ಜಿಲ್ಲೆ

10 ಗುಂಟೆ ಜಾಗ ಕಾಂಗ್ರೆಸ್ ಭವನ ಟ್ರಸ್ಟ್​ಗೆ ನೋಂದಣಿ

ಶಿರಸಿ: ನಗರದ ಹೃದಯಭಾಗವಾದ ಇಂದಿರಾನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯ 10 ಗುಂಟೆ ಜಾಗವನ್ನು ಬೆಂಗಳೂರಿನ ಕಾಂಗ್ರೆಸ್ ಭವನ ಟ್ರಸ್ಟ್​ಗೆ ಗಿಫ್ಟ್ ಡೀಡ್ ಮೂಲಕ ನೋಂದಣಿ ಮಾಡಿಕೊಡಲಾಯಿತು.

ಮಹಾತ್ಮ ಗಾಂಧಿ, ನೆಹರು ಟ್ರಸ್ಟ್ ಶಿರಸಿ ಹೆಸರಿನಲ್ಲಿದ್ದ ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಡ ಹಾಗೂ ಅದಕ್ಕೆ ಸಂಬಂಧಿಸಿದ ಜಾಗವನ್ನು ಟ್ರಸ್ಟಿಗಳಾದ ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹಾಗೂ ಹಿರಿಯ ಕಾಂಗ್ರೆಸ್ಸಿಗ, ಸಹಕಾರಿ ಧುರೀಣ ಜಿ.ಟಿ. ಹೆಗಡೆ ತಟ್ಟೀಸರ ಅವರು ದಾನವಾಗಿ ಕಾಂಗ್ರೆಸ್ ಭವನ ಟ್ರಸ್ಟ್​ಗೆ ನೀಡಿದರು. ಟ್ರಸ್ಟಿಗಳು ತಾಲೂಕಾಡಳಿತ ಸೌಧದಲ್ಲಿರುವ ಉಪ ನೋಂದಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆ ಪತ್ರಗಳನ್ನು ಪೂರೈಸಿ ಗಿಪ್ಟ್ ಡೀಡ್ ಮಾಡಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸೂಚನೆಯಂತೆ ಕಾಂಗ್ರೆಸ್ ಪಕ್ಷದ ಎಲ್ಲ ಕಚೇರಿಗಳನ್ನು ಒಂದುಗೂಡಿಸಿ ಅದನ್ನು ಟ್ರಸ್ಟ್​ನಡಿ ತರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭವನ ಕಾರ್ಯದರ್ಶಿ ಎಲ್. ನಾರಾಯಣ, ಟ್ರಸ್ಟಿ ವಿಜಯ ಮುಳಗುಂದ ಸಮ್ಮುಖದಲ್ಲಿ ಕಾಗದ ಪತ್ರ ವ್ಯವಹಾರ ನಡೆಸಲಾಯಿತು.

ಕಾಂಗ್ರೆಸ್ ಕಚೇರಿ ಜಾಗಕ್ಕೆ ಅಂದಾಜು 1.30 ಕೋಟಿ ರೂ. ಮೌಲ್ಯ ಮಾಡಲಾಗಿದೆ. ಅದಕ್ಕಾಗಿ 7.73 ಲಕ್ಷ ಸ್ಟಾಂಪ್ ಡ್ಯೂಟಿ ತುಂಬಲಾಯಿತು. ಈ ವೇಳೆ ಮಾತನಾಡಿದ ಆರ್.ವಿ. ದೇಶಪಾಂಡೆ, 1954ರಲ್ಲಿ ಅಂದಿನ ಪ್ರಧಾನಿ ನೆಹರು ಅವರು ಕಾಂಗ್ರೆಸ್ ಕಚೇರಿಗೆ ಅಡಿಗಲ್ಲು ಹಾಕಿದ್ದರು. ಬಳಿಕ ಟ್ರಸ್ಟಿಗಳು ಬದಲಾಗುತ್ತ ಬಂದರು. ನಾನು ಜಿಲ್ಲಾಧ್ಯಕ್ಷನಾಗಿದ್ದ ಅವಧಿಯಲ್ಲಿ ಕಚೇರಿ ನವೀಕರಣ ಕೈಗೊಳ್ಳಲಾಗಿತ್ತು. ಆದರೀಗ ಅಧಿಕೃತವಾಗಿ ಬೆಂಗಳೂರಿನ ಕಾಂಗ್ರೆಸ್ ಭವನ ಟ್ರಸ್ಟ್​ಗೆ ಜಾಗವನ್ನು ಹಸ್ತಾಂತರ ಮಾಡಲಾಗಿದ್ದು ಇನ್ನುಂದೆ ಅವರು ನಿರ್ವಹಣೆ ಮಾಡಲಿದ್ದಾರೆ. ಇಲ್ಲಿ ಜಿಲ್ಲಾ ಕಚೇರಿ ನಿರ್ಮಾಣ ಆಗಲಿದೆ ಎಂದರು.

ಶಾಸಕ ಭೀಮಣ್ಣ ನಾಯ್ಕ, ಕಾಂಗ್ರೆಸ್ ಜಿಲ್ಲಾ ಧ್ಯಕ್ಷ ಸಾಯಿ ಗಾವಂಕರ, ರಾಜೇಂದ್ರ ಹೆಗಡೆ ತಟ್ಟಿಸರ್, ವೆಂಕಟೇಶ ಹೆಗಡೆ ಹೊಸಬಾಳೆ,ದೀಪಕ ದೊಡ್ಡೂರು, ಜಗದೀಶ ಗೌಡ, ಎಸ್.ಕೆ. ಭಾಗ್ವತ್, ನಾಗರಾಜ ನಾರ್ವೆಕರ್, ಪ್ರಸನ್ನ ಶೆಟ್ಟಿ, ಗಣೇಶ ದಾವಣೆಗರೆ, ಖಾದರ್ ಆನವಟ್ಟಿ, ಜಾಫಿ ಪೀಟರ್ ಇತರರಿದ್ದರು.