ಜಿಲ್ಲೆ

ಗುತ್ತಿಗೆದಾರ ಅಪಹರಿಸಿದ್ದ 10 ಜನರು ವಶಕ್ಕೆ

ಹುಬ್ಬಳ್ಳಿ: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ನಗರದ ಗುತ್ತಿಗೆದಾರ ಮೋಹನ ಚವ್ಹಾಣ ಪ್ರಕರಣ ಭೇದಿಸುವಲ್ಲಿ ನಗರದ ಗೋಕುಲ ರೋಡ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಬುಧವಾರ ರಾತ್ರಿ 10 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎ1 ಆರೋಪಿ ಬಸಪ್ಪ ದಳವಾಯಿ, ಕೃಷ್ಣಪ್ಪ ಬಡಿಗೇರ, ಮಜಿದಸಾಬ್ ನದಾಫ್, ರುದ್ರಪ್ಪ ಭಜಂತ್ರಿ, ಶಂಕರ ಹಿರೇಮೇತ್ರಿ, ನಜೀರ ಮಕಂದಾರ, ಹನುಮಂತ ಕಲ್ಲಕುಟಕರ, ಚನ್ನಪ್ಪ ಮನವಡ್ಡರ, ಶೇಖಪ್ಪ ಕಲ್ಲವಡ್ಡರ, ಭೀಮಪ್ಪ ಕಲ್ಲವಡ್ಡರ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದರು.

ಏನಾಗಿತ್ತು?: ಬುಧವಾರ ರಾತ್ರಿ ಹುಬ್ಬಳ್ಳಿ ಗೋಕುಲ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುತ್ತಿಗೆದಾರ ಮೋಹನ ಚವ್ಹಾಣ ಎಂಬುವವರನ್ನು ಬಸಪ್ಪ ದಳವಾಯಿ ಸೇರಿದಂತೆ 10ಕ್ಕೂ ಹೆಚ್ಚು ಜನರ ತಂಡ ಮಾರಕಾಸ್ತ್ರಗಳನ್ನು ತೋರಿಸಿ, ಹಲ್ಲೆ ಮಾಡಿ ಕಾರಿನಲ್ಲಿ ಅಪಹರಣ ಮಾಡಿಕೊಂಡು ಹೋಗಿದ್ದರು. ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಅಪಹರಣ ಕುರಿತು ಮೋಹನ ಸಹೋದರ ಅರವಿಂದ ಚವ್ಹಾಣ ದೂರು ನೀಡಿದ್ದರು ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆಗಿಳಿದ ಪೊಲೀಸರು ವಿಮಾನ ನಿಲ್ದಾಣದ ಬಳಿ ಕಾರ್ ತಡೆಯಲು ಯತ್ನಿಸಿದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಿದ್ದರು. ಆದರೂ ಆರೋಪಿಗಳ ಬೆನ್ನು ಬಿದ್ದ ದ ಪೊಲೀಸರು ಧಾರವಾಡದ ಕೆ.ಸಿ. ಪಾರ್ಕ್ ಬಳಿ ಪ್ರಮುಖ ಆರೋಪಿ ಬಸಪ್ಪ ದಳವಾಯಿ ಸೇರಿದಂತೆ 10 ಜನರನ್ನು ವಶಕ್ಕೆ ಪಡೆಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೂರು ಪ್ರಕರಣಗಳು ದಾಖಲಾಗಿವೆ ಎಂದರು.

ಅಪಹರಣಕ್ಕೆ ಒಳಗಾಗಿದ್ದ ಗುತ್ತಿಗೆದಾರ ಮೋಹನ ಚವ್ಹಾಣ ಅವರನ್ನು ಬೆಳಗಾವಿ ಜಿಲ್ಲೆ ಬೈಲಹೊಂಗಲ ಬಳಿ ರಕ್ಷಿಸಲಾಗಿದೆ. ಸಬ್‌ಜೈನ್ ಕಾಮಗಾರಿಯನ್ನು ಪಡೆದಿದ್ದ ಮೋಹನ, ಬಸಪ್ಪ ದಳವಾಯಿಗೆ ನೀಡಿದ್ದರು. ಹಣ ಕೊಡುವ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿತ್ತು. ಹಿಂದೊಮ್ಮೆ ರಾಜೀಸಂಧಾನ ನಡೆದಿತ್ತು. ಈಗ ಅಪಹರಣ ಮಾಡಲಾಗಿತ್ತು. ಹಣಕಾಸಿನ ವ್ಯವಹಾರದ ಕಾರಣಕ್ಕಾಗಿ ಈ ಅಪಹರಣ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಪ್ರಮುಖ ಆರೋಪಿ ಬಸಪ್ಪ ದಳವಾಯಿ ಮೇಲೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವ ಮಾಹಿತಿ ಇದೆ ಎಂದರು.

ಈ ಘಟನೆಗೆ ಸಂಬಂಧಿಸಿದಂತೆ ಇನ್ನೂ 10ಕ್ಕೂ ಹೆಚ್ಚು ಜನರು ಭಾಗಿಯಾಗಿರುವ ಶಂಕೆ ಇದೆ. ಆದಷ್ಟು ಬೇಗ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ವಿವರಿಸಿದರು.

ಡಿಸಿಪಿಗಳಾದ ಮಹಾನಿಂಗ ನಂದಗಾವಿ, ಸಿ.ಆರ್. ರವೀಶ, ಎಸಿಪಿ ಡಾ. ಶಿವರಾಜ ಕಟಕಭಾವಿ, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಎಂ.ಎಸ್. ಹೂಗಾರ, ಪ್ರವೀಣ ನೀಲಮ್ಮನವರ ಇತರರು ಇದ್ದರು.