ಜಗದೀಶ ಹೊಂಬಳಿ ಬೆಳಗಾವಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಳಗಾವಿ ಪುಷ್ಪ ಹರಾಜು ಖರೀದಿ ಕೇಂದ್ರದಲ್ಲಿ ದಾಖಲೆ ಪ್ರಮಾಣದಲ್ಲಿ ಹೂವು ಮಾರಾಟವಾಗಿವೆ. ಮೂರು ದಿನಗಳಲ್ಲಿ ಬರೊಬ್ಬರಿ 105 ಟನ್ ಪುಷ್ಪ ಮಾರಾಟವಾಗಿದ್ದು, 1.79 ಕೋಟಿ ರೂ. ವಹಿವಾಟು ನಡೆದಿದೆ.
ಅ.22ರಂದು 32 ಲಕ್ಷ ರೂ. ಮೌಲ್ಯದ 23 ಟನ್ ಹೂಗಳು ಮಾರಾಟವಾಗಿವೆ. ಅ. 23ರಂದು 58.25 ಲಕ್ಷ ರೂ. ಮೌಲ್ಯದ 32.20 ಟನ್ ಹಾಗೂ ಅ. 24ರಂದು 88.20 ಲಕ್ಷ ರೂ. ಮೌಲ್ಯದ 50.50 ಟನ್ ಹೂಗಳು ಬಿಕರಿಯಾಗಿವೆ. ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಗಳು ಮಾರಾಟವಾಗಿದ್ದರಿಂದ ರೈತರು ಕೊಂಚ ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ. ಪುಷ್ಪ ಹರಾಜಿನಲ್ಲಿ ಬೆಂಗಳೂರು, ತುಮಕೂರು, ಹಾವೇರಿ, ಬಾಗಲಕೋಟೆ, ವಿಜಯಪುರ ಹಾಗೂ ಬೆಳಗಾವಿ ಸೇರಿ ವಿವಿಧೆಡೆಯಿಂದ ರೈತರು ಆಗಮಿಸಿದ್ದರು.
ಬೆಳಗಾವಿ ಜಿಲ್ಲೆಯ ರೈತರು ಬೆಳೆದ ಪುಷ್ಪಗಳೇ ಅತೀ ಹೆಚ್ಚು ಮಾರಾಟವಾಗಿವೆ. ದಾಖಲೆ ಪ್ರಮಾಣದಲ್ಲಿ ಹೂಗಳು ಬಿಕರಿಯಾಗಿದ್ದರಿಂದ ರೈತರು ಸಂತಸಗೊಂಡಿದ್ದಾರೆ. ಬೆಂಗಳೂರು, ಶಿವಮೊಗ್ಗ, ದಾವಣಗೆರೆ ಹಾಗೂ ಬೆಳಗಾವಿಯಲ್ಲಿ ಪುಷ್ಪ ಹರಾಜು ಮಾರುಕಟ್ಟೆಗಳು ಇವೆ. ಮೂರು ಮಾರುಕಟ್ಟೆಗಳಿಗೆ ಹೋಲಿಸಿದರೆ ಬೆಳಗಾವಿ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಗಳು ಮಾರಾಟವಾಗಿವೆ. ಕಳೆದ ವರ್ಷಕ್ಕಿಂತ ಈ ವರ್ಷ ಸುಮಾರು 60 ಟನ್ ಹೂ ಹೆಚ್ಚುವರಿಯಾಗಿ ಮಾರಾಟವಾಗಿದೆ. ಉತ್ತರ ಕರ್ನಾಟಕ ಹಾಗೂ ದಾವಣಗೆರೆ, ಹರಿಹರ, ತುಮಕೂರು, ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಜನರು ಹೂ ಖರೀದಿಗೆ ಬರುತ್ತಿದ್ದಾರೆ. ಬೆಳಗಾವಿಯಲ್ಲಿ ಪುಷ್ಪ ಹರಾಜು ಕೇಂದ್ರ 3 ವರ್ಷದ ಹಿಂದೆ ಆರಂಭವಾಗಿದೆ. ಕಡಿಮೆ ಅವಧಿಯಲ್ಲೇ ಇದರ ವಹಿವಾಟು ರಾಜ್ಯದ ಹಲವು ಜಿಲ್ಲೆಗಳಲ್ಲಿ ಸದ್ದು ಮಾಡಿದೆ. ಬೆಂಗಳೂರಿನ ಗುಲಾಬಿ ಹೂ ಬೆಳಗಾವಿ ಪುಷ್ಪ ಹರಾಜು ಕೇಂದ್ರಕ್ಕೆ ಬರುತ್ತದೆ ಎನ್ನುವುದು ಮತ್ತೊಂದು ವಿಶೇಷ. ಬೆಂಗಳೂರು ಭಾಗದಲ್ಲಿ ‘ಕಟ್ ಪ್ಲಾವರ್’ಗಳು ಹೆಚ್ಚಾಗಿ ಮಾರಾಟ ಆಗುವುದರಿಂದ ಬೆಂಗಳೂರಿನ ಜನ ಬಿಚ್ಚು ಹೂವುಗಳ ಮಾರಾಟ ಮಾಡುವ ಬೆಳಗಾವಿ ಮಾರುಕಟ್ಟೆಯತ್ತ ಒಲವು ತೋರಿಸುತ್ತಿದ್ದಾರೆ.
ಯಾವ ಹೂಗಳು, ಎಷ್ಟು ಮಾರಾಟ?: ಶೇವಂತಿಗೆ ಹೂ ಕೆ.ಜಿ.ಗೆ 120 ರಿಂದ 190 ರೂ.ವರೆಗೆ ಮಾರಾಟವಾಗಿದೆ. ಚಂಡು ಹೂ 70ರಿಂದ 120 ರೂ., ಗಲಾಟೆ ಹೂ 60ರಿಂದ 90, ಸಣ್ಣ ಗುಲಾಬಿ 200ರಿಂದ 220, ಸುಗಂಧರಾಜ 200ರಿಂದ 250 ರೂ., ದುಂಡು ಮಲ್ಲಿಗೆ 100ರಿಂದ 150, ಕನಕಾಂಬರಿ 100ರಿಂದ 150 ರೂ. ಮಾರಾಟವಾಗಿವೆ. ಸೇವಂತಿಗೆ ಮೂರು ದಿನದಲ್ಲಿ ಒಟ್ಟಾರೆ 38 ಟನ್, ಚಂಡ ಹೂ 41, ಸಣ್ಣ ಗುಲಾಬಿ 15 ಟನ್‌ವರೆಗೆ ಮಾರಾಟವಾಗಿವೆ.
ರೈತರಿಗೆ ಪ್ರೋತ್ಸಾಹ: ಹೂ ಬೆಳೆಯುವ ರೈತರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಳಗಾವಿ ತಾಲೂಕಿನಲ್ಲಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಹೂ ಬೆಳೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಯೋಜನೆಯಡಿ ರೈತರು ತಮ್ಮ ಹೊಲಗಳಲ್ಲಿ ಗುಲಾಬಿ ನಾಟಿ ಮಾಡಿಕೊಳ್ಳುವುದಕ್ಕೆ ಹಣ ನೀಡುತ್ತಿದೆ. ಈಗಾಗಲೇ ಯೋಜನೆಯಡಿ ತಾಲೂಕಿನಲ್ಲಿ ಹಲವಾರು ರೈತರು ಗುಲಾಬಿ ಬೆಳೆದಿದ್ದಾರೆ.