ಜಿಲ್ಲೆ

ಜನರ ಮೇಲೆ 1 ಲಕ್ಷ ಕೋಟಿ ರೂ. ಹೊರೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಇದೀಗ ಮುದ್ರಾಂಕ ಶುಲ್ಕ ಹೆಚ್ಚಳ ಸೇರಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ 49 ಉತ್ಪನ್ನ ಹಾಗೂ ಸೇವೆಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ 1 ಲಕ್ಷ ಕೋಟಿ ರೂ. ಹೊರೆ ಹಾಕಿದೆ. ಸಮಾಜವಾದಿ ಚಿಂತನೆಯಿಂದ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಡಜನರ ಬದುಕಿನ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಹಣಕಾಸು ಶಿಸ್ತು ಸಂಪೂರ್ಣ ಸತ್ತು ಹೋಗಿದೆ ಎಂದರು.

ಕೇಂದ್ರ ಸರ್ಕಾರದಿಂದ ಅಕ್ಕಿ ಪಡೆದು ಅನ್ನಭಾಗ್ಯ ಯೋಜನೆಯಡಿ ವಿತರಣೆ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರಕ್ಕೆ ಹಾಗೂ ಅದರ ನೇತೃತ್ವ ವಹಿಸಿರುವವರಿಗೂ ಸಭ್ಯತೆ, ಮಾನ ಮರ್ಯಾದೆ ಏನೂ ಇಲ್ಲ. ತಹಸೀಲ್ದಾರ, ಉಪ ನೋಂದಣಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಭ್ರಷ್ಟಾಚಾರ ಪರಾಕಾಷ್ಠೆಗೆ ತಲುಪಿದೆ. ಈ ಕಚೇರಿಗಳಲ್ಲಿ ಮಧ್ಯವರ್ತಿಗಳ ಸಹಾಯವಿಲ್ಲದೇ ಜನಸಾಮಾನ್ಯರ ಕೆಲಸ ಆಗುವುದೇ ಇಲ್ಲ. ಲೋಕಾಯುಕ್ತರ ಭಯ ಇಲ್ಲವಾಗಿದೆ ಎಂದು ಹೇಳಿದರು.

ಖಂಡನೀಯ

ಕಾಂಗ್ರೆಸ್ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ತಾಯಿಯವರ ಬಗ್ಗೆ ಅಶ್ಲೀಲವಾಗಿ ಮಾತನಾಡಿರುವುದು ಖಂಡನೀಯ. ಕಾಂಗ್ರೆಸ್ ಎಷ್ಟು ಕೀಳು ಮಟ್ಟಕ್ಕೆ ತಲುಪಿದೇ ಎಂಬುದನ್ನು ಇದು ಸೂಚಿಸುತ್ತದೆ. ಕಾಂಗ್ರೆಸ್ ಏನೂ ಮಾಡಿದರೂ ಜನರು ನಂಬುವುದಿಲ್ಲ. ಗೃಹ ಸಚಿವ ಅಮಿತ ಶಾಹ ಅವರ ತಲೆ ಕಡಿಯಬೇಕು ಎಂದು ಹೇಳಿಕೆ ನೀಡಿರುವ ಸಂಸದೆ ಮಹುವಾ ಮೊಯಿತ್ರಾ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಮತಗಳ್ಳತನ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ ಗಾಂಧಿ ಮಾಡಿರುವ ಯಾವುದೇ ಆರೋಪಗಳು ನಿಜವೆಂದು ದೃಢಪಟ್ಟಿಲ್ಲ. ಅವರು ಮತಗಳ್ಳತನ ರ‍್ಯಾಲಿ ನಡೆಸುತ್ತಿಲ್ಲ. ‘ನಸುಳುಕೋರರನ್ನು ಬಚಾವ್’ ರ‍್ಯಾಲಿ ನಡೆಸುತ್ತಿದ್ದಾರೆ. ಈ ದೇಶದೊಳಗೆ ಅಕ್ರಮವಾಗಿ ಪ್ರವೇಶ ಪಡೆದಿರುವ ನುಸುಳುಕೋರರು ಇಲ್ಲಿಯ ಆರ್ಥಿಕ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇಂಥವರನ್ನು ಹೊರಗೆ ಹಾಕುವ ಕೆಲಸ ಮಾಡುತ್ತಿದ್ದೇವೆ. ಇವರೆಲ್ಲ ಕಾಂಗ್ರೆಸ್ ಮತದಾರರಾಗಿದ್ದು, ಆ ಪಕ್ಷಕ್ಕೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಪರವಾಗಿ ಜೆಡಿಎಸ್ ಪ್ರತ್ಯೇಕವಾಗಿ ರ‍್ಯಾಲಿ ನಡೆಸಿರುವ ಬಗ್ಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಜೆಡಿಎಸ್ ನಮ್ಮ ಮಿತ್ರಪಕ್ಷವಾಗಿದ್ದರೂ, ನಮ್ಮ ಮತ್ತು ಅವರ ಪಕ್ಷದ ಆಂತರಿಕ ನಿರ್ಧಾರಗಳು ಭಿನ್ನವಾಗಿರುತ್ತದೆ. ಸೆ. 1ರಂದು ಬಿಜೆಪಿ ಹಮ್ಮಿಕೊಂಡಿರುವ ಧರ್ಮಸ್ಥಳ ಚಲೋ ರ್ಯಾಲಿಯಲ್ಲಿ ನಾನು ಭಾಗವಹಿಸುತ್ತಿದ್ದೇನೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯೆ ಹಾಳು ಮಾಡುವುದರ ಹಿಂದೆ ಅಲ್ಟ್ರಾ ಎಡಪಂಥೀಯ ಶಕ್ತಿಗಳ ಕೈವಾಡವಿದೆ ಎಂದು ಆರೋಪಿಸಿದರು.