ಜಿಲ್ಲೆ

ಸ್ವಹಿತಾಸಕ್ತಿ ಪಿಐಎಲ್​ಗೆ 10 ಲಕ್ಷ ರೂ. ದಂಡ!; ವ್ಯವಹಾರ ನಡೆಸಿದ್ದ ಸಂಸ್ಥೆ ವಿರುದ್ಧವೇ ಅರ್ಜಿ, ಕಂಪನಿ ವಿರುದ್ಧ ಮಾಲಿನ್ಯ ಆರೋಪ

Webdesk - Ravikanth

ಬೆಂಗಳೂರು: ಕಾಂಗ್ರೆಸ್ ಮುಖಂಡ ಪ್ರಮೋದ್ ಮಧ್ವರಾಜ್ ಪಾಲುದಾರಿಕೆ ಹೊಂದಿರುವ ರಾಜ್ ಫಿಶ್ ಮೀಲ್ ಮತ್ತು ಆಯಿಲ್ ಕಂಪನಿ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಕೋರಿ ಪಿಐಎಲ್ ಸಲ್ಲಿಸಿದ್ದ ಉದ್ಯಮಿಯೊಬ್ಬರಿಗೆ ಹೈಕೋರ್ಟ್ 10 ಲಕ್ಷ ರೂ. ದಂಡ ವಿಧಿಸಿದೆ.

ಸಂಸ್ಥೆಯು ಸತ್ತ ಮೀನುಗಳು ಮತ್ತು ತ್ಯಾಜ್ಯವನ್ನು ಉಡುಪಿಯ ಮಲ್ಪೆ ನದಿಗೆ ಹರಿಬಿಡುವ ಮೂಲಕ ಪರಿಸರ ಮಾಲಿನ್ಯ ಉಂಟು ಮಾಡುತ್ತಿದೆ ಎಂದು ಆರೋಪಿಸಿ ಉದ್ಯಮಿ ಪ್ರಶಾಂತ್ ಅಮಿನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಸಿಜೆ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು. ವಿಚಾರಣೆ ಸಂದರ್ಭದಲ್ಲಿ, ಅರ್ಜಿದಾರರು ವ್ಯವಹಾರ ಹಾಗೂ ವೈಯಕ್ತಿಕ ಹಿತಾಸಕ್ತಿಯಿಂದ ಪಿಐಎಲ್ ಸಲ್ಲಿಸಿರುವ ವಿಚಾರವನ್ನು ಗಮನಿಸಿದ ಪೀಠ, ಅರ್ಜಿಯನ್ನು ವಜಾಗೊಳಿಸಿ, 10 ಲಕ್ಷ ರೂ. ದಂಡ ವಿಧಿಸಿತು. ದಂಡದ ಮೊತ್ತವನ್ನು 1 ತಿಂಗಳ ಒಳಗೆ ಕರ್ನಾಟಕ ವಕೀಲರ ಗುಮಾಸ್ತರ ಕಲ್ಯಾಣ ನಿಧಿಗೆ ಜಮೆ ಮಾಡಬೇಕು. ಹಣ ಪಾವತಿಸದಿದ್ದರೆ, ಉಡುಪಿ ಜಿಲ್ಲಾಧಿಕಾರಿ ದಂಡ ಮೊತ್ತವನ್ನು ಅರ್ಜಿದಾರರಿಂದ ವಸೂಲಿ ಮಾಡಬೇಕು ಎಂದು ನಿರ್ದೇಶಿಸಿತು.

ಕಾನೂನು ಪ್ರಕ್ರಿಯೆ ದುರ್ಬಳಕೆ: ಅರ್ಜಿದಾರ ಪ್ರಶಾಂತ್ ಅಮಿನ್ ರಾಜ್ ಫಿಷ್ ಮೀಲ್ ಮತ್ತು ಆಯಿಲ್ ಕಂಪನಿಯೊಂದಿಗೆ ವ್ಯಾಪಾರ-ವಹಿವಾಟು ನಡೆಸಿದ್ದಾರೆ. ಕಂಪನಿಗೆ ಮೀನು ಪೂರೈಕೆ ಮಾಡುತ್ತಿದ್ದರಿಂದ, 2013-21ರ ಅವಧಿಯಲ್ಲಿ ಅರ್ಜಿದಾರರಿಗೆ 95 ಕೋಟಿಗೂ ಅಧಿಕ ಹಣ ಕಾಲ ಕಾಲಕ್ಕೆ ಪಾವತಿಸಲಾಗಿದೆ. ಸಂಸ್ಥೆ ಮತ್ತು ಅರ್ಜಿದಾರರ ನಡುವೆ ಒಪ್ಪಂದ ಮುರಿದು ಬಿದ್ದ ನಂತರ ಕಂಪನಿ ಸತ್ತ ಮೀನು ಹಾಗೂ ತ್ಯಾಜ್ಯವನ್ನು ಮಲ್ಪೆ ನದಿಗೆ ಬಿಡುತ್ತಿದೆ. ಇದರಿಂದ, ನದಿ ನೀರು ಕಲುಷಿತಗೊಳ್ಳುವ ಜತೆಗೆ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಲಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ.

ಅರ್ಜಿಗೆ ಆಕ್ಷೇಪಣೆ ಸಲ್ಲಿಸಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕಂಪನಿ ಬಗ್ಗೆ ಯಾವುದೇ ಆರೋಪ ಮಾಡಿಲ್ಲ. ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕಾಣುತ್ತಿಲ್ಲ. ಕೇವಲ ವ್ಯಾಪಾರ, ವೈಯಕ್ತಿಕ ಹಿತಾಸಕ್ತಿಯಿಂದ ಅರ್ಜಿ ಸಲ್ಲಿಸಲಾಗಿದೆ. ಸಂಸ್ಥೆ ಜತೆ ವ್ಯವಹಾರ ನಡೆಸಿರುವ ವಿಚಾರವನ್ನು ಅರ್ಜಿದಾರರೂ ನಿರಾಕರಿಸಿಲ್ಲ. ಆದರೆ, ಆ ವಿಚಾರವನ್ನು ಅರ್ಜಿಯಲ್ಲಿ ಮರೆಮಾಚಿದ್ದಾರೆ. ಇದು ಕಾನೂನು ಪ್ರಕ್ರಿಯೆ ದುರ್ಬಳಕೆಯಾಗಿದೆ ಎಂದು ಹೈಕೋರ್ಟ್ ಹೇಳಿದೆ.

ದಂಡ ಮೊತ್ತ ಕಡಲೆಕಾಯಿಯಂತೆ: ಅರ್ಜಿದಾರರು ದೊಡ್ಡ ಉದ್ಯಮಿಯಾಗಿದ್ದಾರೆ. ರಾಜ್ ಫಿಶ್ ಮೀಲ್ ಮತ್ತು ಆಯಿಲ್ ಕಂಪನಿಯಿಂದಲೇ 95 ಕೋಟಿ ರೂ. ಗೂ ಅಧಿಕ ಮೊತ್ತದ ವ್ಯವಹಾರ ನಡೆಸಿದ್ದಾರೆ. ಅವರಿಗೆ 10 ಲಕ್ಷ ರೂ. ಕಡಲೆಕಾಯಿಯಂತೆ ಸಣ್ಣ ಮೊತ್ತವಾಗಿದೆ. ಅವರ ಆರ್ಥಿಕ ಪರಿಸ್ಥಿತಿಗೆ ಈ ದಂಡ ಮೊತ್ತವನ್ನು ಭರಿಸಬಹುದಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.