ಭಟ್ಕಳ: ದಿ ಜನತಾ ಕೋ.ಆಪ್ ಕ್ರೆಡಿಟ್ ಸೊಸೈಟಿ ಠೇವುಗಳು 209 ಕೋಟಿ ರೂ. ಇದ್ದು, ಏರಿಕೆ ಮಟ್ಟವನ್ನು ಕಾಯ್ದುಕೊಂಡು ಬಂದಿದೆ. ಈ ವರ್ಷದಲ್ಲಿ ಸಂಘವು 3.28 ಕೋಟಿ ರೂ. ನಿವ್ವಳ ಲಾಭಗಳಿಸಿದ್ದು ಶೇ. 10ರಂತೆ ಲಾಭಾಂಶ ನೀಡಲು ಉದ್ದೇಶಿಸಿದೆ ಎಂದು ಸಂಘದ ಅಧ್ಯಕ್ಷ ಮಂಕಾಳ ಎಸ್. ವೈದ್ಯ ಹೇಳಿದರು.
ಪಟ್ಟಣದ ಮುಗಳಿಕೋಣೆ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.
40 ವರ್ಷಗಳ ಹಿಂದೆ ಮಾಜಿ ಶಾಸಕರಾದ ಡಾ. ಚಿತ್ತರಂಜನ ಮತ್ತು ಕೆಲವು ಹಿರಿಯರು ಸ್ಥಾಪಿಸಿದ ಈ ಸಂಘ ಇಂದು ಆರ್ಥಿಕ ಅವಶ್ಯಕತೆ ಪೊರೈಸುವ ಸದೃಢ ಸಂಸ್ಥೆಯಾಗಿದೆ. ವರ್ಷದ ಆರಂಭಕ್ಕೆ ಸಂಘದಲ್ಲಿ 32,876 ಶೇರುದಾರ ಸದಸ್ಯರಿದ್ದು, ಒಟ್ಟು 33,991 ಸದಸ್ಯರನ್ನು ಹೊಂದಿದೆ. ಸಂಘದ ಶೇರು ಬಂಡವಾಳ ರೂ. 11 ಕೋಟಿ 30ಲಕ್ಷದಷ್ಟಿರುತ್ತದೆ. ಸಂಘದ ಸದಸ್ಯರಿಂದ ರೂ. 224 ಕೋಟಿ ರೂ. ಸಾಲ ವಸೂಲಾತಿ ಆಗಬೇಕಿದೆ.
ಸಂಘವು ಪ್ರತಿ ವರ್ಷ ತಾನು ಗಳಿಸಿದ ಲಾಭಾಂಶದಲ್ಲಿ ತನ್ನ ಕಾರ್ಯಕ್ಷೇತ್ರದಲ್ಲಿ ಬರುವ ಶಾಲಾ ಕಾಲೇಜ್‌ಗಳಿಗೆ ಹಾಗೂ ವಿದ್ಯಾರ್ಥಿಗಳ ವಿದ್ಯಾರ್ಜನೆಗೂ ಧನ ಸಹಾಯ ಮಾಡಿದ್ದಲ್ಲದೇ ಮನೆ ಮತ್ತು ಆಸ್ತಿಗಳನ್ನು ಕಳೆದುಕೊಂಡ ಸದಸ್ಯರಿಗೆ, ಹೆಚ್ಚಿನ ರೀತಿಯಲ್ಲಿ ಧನ ಸಹಾಯ ಈವರೆಗೂ ಮಾಡುತ್ತಾ ಬಂದಿದೆ. ಸಂಘವು ಈಗಾಗಲೇ ಪ್ರಧಾನ ಕಚೇರಿ ಸೇರಿ 17 ಶಾಖೆಗಳನ್ನು ಹೊಂದಿದ್ದು, ಎಲ್ಲ ಶಾಖೆಗಳು ಲಾಭದಲ್ಲಿ ಮುನ್ನೆಡೆಯುತ್ತಿವೆ ಎಂದರು.
ಬ್ಯಾಂಕಿನ ಉಪಾಧ್ಯಕ್ಷ ಪರಮೇಶ್ವರ ದೇವಾಡಿಗ, ನಾಗಪ್ಪ ಪೊಮ್ಮ ನಾಯ್ಕ, ಕೃಷ್ಣಾ ನಾಯ್ಕ, ಕೃಷ್ಣಾನಂದ ಪೈ, ಪರಮೇಶ್ವರ ನಾಯ್ಕ, ವೆಂಕಟ್ರಮಣ ಮೊಗೇರ, ತಿಮ್ಮಪ್ಪ ನಾಯ್ಕ, ರಾಮಚಂದ್ರ ಕಿಣಿ, ಅಲ್ಬರ್ಟ ಡಿಕೋಸ್ತಾ, ಲಕ್ಷ್ಮೀ ಮಾದೇವ ನಾಯ್ಕ, ಪ್ರ.ಕಾ. ವಿನಯ ನಾಯ್ಕ ಇತರರಿದ್ದರು.