ಜಿಲ್ಲೆ

ನಂದಿನಿ ಉತ್ಪನ್ನಗಳಿಗೆ ಶೇ.10 ರಿಯಾಯಿತಿ ಘೋಷಣೆ

ಮೈಸೂರು: ಈ ಬಾರಿ ನಾಡಹಬ್ಬ ದಸರೆಗೆ ಮೈಮುಲ್ನಿಂದ ನಂದಿನಿ ಉತ್ಪನ್ನಗಳನ್ನು ಶೇ.10ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದಾಗಿ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (ಮೈಮುಲ್) ಅಧ್ಯಕ್ಷ ಆರ್. ಚೆಲುವರಾಜು ಹೇಳಿದರು.
ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ ಮಳಿಗೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಒಕ್ಕೂಟ ಜನರಿಗೆ ಹೊಸ ಕೊಡುಗೆ ನೀಡುವ ಉದ್ದೇಶದಿಂದ ದಸರೆಯಲ್ಲಿ ಶೇ.10 ರಷ್ಟು ರಿಯಾಯಿತಿ ದರದಲ್ಲಿ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ನಿರ್ಧರಿಸಲಾಗಿದೆ ಎಂದು ಹೇಳಿದರು.
ಶೀಘ್ರದಲ್ಲೇ ನಂದಿನಿ ಚಾಕಲೇಟ್:
ಮೈಮುಲ್ ಉತ್ಪನ್ನಗಳ ಮಾರಾಟ ಹೆಚ್ಚಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಂದಿನಿ ಚಾಕಲೇಟ್, ಪನ್ನೀರ್‌ಗಳನ್ನು ತಯಾರು ಮಾಡುವ ಯೋಜನೆ ಬಗ್ಗೆ ಚಿಂತನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಸರ್ಕಾರಕ್ಕೆ ಪೂರ್ಣ ವರದಿ (ಡಿಪಿಆರ್) ಸಲ್ಲಿಸಲಾಗುವುದು ಎಂದು ತಿಳಿಸಿದರು.
ಪ್ರಸ್ತುತ ಮೈಮುಲ್ ಡೇರಿಯಲ್ಲಿ ಬರೋಬ್ಬರಿ 9 ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದ್ದು, ಇದರಲ್ಲಿ 4 ಲಕ್ಷ ಲೀಟರ್ ಹಾಲನ್ನು ಜನತೆ ಬಳಸುತ್ತಿದ್ದಾರೆ. ಉಳಿದ ಹಾಲನ್ನು ಪುಡಿ ಮಾಡಿ ಶೇಖರಿಸಿ ಉಪ ಉತ್ಪನ್ನಗಳನ್ನು ತಯಾರು ಮಾಡಲಾಗುತ್ತಿದೆ ಎಂದರು.
ರೈತರ ಹಿತ ದೃಷ್ಟಿಯಿಂದ ಚಾಕ್ ಲೆಟ್, ಪನ್ನೀರ್, ಚೀಸ್ ಸೇರಿ ಹಲವು ಉಪ ಉತ್ಪನ್ನಗಳ ತಯಾರಿಕೆಗೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಕೇರಳದಲ್ಲಿ 20 ಸಾವಿರ ಲೀಟರ್ ಹಾಲು ಮಾರಾಟ ಮಾಡುತ್ತಿದ್ದೇವೆ. ತಮಿಳು ಚೆನೈನಲ್ಲಿ 50 ಸಾವಿರ ಲೀಟರ್ ಹಾಲು ಮಾರಾಟ ಮಾಡುತ್ತಿದ್ದು, ಅವುಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತಷ್ಟು ಪ್ರಯತ್ನ ಮಾಡಲಾಗುವುದು ಎಂದರು.
ಐದು ದಶಕದ ಹಿಂದೆ ಪ್ರಾರಂಭಗೊಂಡ ಮೈಮುಲ್ನಲ್ಲಿ ಈಗ 1205 ಸಂಘಗಳಾಗಿವೆ. 398 ಮಹಿಳಾ ಸಂಘಗಳಿವೆ. ರೈತರು ಇನ್ನೂ ಶೇ.25ರಷ್ಟು ಪಾಲಿಸಿಯ ಮೊತ್ತ ಹಾಗೂ ಜಿಎಸ್‌ಟಿ ಕಟ್ಟಬೇಕು. ಯಾವುದೇ ಕಾರಣಕ್ಕೂ ಇದಕ್ಕಿಂತ ಹೆಚ್ಚಿನ ಮೊತ್ತ ಕಟ್ಟಬೇಡಿ ಎಂದರು.
ನಂದಿನಿಯ ಉತ್ಪನ್ನಗಳಾದ ಪೇಡಾ, ಮೈಸೂರು ಪಾಕ, ಕೇಸರಿ ಪೇಡಾ, ಬರ್ಫಿ, ಗೋದಿ, ಲಾಡು ಹಾಗೂ ಕ್ಯಾಷೋ ಬರ್ಫಿ, ಮ್ಯಾಂಗೋ ಲಸ್ಸಿ ಇತರೆ ತಂಪು ಪಾನೀಯಗಳನ್ನು ಹೆಚ್ಚೆಚ್ಚು ಬಳಸಿ ಎಂದು ಮನವಿ ಮಾಡಿದ್ದಲ್ಲದೇ, ರೈತರು, ಗ್ರಾಹಕರು, ವ್ಯಾಪಾರಸ್ಥರಿಗೆ ದಸರಾ ಶುಭ ಕೋರಿದರು.
ಒಕ್ಕೂಟದ ನಿರ್ದೇಶಕ ಎ.ಟಿ.ಸೋಮಶೇಖರ್, ಕೆ.ಜಿ.ಮಹೇಶ್, ಕೆ.ಊಮಾಶಂಕರ್, ಸಿ. ಓಂಪ್ರಕಾಶ್, ಪಿ.ಎಂ.ಪ್ರಸನ್ನ, ಕೆ.ಈರೇಗೌಡ, ಕೆ.ಎಸ್.ಕುಮಾರ್, ದಾಕ್ಷಾಯಣಿ ಬಸವರಾಜಪ್ಪ, ಲೀಲಾ ಬಿ.ಕೆ.ನಾಗರಾಜು, ಬಿ.ನೀಲಾಂಬಿಕೆ ಮಹೇಶ್ ಕುರಹಟ್ಟಿ, ಎ.ಶಿವಗಾಮಿ ಷಣ್ಮುಗಂ, ಬಿ.ಎನ್. ಸದಾನಂದ, ಬಿ.ಗುರುಸ್ವಾಮಿ, ಬಿ.ಎ. ಪ್ರಕಾಶ್, ಎ.ಬಿ. ಮಲ್ಲಿಕಾ ರವಿಕುಮಾರ್, ಸಿ.ಪ್ರಸಾದ್ ರೆಡ್ಡಿ, ಪಶುಸಂಗೋಪನ ಇಲಾಖೆ ಪ್ರತಿನಿಧಿ ಡಾ.ನಾಗರಾಜು, ಎಚ್.ಎಸ್.ಮಂಜುನಾಥ್, ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ ಪ್ರತಿನಿಧಿ ರಜನಿ ತ್ರಿಪಾಠಿ, ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಸುರೇಶ್ ನಾಯ್ಕ ಇತರರು ಇದ್ದರು.