ಜಿಲ್ಲೆ

ಬಜೆಟ್‌ನಲ್ಲಿ 1 ಸಾವಿರ ಕೋಟಿ ರೂ. ಮೀಸಲಿಡಿ

Chitradurga

ಚಿತ್ರದುರ್ಗ: ರಾಜ್ಯ ಬಜೆಟ್‌ನಲ್ಲಿ 1 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟು, ರಾಜ್ಯದಲ್ಲಿನ 2,780 ಕೊಳೆಗೇರಿ ಪ್ರದೇಶಗಳಲ್ಲಿ ಮೂಲಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಸಮಿತಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಕೊಳೆಗೇರಿಗಳಲ್ಲಿ ವಾಸಿಸುವ ಜನ ಈಗಲೂ ಸಂಕಷ್ಟದಲ್ಲಿದ್ದು, ನೆರವಿಗೆ ಧಾವಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಧಾನಮಂತ್ರಿ ಆವಾಸ್ ನಗರ ವಸತಿ ಯೋಜನೆಯಲ್ಲಿ ಸಬ್ಸಿಡಿ ಮೊತ್ತವನ್ನು 6 ಲಕ್ಷ ರೂ.ಗೆ ಹೆಚ್ಚಿಸಲು, ತ್ವರಿತವಾಗಿ ಮನೆ ನಿರ್ಮಿಸಿಕೊಡಲು ಮುಖ್ಯಮಂತ್ರಿ ಮುಂದಾಗಬೇಕು ಎಂದು ಆಗ್ರಹಿಸಿದರು.

ಬಿಬಿಎಂಪಿ ಒಳಗೊಂಡು ರಾಜ್ಯದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 1,873 ಕೊಳೆಗೇರಿ ಪ್ರದೇಶಗಳಿವೆ. 3,12,969 ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಪ್ರಸ್ತಾಪಿಸಿರುವ ಸರ್ಕಾರ ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡಲು ತೀರ್ಮಾನಿಸಿದೆ. ಇದರ ಅನುಷ್ಠಾನ ಕೂಡ ವೇಗ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಗರ ಉದ್ಯೋಗ ಖಾತ್ರಿ ಯೋಜನೆಗೆ ಸ್ಲಂ ನಿವಾಸಿಗಳನ್ನು ಸೇರಿಸಿ ಬಜೆಟ್‌ನಲ್ಲೇ ಘೋಷಿಸಬೇಕು. ವರ್ಷದಲ್ಲಿ 200 ದಿನ ಕೆಲಸ ನೀಡಲು ಕಾಯ್ದೆ ಜಾರಿಗೆ ಮುಂದಾಗಬೇಕು ಎಂದು ಸರ್ಕಾರವನ್ನು ಕೋರಿದರು.

ಸಮಿತಿ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ಜಿಲ್ಲಾಧ್ಯಕ್ಷ ಮಿಲ್ಟ್ರಿ ಮಹೇಶ್, ಮಂಜುನಾಥ್ ಇತರರಿದ್ದರು.