ಮೈಸೂರು: ನಗರದಲ್ಲಿ ಮಾರ್ಚ್ 26ರಂದು ಆಯೋಜಿಸಿರುವ ಜೆಡಿಎಸ್‌ನ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭದಲ್ಲಿ 10 ಲಕ್ಷ ಕಾರ್ಯಕರ್ತರನ್ನು ಸೇರಿಸುವ ಗುರಿ ಹೊಂದಲಾಗಿದ್ದು, ಈ ಸಂಬಂಧ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ನಗರದ ಶ್ರೀ ತ್ರಿಪುರಸುಂದರಮ್ಮಣ್ಣಿ ದೇವಸ್ಥಾನದ (ರಿಂಗ್ ರಸ್ತೆ) ಪಕ್ಕದ ಜಾಗದಲ್ಲಿ ಗುರುವಾರ ವೇದಿಕೆ ನಿರ್ಮಾಣಕ್ಕೆ ಪೂಜೆ ಸಲ್ಲಿಸುವ ಮೂಲಕ ಸಮಾರೋಪ ಸಮಾರಂಭದ ಸಿದ್ಧತಾ ಕಾರ್ಯಕ್ಕೆ ಚಾಲನೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ 100 ಎಕರೆ ಜಾಗದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಜಿ.ಟಿ. ದೇವೇಗೌಡ, ಸಿ.ಎಸ್. ಪುಟ್ಟರಾಜು ಮಾರ್ಗದರ್ಶನದಲ್ಲಿ ಕೆ.ಮಹದೇವು, ಅಶ್ವಿನ್‌ಕುಮಾರ್ ಸೇರಿದಂತೆ ಎಲ್ಲ ಹಿರಿಯ ಮುಖಂಡರು ಚರ್ಚಿಸಿ ಪಂಚರತ್ನಯಾತ್ರೆ ಸಮಾರೋಪ ಮೈಸೂರಿನಲ್ಲಿ ಆಗಬೇಕು ಎಂದು ಕುಮಾರಸ್ವಾಮಿ ಬಳಿ ಮನವಿ ಮಾಡಿದ್ದೆವು. ಅದಕ್ಕೆ ಅವರು ಒಪ್ಪಿಗೆ ಸೂಚಿಸಿದರು. ಎಚ್.ಡಿ.ಕುಮಾರಸ್ವಾಮಿ ಕೂಡ ಎರಡು ದಿನಗಳ ಹಿಂದೆ ಸ್ಥಳವನ್ನು ಪರಿಶೀಲಿಸಿದ್ದಾರೆ ಎಂದರು.
ಪಂಚರತ್ನ ರಥಯಾತ್ರೆಗೆ ಎಲ್ಲೆಡೆ ಉತ್ತಮ ಸ್ಪಂದನೆ ದೊರೆತಿದೆ. ಹಳೇ ಮೈಸೂರು ಭಾಗ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪಂಚರತ್ನ ಯೋಜನೆಗಳು ತಮಗೆ ಅನುಕೂಲ ಆಗುತ್ತವೆ ಎನ್ನುವ ನಂಬಿಕೆ ಜನರಿಗೆ ಬಂದಿದೆ. ಹಾಗಾಗಿ ಬೃಹತ್ ಸಮಾರೋಪ ಸಮಾರಂಭ ನಡೆಸಿ ಲಕ್ಷಾಂತರ ಕಾರ್ಯಕರ್ತರನ್ನು ಸೇರಿಸುತ್ತೇವೆ. ಕಾರ್ಯಕ್ರಮ ಯಶಸ್ಸಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ ಎಂದರು.
ಜೆಡಿಎಸ್‌ನ ಕೆಲ ಶಾಸಕರು ಕಾಂಗ್ರೆಸ್ ಪಕ್ಷ ಸೇರಲು ಸಿದ್ಧರಾಗಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿಯವರು ಹೇಳುತ್ತಿದ್ದಾರೆ ಅಷ್ಟೆ. ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿಯ ಅನೇಕ ನಾಯಕರು ಜೆಡಿಎಸ್‌ಗೆ ಬಂದಿದ್ದಾರೆ. ಕೆಲ ಹಾಲಿ ಶಾಸಕರು ಕೂಡ ಬರಲು ಮುಂದಾಗಿದ್ದಾರೆ. ಈ ಸಂಬಂಧ ಕುಮಾರಸ್ವಾಮಿ ಅವರ ಬಳಿಯೂ ಚರ್ಚೆ ನಡೆಸಿದ್ದಾರೆ ಎಂದರು.
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ, ನಂಜನಗೂಡು, ಚಾಮರಾಜ, ನರಸಿಂಹರಾಜ ಕ್ಷೇತ್ರಗಳಿಗೆ ಎರಡನೇ ಪಟ್ಟಿಯಲ್ಲಿ ಅಭ್ಯರ್ಥಿ ಘೋಷಣೆ ಮಾಡಲಾಗುತ್ತದೆ. ಮಾರ್ಚ್ 26ರ ನಂತರ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ ಎಂದರು.
ಮೈಸೂರಿನವರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಿ 5 ವರ್ಷಗಳ ಕಾಲ ಆಡಳಿತ ನಡೆಸಿದರು. ಅತೀ ಹೆಚ್ಚು ಸಾಲ ಮಾಡಿದ ಕೀರ್ತಿ ಅವರಿಗೆ ಸಲ್ಲಬೇಕು. ಇಂದು ಬಿಜೆಪಿ ಸರ್ಕಾರ ಅವರನ್ನು ಮೀರಿಸಿದೆ. ಆದ್ದರಿಂದ ಎರಡು ರಾಷ್ಟ್ರೀಯ ಪಕ್ಷಗಳನ್ನು ಧಿಕ್ಕರಿಸಿ ಜನರು ಜೆಡಿಎಸ್ ಕಡೆ ಬರುತ್ತಿದ್ದಾರೆ. ಈ ಬಾರಿ ಜೆಡಿಎಸ್‌ಗೆ ಬಹುಮತ ಸಿಗಲಿದೆ ಎಂದರು.
ಶಾಸಕರಾದ ಸಿ.ಎಸ್. ಪುಟ್ಟರಾಜು, ಕೆ. ಮಹದೇವ್, ಎಂ. ಅಶ್ವಿನ್‌ಕುಮಾರ್, ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ನಗರಾಧ್ಯಕ್ಷ ಕೆ.ಟಿ. ಚಲುವೇಗೌಡ, ಮುಖಂಡರಾ ಕೆ.ವಿ. ಮಲ್ಲೇಶ್ ಇತರರಿದ್ದರು.