ಜಿಲ್ಲೆ

ನೂತನ ಸೇತುವೆ ನಿರ್ಮಾಣಕ್ಕೆ 1ಕೋಟಿ ರೂ. ಬಿಡುಗಡೆ

ಕುಶಾಲನಗರ: ಹಾರಂಗಿ ಜಲಾಶಯದ ಎದುರು ಇರುವ ಕಿರು ಸೇತುವೆ ಶಿಥಿಲಗೊಂಡಿದ್ದು, ನೂತನ ಸೇತುವೆ ನಿರ್ಮಾಣಕ್ಕೆ ಕಾವೇರಿ ನೀರಾವರಿ ನಿಗಮದ ಮೂಲಕ 1ಕೋಟಿ ರೂಪಾಯಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದು ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ತಿಳಿಸಿದ್ದಾರೆ.

ಈಗಿರುವ ಸೇತುವೆಗಿಂತ 4ಅಡಿ ಎತ್ತರ ಹಾಗೂ 7.5 ಮೀಟರ್ ಅಗಲ ಹೊಸ ಸೇತುವೆ ನಿರ್ಮಾಣ ಮಾಡಲಾಗುತ್ತದೆ. ಜತೆಗೆ ಹಾರಂಗಿಯಿಂದ ಗುಮ್ಮನಕೊಲ್ಲಿ ತನಕ ಹೊಸದಾಗಿ ನಿರ್ಮಾಣ ಆಗಿರುವ ರಸ್ತೆಯ ಕಾಮಗಾರಿ ಸಂದರ್ಭ ಕುಡಿಯುವ ನೀರಿನ ಪೈಪ್ ಲೈನ್ ಒಡೆದಿರುವುದನ್ನು ಸರಿಪಡಿಸಲು ಅನುದಾನ ಬಳಸಿಕೊಳ್ಳಲಾಗುತ್ತದೆ.

ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಶೀಘ್ರ ಟೆಂಡರ್ ಕರೆದು ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.