ಬ್ಯಾಡಗಿ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಾದ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಿದ ಕೇಂದ್ರ ಸರ್ಕಾರ ಈಗ ಎಥೆಲಾನ್ ಸಿದ್ಧಪಡಿಸಲು ಅಕ್ಕಿ ಪೂರೈಸುತ್ತಿದೆ. ಆದರೆ, ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಅನ್ನಭಾಗ್ಯ ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸ್ಪಷ್ಟಪಡಿಸಿದರು.
ಪಟ್ಟಣದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಗೃಹಜ್ಯೋತಿ ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರ ಅಧಿಕಾರಕ್ಕೆ ಬಂದು 60 ದಿನಗಳಲ್ಲಿ ಐದು ಯೋಜನೆಗಳಿಗೆ ಚಾಲನೆ ನೀಡಿದ್ದೇವೆ. ಗ್ಯಾರಂಟಿ ಯೋಜನೆ ಜಾರಿಗೆ ತಂದರೆ ಅಭಿವೃದ್ಧಿ ಕುಂಠಿತ ಎನ್ನುವ ವಿಪಕ್ಷಗಳಿಗೆ ಸರಿಯಾಗಿ ಉತ್ತರ ನೀಡಿದ್ದೇವೆ ಎಂದರು.
ಅಕ್ಕಿ ಕೊರತೆಯದರೂ ಸರ್ಕಾರ ಯೋಜನೆಯನ್ನು ಕೈಬಿಡಲಿಲ್ಲ. ಬದಲಾಗಿ ಫಲಾನುಭವಿಗಳ ಖಾತೆಗೆ ಹಣ ಹಾಕಿದೆ. ಮುಂಬರುವ ದಿನಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡುವ ಮೂಲಕ ಕೊಟ್ಟ ಮಾತಿನಂತೆ 10 ಕೆಜಿ ಅಕ್ಕಿ ವಿತರಿಸುತ್ತೇವೆ. ದೇಶದಲ್ಲಿ ಅತಿ ಹೆಚ್ಚು ಜಿಎಸ್ಟಿ ನೀಡುವ ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಲ ಸ್ಥಾನ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ, ಕೇಂದ್ರ ಸರ್ಕಾರವು ರಾಜ್ಯಕ್ಕೆ ಕೊಡಬೇಕಿದ್ದ ಪಾಲು ನೀಡುತ್ತಿಲ್ಲ ಎಂದರು.
ಗೃಹಜ್ಯೋತಿ ಯೋಜನೆಯಡಿ ರಾಜ್ಯದಲ್ಲಿ 2.14 ಕೋಟಿ ಕುಟುಂಬಗಳಿಗೆ ಲಾಭ ಸಿಗಲಿದೆ. ಈ ಪೈಕಿ 1.42 ಕೋಟಿ ಕುಟುಂಬಗಳು ಯೋಜನೆಯಡಿ ನೋಂದಾಯಿಸಿವೆ. ಜಿಲ್ಲೆಯಲ್ಲಿ ಬ್ಯಾಡಗಿಯಲ್ಲಿ ಅತಿಹೆಚ್ಚು ಕುಟುಂಬಗಳು ಹೆಸರು ನೋಂದಾಯಿಸಿವೆ. ಜಿಲ್ಲೆಯಲ್ಲಿ ನೀರಾವರಿ, ಕುಡಿಯುವ ನೀರು ಪೂರೈಕೆ ಯೋಜನೆಗೆ ಒತ್ತು ನೀಡಲಾಗುವುದು ಎಂದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ ಮಾತನಾಡಿ, ಕಾಂಗ್ರೆಸ್ ಸರ್ಕಾರ ಕೊಟ್ಟ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದರು.
ಶಾಸಕ ಬಸವರಾಜ ಶಿವಣ್ಣನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಕಾಶ ಕೋಳಿವಾಡ ಮಾತನಾಡಿದರು. ಶಾಸಕ ಯು.ಬಿ. ಬಣಕಾರ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಂ.ಎಂ. ಹಿರೇಮಠ, ಸೋಮಣ್ಣ ಬೇವಿನಮರದ, ದಾನಪ್ಪ ಚೂರಿ, ಹಾಲೇಶ ಅಂತರವಳ್ಳಿ, ವೀರನಗೌಡ ಪಾಟೀಲ, ನಾಗಪ್ಪ ಎಸ.ಎಚ್. ಫಕೀರಮ್ಮ ಚಲವಾದಿ, ಹೆಸ್ಕಾಂ ಇಂಜಿನಿಯರ್ ಕೃಷ್ಣಪ್ಪ ಹೆಂಡಗಾರ, ನಾಗಪ್ಪ ಬೆಳಕೇರಿ ಇದ್ದರು.
ಶಕ್ತಿ ಯೋಜನೆಯಡಿ ಮಹಿಳೆಯರು ಬಸ್ಗಳಲ್ಲಿ ಉಚಿತ ಪ್ರಯಾಣದ ಮೂಲಕ ಬೀದರ್ನಿಂದ ಚಾಮರಾಜನಗರ ಜಿಲ್ಲೆಯವರೆಗೂ ಓಡಾಡುತ್ತಿದ್ದಾರೆ. ರಾಜ್ಯದ ಬಹುತೇಕ ಧಾರ್ವಿುಕ ಕೇಂದ್ರ, ಮಠ, ಮಂದಿರಗಳು ಮಹಿಳಾ ಭಕ್ತರಿಂದ ತುಂಬಿವೆ. ಬಹುತೇಕರು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುವ ಮೂಲಕ ಯೋಜನೆ ಲಾಭ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ತಮ್ಮ ಭಾಷಣದಲ್ಲಿ ‘ಮಳೆ ಹಿನ್ನೆಡೆಯಿಂದ ರೈತರಿಗೆ ತೊಂದರೆಯಾಗುವ ಸಂಭವವಿದೆ. ಮಳೆ ಕೊರತೆಯಾದರೆ ಸರ್ಕಾರ ಆ. 15ರ ಬಳಿಕ ಸರ್ಕಾರ ಮೋಡ ಬಿತ್ತನೆ ಮಾಡಲಿದೆ’ ಎಂದರು. ಬಳಿಕ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ‘ಜಿಲ್ಲೆಗೆ ಉಸ್ತುವಾರಿ ಮಂತ್ರಿಯಾಗಿ ಬಂದಾಗ ಸಮರ್ಪಕ ಮಳೆಯಾಗಿರಲಿಲ್ಲ. ಈಗ ಮಳೆಯಾಗಿದ್ದು, ರೈತರು ಬೆಳೆ ಬೆಳೆಯುತ್ತಿದ್ದಾರೆ. ದೇವರ ದಯೆಯಿಂದ ಮಳೆ ಕೊರತೆ ಆಗುವುದು ಬೇಡ, ಜಿಲ್ಲೆಗೆ ಮೋಡ ಬಿತ್ತನೆಗೆ ವಿಮಾನ ಹಾರಾಟ ಬೇಡ’ ಎಂದು ಹಾಸ್ಯ ಚಟಾಕಿ ಹಾರಿಸಿದರು.