ಜಿಲ್ಲೆ

ಪ್ರತಿದಿನ ಒಂದು ಕೋಟಿ ಲೀ. ಹಾಲು ಉತ್ಪಾದನೆ ಗುರಿ : ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಹೇಳಿಕೆ

ಬಳ್ಳಾರಿ : ರಾಜ್ಯದಲ್ಲಿ ಪ್ರತಿದಿನ 1.20 ಕೋಟಿ ಲೀ. ಹಾಲಿಗೆ ಬೇಡಿಕೆ ಇದೆ. ಆದರೆ 84 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಒಂದು ಕೋಟಿ ಲೀ. ಹಾಲು ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಹೇಳಿದರು.

ನಗರದ ಬಳ್ಳಾರಿ-ವಿಜಯನಗರ, ಕೊಪ್ಪಳ ಹಾಗೂ ರಾಯಚೂರು ಹಾಲು ಒಕ್ಕೂಟದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 26ರಿಂದ 28 ಲಕ್ಷ ರೈತರು ಹೈನೋದ್ಯಮ ಮಾಡುತ್ತಿದ್ದಾರೆ. ಒಟ್ಟು 14 ಹಾಲು ಉತ್ಪಾದಕರ ಒಕ್ಕೂಟಗಳಿದ್ದು, ಪ್ರತಿದಿನ 84ರಿಂದ 86 ಲಕ್ಷ ಲೀ. ಹಾಲು ಉತ್ಪಾದಿಸಲಾಗುತ್ತಿದೆ. ಸರಿಸುಮಾರು 10 ಲಕ್ಷ ಲೀ. ಹಾಲು ಉತ್ಪಾದನೆ ಕುಂಠಿತಗೊಂಡಿದೆ. ಅದಕ್ಕಾಗಿ ರೈತರ ಏಳಿಗೆಗಾಗಿ ಆಗಸ್ಟ್ 1ರಿಂದ ಹಾಲಿನ ದರವನ್ನು 3 ರೂ. ಹೆಚ್ಚಳ ಮಾಡಲಾಗುತ್ತಿದೆ ಎಂದು ತಿಳಿಸಿದರು.

ರೈತರ ಪರವಾಗಿ ಹೈನೋದ್ಯಮವನ್ನು ಉತ್ತೇಜಿಸಲು ಪ್ರತಿ ಲೀಟರ್ ಹಾಲಿನ ಮಾರಾಟ ದರ 5 ರೂ. ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ 3 ರೂ. ಹೆಚ್ಚಿಸಲಾಗಿದೆ. ಬೇರೆ ರಾಜ್ಯಗಳಲ್ಲಿ ಹಾಲಿನ ದರ ನಮ್ಮ ರಾಜ್ಯಕ್ಕಿಂತ ಹೆಚ್ಚಿನ ದರ ಇದೆ. ಕೇರಳದಲ್ಲಿ ಪ್ರತಿ ಲೀಟರ್ ಹಾಲಿಗೆ 50 ರೂ, ದೆಹಲಿ 54 ರೂ., ಗುಜರಾತ್ 54 ರೂ., ಮಹಾರಾಷ್ಟ್ರ 54 ರೂ. ಆಂಧ್ರಪ್ರದೇಶ 56 ರೂ. ದರ ಇದೆ. ನಮ್ಮಲ್ಲಿ ಸದ್ಯಕ್ಕೆ 30 ರೂ. ಇದೆ. ಇನ್ನೂ 3 ರೂ. ಹೆಚ್ಚಾದರೆ 42 ರೂ. ಆಗಲಿದೆ ಎಂದು ಮಾಹಿತಿ ನೀಡಿದರು.

ನಂದಿನಿ ಹಾಲಿನ ಗುಣಮಟ್ಟ ಕಾಪಾಡಲಾಗುತ್ತಿದೆ. ರಾಜ್ಯ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ನಂದಿನಿ ಹಾಲಿಗೆ ಬೇಡಿಕೆ ಇದೆ. ನಂದಿನಿ ಹಾಲು ಮಾರಾಟ ಮಾಡುವ ಡೀಲರ್‌ಗಳು ಬೇರೆ ಖಾಸಗಿ ಕಂಪನಿಗಳ ಹಾಲು ಮಾರಾಟ ಮಾಡುವುದು ಕಂಡು ಬಂದರೆ ಅಂತಹವರ ಡೀಲರ್‌ಶಿಪ್ ರದ್ದತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಇನ್ನು ಖಾಸಗಿ ಕಂಪನಿಗಳು ಹಾಲಿನ ಗುಣಮಟ್ಟ ಕಾಯ್ದುಕೊಳ್ಳುವುದಿಲ್ಲ. ಆದರೆ ಕೆಎಂಎಫ್ ಗುಣಮಟ್ಟದ ವಿಚಾರದಲ್ಲಿ ಎಂದಿಗೂ ರಾಜೀಯಾಗಲ್ಲ.ಹಾಲು ಸಂಸ್ಕರಣೆ, ಸಾಗಾಣಿಕೆ, ಉತ್ಪಾದನೆ ವೆಚ್ಚ ಹೆಚ್ಚಾಗುತ್ತಿದೆ. ಹಾಗಾಗಿ ರೈತರು ಹೈನೋದ್ಯಮ ಮಾಡಲು ಹಿಂದೇಟು ಹಾಕುವಂತಾಗಿದೆ. ರೈತರಿಗೆ ಸರ್ಕಾರದಿಂದ ಪ್ರತಿ ಲೀ.ಗೆ 5 ರೂ. ಪ್ರೋತ್ಸಾಹಧನ ನೀಡುತ್ತಿದೆ ಎಂದು ತಿಳಿಸಿದರು.

ಇನ್ನು ಬಳ್ಳಾರಿಯಲ್ಲಿ ಮೆಗಾಡೇರಿ ನಿರ್ಮಾಣದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಬಳ್ಳಾರಿಯ ಅಲ್ಲಂ ಭವನ ಬಳಿ ನೀಡಿರುವ ಜಾಗವೂ ಡೇರಿ ನಿರ್ಮಾಣಕ್ಕೆ ಸೂಕ್ತ ಇಲ್ಲ. ಅದಕ್ಕಾಗಿ ಬೇರೆಡೆ ಡೇರಿ ನಿರ್ಮಾಣಕ್ಕೆ ಶೀಘ್ರ ಕ್ರಮ ವಹಿಸಲಾಗುವುದು. ರಾಜ್ಯದಲ್ಲೇ ಮಾದರಿ ಡೇರಿ ನಿರ್ಮಾಣ ಮಾಡಲಾಗುವುದು ಎಂದರು.

ತಿರುಪತಿಗೆ ಕೆಎಂಎಫ್‌ನಿಂದ ನಂದಿನಿ ತುಪ್ಪ ರಫ್ತು ಮಾಡಲಾಗುತ್ತಿತ್ತು. ಇದೀಗ ಟೆಂಡರ್ ಮುಕ್ತಾಯಗೊಂಡಿದ್ದು, ಬಹಳ ಕಡಿಮೆ ದರದಲ್ಲಿ ತುಪ್ಪ ಮಾರಾಟ ಮಾಡಲು ಸಾಧ್ಯವಿಲ್ಲ. ಹಾಗಾಗಿ ಟೆಂಡರ್‌ನಲ್ಲಿ ಈ ಬಾರಿ ಕೆಎಂಎಫ್ ಭಾಗವಹಿಸಿಲ್ಲ. ರಾಜ್ಯದಲ್ಲಿ ಶೇ.60 ರಷ್ಟು ಮಾತ್ರ ತುಪ್ಪ ಪೂರೈಸಲಾಗುತ್ತಿದ್ದು, ಇನ್ನು ಶೇ.40 ರಷ್ಟು ತುಪ್ಪ ಪೂರೈಸಲಾಗುತ್ತಿಲ್ಲ. ಅಷ್ಟೊಂದು ಬೇಡಿಕೆ ಇದೆ ಎಂದು ತಿಳಿಸಿದರು.

ಹಾಲು ಒಕ್ಕೂಟದ ಉಪಾಧ್ಯಕ್ಷ ರವೀಂದ್ರ, ನಿರ್ದೇಶಕರಾದ ವೆಂಕನಗೌಡ, ಶಿವಪ್ಪ ವಾಲಿ, ಎಂ.ಸತ್ಯನಾರಾಯಣ, ನಾಗಮಣಿ, ವ್ಯವಸ್ಥಾಪಕ ನಿರ್ದೇಶಕ ತಿರುಪತಪ್ಪ ಇನ್ನಿತರರಿದ್ದರು.