ್ ಆಗುತ್ತದೆ. ಹೊರನೋಟಕ್ಕೆ ಅವರು ಏನು ಬೇಕಾದರೂ ಹೇಳಬಹುದು. ಆದರೆ ಒಳಗಡೆ ಏನಿದೆ ಅನ್ನುವುದು ನನಗೂ ಗೊತ್ತಿದೆ. ಅವರ ಶಕ್ತಿ ಏನಿದೆ ಅನ್ನುವುದು ನನಗೂ ಗೊತ್ತಿದೆ. ರಾಜಕಾರಣದಲ್ಲಿ ಸದಾಕಾಲ ಒಂದೇ ರೀತಿ ಇರಲ್ಲ. ರಾಜಕಾರಣದ ಚಕ್ರ ಉರುಳುತ್ತಿರುತ್ತದೆ. ಅವರು ಏನು ಸಾಧನೆ ಮಾಡಿದ್ದಾರೆ ಅಂತ ಜನ ಸೀಟು ಕೊಡುತ್ತಾರೆ. ಲೂಟಿ ಮಾಡಿದ್ದಾರೆ, ಆ ಹಣದಲ್ಲಿ ಜನರನ್ನು ಕೊಂಡುಕೊಳ್ಳಬಹುದು ಅಂದುಕೊಂಡಿದ್ದಾರೆ, ಅದು ಸಾಧ್ಯ ಆಗಲ್ಲ ಎಂದು ಕುಮಾರಸ್ವಾಮಿ ಹೇಳಿದರು.