ಬೆಳಗಾವಿ: ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕ ವಲಯದಲ್ಲಿ ಹುಬ್ಬಳಿ&ಧಾರವಾಡ&ಬೆಳಗಾವಿ (ಎಚ್ಡಿಬಿ) ಕ್ಲಸ್ಟರ್ ಒಂದಾಗಿದ್ದು, ಶಿಕ್ಷಣ, ಉದ್ಯಮಶೀಲತೆ, ಉದ್ಯಮ ಕ್ಷೇತ್ರದಲ್ಲಿ ಮುಂದಿನ ಐದು ವರ್ಷದ ಅವಧಿಯಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕರ್ನಾಟಕ ಡಿಜಿಟಲ್ ಆರ್ಥಿಕ ಮಿಷನ್ (ಕೆಡಿಇಎಂ) ಸಿಇಒ ಸಂಜೀವಕುಮಾರ ಗುಪ್ತಾ ಹೇಳಿದರು.
ಇಲ್ಲಿನ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಎಚ್ಡಿಬಿ ಕ್ಲಸ್ಟರ್ನಲ್ಲಿ ಕೆಡಿಇಎಂ ಶುಕ್ರವಾರ ಆಯೋಜಿಸಿದ್ದ "ಟೆಕ್ಸೆಲರೇಶನ್ 5ನೇ' ಆವೃತ್ತಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಟೋಮೊಬೈಲ್ ಬಿಡಿಭಾಗಗಳು ಸೇರಿ ಉತ್ಪಾದನೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬೆಳಗಾವಿ ವಲಯದಲ್ಲಿ ವಿಮಾನ, ರೈಲು, ಬಂದರು, ಹೆದ್ದಾರಿ ಸಂಪರ್ಕ ಹೊಂದಿದ್ದರಿಂದ ಹೂಡಿಕೆದಾರರಿಗೆ ಒಳ್ಳೆಯ ಅವಕಾಶವಿದೆ ಎಂದರು.
ರಾಜ್ಯದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಐಟಿ, ಇಎಸ್ಡಿಎಂ ಮತ್ತು ವಿಜ್ಞಾನ, ತಂತ್ರಜ್ಞಾನ ವಲಯಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಎಚ್ಡಿಬಿ ವಲಯದಲ್ಲಿ ಹೂಡಿಕೆಗೆ ಹೆಚ್ಚು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. 40ಕ್ಕೂ ಅಧಿಕ ಕಂಪನಿಗಳು ಹೂಡಿಕೆ ಮಾಡಲು ಮುಂದೆ ಬಂದಿವೆ. ಸದುಪಯೋಗ ಮಾಡಿಕೊಳ್ಳಬೇಕು. ಸರ್ಕಾರವು ನಿಮ್ಮ ಜತೆಗೆ ಇರಲಿದೆ ಎಂದು ಅಭಯ ನೀಡಿದರು.
ವಿದ್ಯುನ್ಮಾನ, ಮಾಹಿತಿ, ಜೈವಿಕ ತಂತ್ರಜ್ಞಾನ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ರಾಹುಲ ಸಂಕನೂರ ಮಾತನಾಡಿ, ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ ನೀತಿ ಜಾರಿಗೆ ತರುವ ಮೂಲಕ ಐಟಿ, ಬಿಟಿ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಐಟಿ ಕ್ಷೇತ್ರಗಳಲ್ಲಿ ಉನ್ನತ ಸ್ಥಾನದಲ್ಲಿರುವ ಉದ್ಯೋಗಿಗಳು ಎಚ್ಡಿಬಿ ವಲಯದಿಂದ ಬಂದಿದ್ದಾರೆ. ಈ ಭಾಗದಲ್ಲಿ ಐತಿಹಾಸಿಕ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಐಟಿ, ಬಟಿ ಕಂಪನಿಗಳು ಇಲ್ಲಿಯೇ ಹೂಡಿಕೆಗೆ ಮುಂದಾಗಬೇಕು ಎಂದರು.
ಈಗಾಗಲೇ ಸರ್ಕಾರ ಸ್ಟಾರ್ಟಪ್ಗಳಿಗೆ ಆರ್ಥಿಕ ಸೌಲಭ್ಯ ಕಲ್ಪಿಸಿದೆ. ಬೆಂಗಳೂರು ಹೊರತುಪಡಿಸಿ ಬೇರೆ ಭಾಗಗಳಲ್ಲಿ ಸ್ಟಾರ್ಟಪ್ ಆರಂಭಿಸುವವರಿಗೆ 50 ಲಕ್ಷ ರೂ. ವರೆಗೆ ಸಬ್ಸಿಡಿ ಸಾಲ ಸೌಲಭ್ಯ ನೀಡಲಿದೆ. ಬಜೆಟ್ನಲ್ಲಿ 1 ಸಾವಿರ ಕೋಟಿ ರೂ.ಮೀಸಲಿಡಲಾಗಿದೆ. ನವಉದ್ಯಮಿಗಳನ್ನು ಪ್ರೋತ್ಸಾಹಿಸುವ ಹಾಗೂ ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಲು ಟೆಕ್ಸೆಲರೇಶನ್ ಪ್ರಮುಖ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡು, ಎಚ್ಡಿಬಿ ಕ್ಲಸ್ಟರ್ ಎಂ.ಡಿ. ವೆಂಕಟೇಶ ಪಾಟೀಲ, ಎನ್ಎಸ್ ಇನ್ಫೋಟೆಲ್ ಸಿಇಒ ಸಂತೋಷ ಹುರಳಿಕೊಪ್ಪ, ಡಾ.ಸಂಜಯ ತ್ಯಾಗಿ ಇತರರಿದ್ದರು.