ಜಿಲ್ಲೆ

ಜ್ವರ, ಉಸಿರಾಟದ ತೊಂದರೆಯಿಂದ 10 ತಿಂಗಳ ಮಗು ಮೃತ್ಯು

Udupi

ಕಾರ್ಕಳ: ತಾಲೂಕಿನ ಮಿಯ್ಯರು ಗ್ರಾಮದ ಕಾಜರಬೈಲು ಎಂಬಲ್ಲಿ ಜ್ವರ ಮತ್ತು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 10 ತಿಂಗಳ ಮಗು ಬುಧವಾರ ಮಧ್ಯಾಹ್ನ ಮನೆಯಲ್ಲೇ ಮೃತಪಟ್ಟಿದೆ.

ಮೂಲತಃ ವಿಜಯಪುರ ಜಿಲ್ಲೆಯ ಮುದ್ದೆ ಕೇಶವಪುರದ ದಂಪತಿ ಕಾಜರಬೈಲು ಎಂಬಲ್ಲಿ ನೆಲೆಸಿದ್ದು, ಏಪ್ರಿಲ್ ತಿಂಗಳಲ್ಲಿ ಊರಿಗೆ ಹೋಗಿದ್ದು 10 ದಿನಗಳ ಹಿಂದಷ್ಟೇ ಮರಳಿದ್ದರು. ಜೂನ್ 28ರಂದು ರಾತ್ರಿ ಮಗುವಿಗೆ ಜ್ವರ ಕಾಣಿಸಿಕೊಂಡು ಉಸಿರಾಟದ ತೊಂದರೆಯಾದುದರಿಂದ ಮರುದಿನ ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬುಧವಾರ ಮಧ್ಯಾಹ್ನ ಮಲಗಿದ್ದ ಮಗುವನ್ನು ನೀರು ಕುಡಿಸಲೆಂದು ತಾಯಿ ಎಬ್ಬಿಸಲು ಮುಂದಾಗಿದ್ದಾಗ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಹೆತ್ತವರು ಮಗುವನ್ನು ಕಾರ್ಕಳ ತಾಲೂಕು ಆಸ್ಪತ್ರೆಗೆ ತಂದರಾದರೂ ಅಷ್ಟೊತ್ತಿಗೆ ಮಗು ಇಹಲೋಕ ತ್ಯಜಿಸಿರುವುದನ್ನು ವೈದ್ಯರು ದೃಢಪಡಿಸಿದರು. ಮೃತದೇಹವನ್ನು ಅದೇ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಮಗುವಿನ ಗಂಟಲ ದ್ರವ ಪರೀಕ್ಷೆಯ ವರದಿಗೆ ಕಾಯಲಾಗುತ್ತಿದೆ.