ಶಿರಸಿ: ಸಿದ್ದಾಪುರ ಜೆಎಂಎಫ್‌ಸಿ ನ್ಯಾಯಾಲಯ ನೀಡಿದ ತೀರ್ಪನ್ನು ಶಿರಸಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಎತ್ತಿ ಹಿಡಿದು ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಸಿದ್ದಾಪುರ ತಾಲೂಕಿನ ಕೊಳಗಿಯ ರಾಜಾರಾಮ ಗಣಪತಿ ನಾಯ್ಕ ಎಂಬಾತ ಮಹಿಳೆಯೊಬ್ಬಳ ಮಾನಭಂಗ ಮಾಡಿ ದೈಹಿಕ ಕಿರುಕುಳ ನೀಡಿದ್ದ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಸಿದ್ದಾಪುರ ಜೆಎಂಎಫ್‌ಸಿ ಕೋರ್ಟ್ 2022ರ ಫೆಬ್ರವರಿ 2ರಂದು 1ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿತ್ತು. ತೀರ್ಪಿನ ಆದೇಶದ ವಿರುದ್ಧ ಶಿರಸಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕಿರಣ್ ಕಿಣಿ ಅವರು ಕೆಳ ನ್ಯಾಯಾಲಯದ ತೀರ್ಪನ್ನೇ ಎತ್ತಿ ಹಿಡಿದು ಆ.3ರಂದು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ರಾಜೇಶ್ ಎಂ ಮಳಗೀಕರ್ ವಾದ ಮಂಡಿಸಿದ್ದರು.