ಜಿಲ್ಲೆ

ಇಟಗಿ ಸಹಕಾರ ಸಂಘಕ್ಕೆ 10.70 ಲಕ್ಷ ರೂ. ಲಾಭ

ಸಿದ್ದಾಪುರ: ತಾಲೂಕಿನ ಇಟಗಿಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ 2022-23ನೇ ಸಾಲಿನಲ್ಲಿ 10,70,486ರೂ. ನಿಕ್ಕಿ ಲಾಭಗಳಿಸಿದ್ದು ಷೇರುದಾರ ಸದಸ್ಯರಿಗೆ ಶೇ. 5ರಷ್ಟು ಲಾಭಾಂಶ ನೀಡಲು ತೀರ್ವನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ರಮೇಶ ಎಸ್. ಹೆಗಡೆ ಕೊಡ್ತಗಣಿ ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ವ್ಯಾಪ್ತಿಯಲ್ಲಿ ಆರು ಗ್ರಾಮಗಳ ಕಾರ್ಯಕ್ಷೇತ್ರ ಇದ್ದು ಅದರಲ್ಲಿ ನಾಲ್ಕು ಗ್ರಾಮಗಳು ಸಂಘದಿಂದ ದೂರವಿದೆ.

ಸಂಘದಲ್ಲಿ 1161 ಜನ ಸದಸ್ಯರಿದ್ದು 89.79ಲಕ್ಷ ರೂ. ಶೇರು ಬಂಡವಾಳ 45.78ಲಕ್ಷ ರೂಗಳಷ್ಟು ನಿಧಿಗಳನ್ನು ಹೊಂದಿದೆ.

3,10,27,000 ರೂ. ಠೇವುಗಳನ್ನು ಹೊಂದಿದೆ. ಸದಸ್ಯರಿಗೆ ಕೋಟಿ 8.35ಕೋಟಿ ರೂ. ಸಾಲ ನೀಡಿದ್ದು ಮತ್ತು ಸಂಘವು 5.99ಕೋಟಿ ರೂ. ಸಾಲಗಳನ್ನು ಹೊಂದಿದೆ.

ಸಂಘವು ವರ್ಷದಿಂದ ವರ್ಷಕ್ಕೆ ಪತ್ತು ಮತ್ತು ಮಾರಾಟ ಯೋಜನೆಯಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿದ್ದು ಪ್ರಸಕ್ತ ಸಾಲಿನಲ್ಲಿ 1228ಕ್ವಿಂಟಾಲ್ ಅಡಕೆ ಸಂಘದ ಮೂಲಕ ಮಾರಾಟ ಆಗಿದ್ದು 12.31ಲಕ್ಷ ರೂ. ವಹಿವಾಟು ನಡೆಸಿದೆ ಎಂದು ಕೊಡ್ತಗಣಿ ಮಾಹಿತಿ ನೀಡಿದರು.

ಸಂಘದ ಸದಸ್ಯರ ಆಪತ್ಕಾಲದಲ್ಲಿ ನೆರವು ನೀಡುವ ಉದ್ದೇಶದಿಂದ ಮರಣೋತ್ತರ ನಿಧಿ ಸ್ಥಾಪಿಸಲಾಗಿದೆ. ಹೈನುಗಾರಿಕೆಗೆ ಉತ್ತೇಜನ ನೀಡುವುದಕ್ಕಾಗಿ ಸಂಘದ ವ್ಯಾಪ್ತಿಯ ಕೊಡ್ತಗಣಿ, ಕಾನಳ್ಳಿ,ಚಂದ್ರಘಟಗಿ ಹಾಲು ಉತ್ಪಾದಕ ಸಂಘದ ಸದಸ್ಯರಿಗೆ 16ಲಕ್ಷ ರೂ.ಗಳಷ್ಟು ಸಾಲ ನೀಡಲಾಗಿದೆ.

60ಲಕ್ಷ ರೂಗಳಷ್ಟು ಹಣವನ್ನು ವಿನಿಯೋಗಿಸಿ ಸಂಘದ ನೂತನ ಕಾರ್ಯಾಲಯ ಮತ್ತು ಆಡಳಿತ ಕಚೇರಿ ನಿರ್ವಣಮಾಡಲಾಗಿದ್ದು ಸದಸ್ಯರ ಅಗತ್ಯ ಜೀವನಾವಶ್ಯಕ ವಸ್ತುಗಳ ಪೂರೈಕೆಗೆ ಕಿರಾಣಿ ವಿಭಾಗ ಮತ್ತು ಮಿನಿ ಸೂಪರ್ ಮಾರ್ಕೆಟ್ ಪ್ರಾರಂಭಿಸಿ ಉತ್ತಮ ವ್ಯವಹಾರ ನಡೆಸಲಾಗುತ್ತಿದೆ.

ಮುಂದಿನ ಉದ್ದೇಶ

ಸಂಘದ ವ್ಯಾಪ್ತಿಯ ಅಳವಳ್ಳಿ, ಹೇಮಗಾರ, ಚಂದ್ರಘಟಗಿ ಹಾಗೂ ಕುಡಗುಂದ ಗ್ರಾಮದ ಸದಸ್ಯರಿಗೆ ಅನುಕೂಲ ಮಾಡಿಕೊಡುವ ದೃಷ್ಠಿಯಿಂದ ಬೈಲಳ್ಳಿಯಲ್ಲಿ ಸಂಘದ ಶಾಖೆ ಪ್ರಾರಂಭಿಸುವುದು. ಇಟಗಿಯಲ್ಲಿ ಪಶು ಆಹಾರಘಟಕ ನಿರ್ಮಾಣ ಅಲ್ಲದೇ ಸದಸ್ಯರಿಗೆ ಎಲ್ಲ ಮೂಲಭೂತ ಸೌಲಭ್ಯಗಳು ಸಂಘದಲ್ಲಿಯೇ ಸಿಗುವ ವ್ಯವಸ್ಥೆ ಮಾಡಬೇಕು ಎನ್ನುವ ಉದ್ದೇಶ ಹೊಂದಿದೆ.

ಸಂಘವು 1960ರಲ್ಲಿ ಆರಂಭಗೊಂಡು 64ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಎಲ್ಲ ಸದಸ್ಯರುಗಳ ಪ್ರಾಮಾಣಿಕ ವ್ಯವಹಾರ ಅಲ್ಲದೇ ಸಿಬ್ಬಂದಿಗಳ ಪಾರದರ್ಶಕ ಸೇವೆಯೂ ಸಂಘದ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಹೇಳಿದರು.

ಉತ್ತಮ ಸಂಘ

ಸಂಘದ ಉತ್ತಮ ವ್ಯವಹಾರವನ್ನು ಪರಿಗಣಿಸಿ ಆರು ವರ್ಷಗಳಿಂದ ಟಿಎಸ್​ಎಸ್ ಸಂಸ್ಥೆ ಉತ್ತಮ ಸಹಕಾರ ಸಂಘ ಪ್ರಶಸ್ತಿ ನೀಡಿ ಅಭಿನಂದಿಸಿದೆ ಎಂದು ಹೇಳಿದರು.

ನಿರ್ದೇಶಕರಾದ ನಾರಾಯಣಮೂರ್ತಿ ಸೀತಾರಾಮ ಹೆಗಡೆ ಹರ್ಗಿ,ಮಂಜುನಾಥ ಚಿದಂಬರ ಹೆಗಡೆ ಹೊನ್ನೆಮಡಿಕೆ ಉಪಸ್ಥಿತರಿದ್ದರು.

ಸೆ.23ರಂದು ಬೆಳಗ್ಗೆ 11ಕ್ಕೆ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ಇಟಗಿಯ ರಾಮೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.