ಕಡೂರು: ಅಜ್ಜಂಪುರ ತಾಲೂಕಿನ ಮುಗುಳಿ ಗ್ರಾಮ ಪಂಚಾಯಿತಿಯಲ್ಲಿ 2001ರಲ್ಲಿ ಮೂಲ ಲಾನುಭವಿಗಳಿಗೆ ನಿವೇಶನ ನೀಡದೆ, ಗ್ರಾಮದ ಇತರ 10 ಜನರಿಗೆ ಅಕ್ರಮವಾಗಿ ಹಕ್ಕುಪತ್ರದಲ್ಲಿ ಹೆಸರುಗಳನ್ನು ತಿದ್ದುಪಡಿ ಮಾಡಿ ಖಾತೆ ಮಾಡಿಕೊಟ್ಟಿರುವ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ನ್ಯಾಯಕ್ಕಾಗಿ ಮೂಲ ಫಲಾನುಭವಿಗಳು ಮತ್ತೆ ಹೋರಾಟಕ್ಕೆ ಇಳಿದಿದ್ದಾರೆ.
ಮುಗುಳಿ ಗ್ರಾಪಂನಲ್ಲಿ 2001ನೇ ಸಾಲಿನಲ್ಲಿ ಗ್ರಾಮದ 85 ನಿವೇಶನ ರಹಿತರಿಗೆ ಗ್ರಾಮದ ಸರ್ವೇ ನಂಬರ್ 2ರಲ್ಲಿ 2 ಎಕರೆ 32.5 ಗುಂಟೆ ಜಾಗದಲ್ಲಿ ನಿವೇಶನ ನೀಡಲು ಅಂದಿನ ಗ್ರಾಪಂ ಸದಸ್ಯರು ಮತ್ತು ಅಧಿಕಾರಿಗಳು ತೀರ್ಮಾನಿಸಿ ಲಾನುಭವಿಗಳ ಪಟ್ಟಿ ತಯಾರಿಸಿ ಸಂಬಂಧಿಸಿದ ಇಲಾಖೆಗೆ ಕಳುಹಿಸಿ ಅನುಮೋದನೆ ದೊರೆತ ನಂತರ ಆಶ್ರಯ ಯೋಜನೆಯಡಿ 85 ಲಾನುಭವಿಗಳಿಗೆ ನಿವೇಶನಗಳನ್ನು ಮಂಜೂರು ಮಾಡಿದ್ದಾರೆ. ಬಳಿಕ ಹಕ್ಕುಪತ್ರ ವಿತರಣೆ ವೇಳೆ ಮೂಲ ಪಟ್ಟಿಯಲ್ಲಿದ್ದ 10 ಲಾನುಭವಿಗಳ ಹೆಸರುಗಳು ನಾಪತ್ತೆಯಾಗಿರುವುದು ತಿಳಿದುಬಂದಿದೆ.
ಮುಗುಳಿ ಗ್ರಾಮದ 85 ಲಾನುಭವಿಗಳ ಪೈಕಿ ಲಕ್ಷ್ಮೀದೇವಮ್ಮ, ಗೌರಮ್ಮ, ಇಂದ್ರಮ್ಮ, ನಾಗರತ್ನಮ್ಮ, ಮಂಜಮ್ಮ, ಕಮಲಮ್ಮ, ಚೆಲುವಾಂಬಿಕಾ, ಅನಿತಾ, ಸೌಭಾಗ್ಯಾ, ಭಾರತಮ್ಮ ಮೂಲ ಲಾನುಭವಿಗಳ ಹೆಸರುಗಳು ದಾಖಲೆಯಲ್ಲಿ ನಮೂದಾಗಿದೆ. ಇವರ ಹೆಸರಿನ ಮೇಲೆ ವೈಟ್ನರ್ ಹಚ್ಚಿ ತಿದ್ದುಪಡಿ ಮಾಡಿ ರುದ್ರಮ್ಮ, ಲಕ್ಷ್ಮೀದೇವಮ್ಮ, ಪ್ರೇಮಾ, ನಿರ್ಮಲಾ, ಮಂಜಮ್ಮ, ವೇದಾವತಿ, ರಾಧಮ್ಮ, ಮಂಜಮ್ಮ, ದೇವಿರಮ್ಮ, ಭೈರಮ್ಮ ಎಂಬುವರ ಹೆಸರು ಸೇರಿಸಿ ಬಹುತೇಕ ಹಕ್ಕುಪತ್ರಗಳಿಗೆ ಖಾತೆಗಳನ್ನು ಮಾಡಿಕೊಟ್ಟಿದ್ದಾರೆ.
ಗ್ರಾಮ ಪಂಚಾಯಿತಿ ಹಾಲಿ ಅಧ್ಯಕ್ಷ ದೇವರಾಜ್ ಅವರ ತಾಯಿ ಹೆಸರಿಗೆ ನೀಡಿದ್ದ ಹಕ್ಕುಪತ್ರವನ್ನು ತಿದ್ದುಪಡಿ ಮಾಡಿ ಬೇರೆಯವರಿಗೆ ಖಾತೆ ಮಾಡಿಕೊಟ್ಟಿರುವುದು ಬೆಳಕಿಗೆ ಬಂದಿದೆ. ಜತೆಯಲ್ಲಿ ಕಳೆದ ಮೇನಲ್ಲಿ ದೇವರಾಜ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಮೂಲ ಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ನೀಡಬೇಕು, ಅಕ್ರಮವಾಗಿ ಪಡೆದಿರುವ ನಿವೇಶನಗಳ ಖಾತೆ ರದ್ದುಪಡಿಸಬೇಕು ಎಂಬ ನಿರ್ಣಯ ಕೈಗೊಂಡರೂ ಬಹುತೇಕ ಅಕ್ರಮ ಖಾತೆಗಳನ್ನು ರದ್ದುಪಡಿಸಲು ಪಿಡಿಒ ಮೀನಾಮೇಷ ಎಣಿಸುತ್ತಿದ್ದಾರೆ. ಆದ್ದರಿಂದ ಪಿಡಿಒ ಮೂಲ ಲಾನುಭವಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಗ್ರಾಪಂನಲ್ಲಿ ನಿವೇಶನ ಹಂಚಿಕೆಯಲ್ಲಿ ನಡೆದ ಅಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ನಿವೇಶನ ವಂಚಿತರು ಗ್ರಾಪಂ ಎದುರು ಬುಧವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಮೂಲ ಲಾನುಭವಿಗಳ ಹೆಸರಿನ ಹಕ್ಕುಪತ್ರದಲ್ಲಿ ಹೆಸರು ತಿದ್ದಿರುವುದು ಯಾರು ಎಂಬುದು ಬೆಳಕಿಗೆ ಬರಬೇಕಿದೆ. ಖಾತೆಯನ್ನೇ ಅಕ್ರಮವಾಗಿ ವರ್ಗಾವಣೆ ಮಾಡಿಕೊಟ್ಟಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
2001ರಲ್ಲಿ ನನ್ನ ತಾಯಿ ಕಮಲಮ್ಮ ಹೆಸರಿನಲ್ಲಿ ನೀಡಿರುವ ಹಕ್ಕುಪತ್ರದಲ್ಲಿ ವೇದಾವತಿ ಎಂಬ ಹೆಸರಿಗೆ ಹಕ್ಕುಪತ್ರ ತಿದ್ದುಪಡಿಯಾಗಿರುವ ಕುರಿತು 2014ರಲ್ಲಿ ತಿಳಿದು ನನ್ನ ತಾಯಿ ಹೆಸರಿನ ಮೂಲ ಹಕ್ಕುಪತ್ರ ನೀಡುವಂತೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ 2017ರಲ್ಲಿ ನಕಲು ದೃಢೀಕೃತ ಪ್ರತಿ ಪಡೆದಿದ್ದೇನೆ. ಬಳಿಕ ಮೂಲ ಹಕ್ಕುಪತ್ರದಾರರ ಹೆಸರಿಗೆ ಖಾತೆ ಮಾಡಲು ಇದುವರೆಗೂ ಸಾಧ್ಯವಾಗಿಲ್ಲ. ನಿವೇಶನ ಕಳೆದುಕೊಂಡ ಮೂಲ ಲಾನುಭವಿಗಳು ನ್ಯಾಯಕ್ಕಾಗಿ ಮನವಿ ಸಲ್ಲಿಸಿದ್ದಾರೆ. ದೂರು ಬಂದ ಹಿನ್ನೆಲೆಯಲ್ಲಿ ಮೇನಲ್ಲಿ ನಡೆದ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಮೂಲ ಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ನೀಡಬೇಕು. ಅಕ್ರಮವಾಗಿ ಪಡೆದಿರುವ ನಿವೇಶನಗಳ ಖಾತೆ ರದ್ದುಪಡಿಸಬೇಕು ಎಂದು ಸರ್ವಾನುಮತದ ಅನುಮೋದನೆ ಪಡೆಯಲಾಗಿದೆ. ಈ ಕುರಿತು ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮುಗುಳಿ ಗ್ರಾಪಂ ಅಧ್ಯಕ್ಷ ಕೊಟ್ರೆ ದೇವರಾಜು ಹೇಳಿದ್ದಾರೆ.