ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ವಿಜಯವಾಣಿ ಹಾಗೂ ದಿಗ್ವಿಜಯ ವಾಹಿನಿ ವತಿಯಿಂದ ಆ. 6ರಂದು ಬೆಂಗಳೂರಿನ 10 ಕಾಲೇಜುಗಳಲ್ಲಿ ಆಯೋಜಿಸಿದ್ದ ಅಂತರ ಕಾಲೇಜು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ 10 ವಿದ್ಯಾರ್ಥಿಗಳಿಗೆ ಸೋಮವಾರ ಸಮಾಧಾನಕರ ಬಹುಮಾನ ವಿತರಣೆ ಮಾಡಲಾಯಿತು.
‘ಟಾರ್ಗೆಟ್-2047’ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಭಾರತ ಸ್ವಾತಂತ್ರ್ಯದ ಶತಮಾನೋತ್ಸವ ಅಂದರೆ ಮುಂದಿನ 25 ವರ್ಷಗಳಲ್ಲಿ ಸಾಧಿಸಬೇಕಿರುವುದೇನು? ಇದರಲ್ಲಿ ಯುವಜನರ ಪಾತ್ರ ಏನು? ಎಂಬ ವಿಷಯ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಬೆಂಗಳೂರು ನಗರದ 10 ಕಾಲೇಜುಗಳ ಪಿಯುಸಿ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಮಾಧಾನಕರ ಬಹುಮಾನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅವರ ಕಾಲೇಜಿಗೆ ತೆರಳಿ ಪ್ರಮಾಣಪತ್ರ ವಿತರಿಸಲಾಯಿತು. ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯಸ್ಥರು ಬಹುಮಾನ ವಿತರಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ವಿಜಯವಾಣಿ ತಂಡದವರು ಭಾಗವಹಿಸಿದ್ದರು.