ಜಿಲ್ಲೆ

ಅಳದಂಗಡಿ ಸಹಕಾರಿ 1.54 ಕೋ.ರೂ.ಲಾಭ : ಅಧ್ಯಕ್ಷ ರಾಕೇಶ್ ಹೆಗ್ಡೆ ಮಾಹಿತಿ : ಶೇ.14 ಡಿವಿಡೆಂಡ್ ಘೋಷಣೆ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಅಳದಂಗಡಿ ಸಹಕಾರಿ ಸಂಘದಲ್ಲಿ 7251 ಸದಸ್ಯರಿದ್ದು, 5.17 ಕೋಟಿ ರೂ.ಪಾಲು ಬಂಡವಾಳ ಹೊಂದಿರುತ್ತದೆ. 29.59 ಕೋಟಿ ರೂ.ಠೇವಣಿ ಸಂಗ್ರಹಿಸಲಾಗಿದೆ. ವರದಿ ಸಾಲಿನಲ್ಲಿ ಸಂಘ 394.12 ಕೋಟಿ ರೂ.ವಾರ್ಷಿಕ ವ್ಯವಹಾರ ನಡೆಸಿ, 1.54 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.14 ಡಿವಿಡೆಂಡ್ ನೀಡಲಾಗುವುದು ಎಂದು ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಹೇಳಿದರು.

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘ ಸಾಲ ಈ ಸಾಲಿನಲ್ಲಿ ಸಾಲ ವಸೂಲಾತಿಯಲ್ಲಿ ಶೇ.99.21ರಷ್ಟು ಗುರಿ ಸಾಧಿಸಿದೆ ಎಂದು ತಿಳಿಸಿದರು.

ರೈತ ಸದಸ್ಯರಾದ ಸುಭಾಶ್ಚಂದ್ರ ರೈ, ಸಂತೋಷ್ ಸಾಲಿಯಾನ್, ಪ್ರಶಾಂತ್ ವೇಗಸ್, ಶಿವಭಟ್, ಸಂಜೀವ ಪೂಜಾರಿ ಕೊಡಂಗೆ, ಪ್ರವೀಣ್ ಮೆಹಂದಳೆ, ಪ್ರಮೋದ್ ಕುಮಾರ್ ಜೈನ್, ಹರೀಶ್ ರೈ, ಗಣೇಶ್ ಸಂಭ್ರಮ, ಜಗದೀಶ್ ರೈ ಹಾನಿಂಜ ಮತ್ತಿತರರು ಮಾತನಾಡಿದರು. ಬಳಂಜದಲ್ಲಿ ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶಾಖೆ ಸೋರುತ್ತಿದೆ. ಸುಸಜ್ಜಿತವಾದ ಕಟ್ಟಡ ನಿರ್ಮಿಸುವಂತೆ ಬಳಂಜ, ನಾಲ್ಕೂರು, ತೆಂಕಕಾರಂದೂರು ಗ್ರಾಮದ ರೈತ ಸದಸ್ಯರು ಒತ್ತಾಯಿಸಿದರು.

ನಿರ್ದೇಶಕರಾದ ಹೇಮಂತ್, ದೇವಿಪ್ರಸಾದ್ ಶೆಟ್ಟಿ, ದಿನೇಶ್ ಪಿ.ಕೆ., ದೇಜಪ್ಪ ಪೂಜಾರಿ ಹಾಗೂ ಮಾಜಿ ಅಧ್ಯಕ್ಷರು, ರೈತ ಸದಸ್ಯರು ಸಂಘದ ಉಪಾಧ್ಯಕ್ಷ ಜನಾರ್ದನ, ಗುರುಪ್ರಸಾದ್ ಹೆಗ್ಡೆ, ವಿಶ್ವನಾಥ ಹೊಳ್ಳ, ಕೊರಗಪ್ಪ, ಸುಂದರಿ, ಮಮತಾ, ಧರ್ಣಪ್ಪ, ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೀರಾ 2023-24ನೇ ಸಾಲಿನ ವಾರ್ಷಿಕ ವರದಿ ಜಮಾ ಖರ್ಚು ಹಾಗೂ ಲೆಕ್ಕಪತ್ರಗಳನ್ನು ಸಭೆಗೆ ಮಂಡಿಸಿದರು. ಸಂಘದ ನೌಕರರ ವೃಂದದ ಸತೀಶ್ ಕೆ., ಪ್ರಶಾಂತ್ ಎಸ್., ಭರತ್ ರಾಜ್, ಜಗದೀಶ್ ಶೆಟ್ಟಿ ಎನ್., ಮಮತಾ, ಸಂತೋಷ್ ಎ., ಹರೀಶ್ ನಾಯ್ಕ, ಯತೀಶ್, ದಿನೇಶ್, ಪ್ರವೀಣ, ಶ್ರೀದೇವಿ, ಸುಮಲತಾ, ಕಿರಣ್, ಡೀಕಯ್ಯ, ಜಯಾನಂದ ಹಾಗೂ ಪಿಗ್ಮಿ ಸಂಗ್ರಾಹಕರು ಸಹಕರಿಸಿದರು.

ಹೊಸ ಯೋಜನೆಗಳು

ಸಿಎ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ವಿಸ್ತರಣಾ ಕಟ್ಟಡ ನಿರ್ಮಾಣ, ಆವರಣ ಗೋಡೆ ನಿರ್ಮಾಣ, ಇಂಟರ್‌ಲಾಕ್ ಅಳವಡಿಕೆ, ಪೆರೋಡಿತ್ತಾಯಕಟ್ಟೆ ಶಾಖೆಗೆ ಸ್ವಂತ ನಿವೇಶನ ಖರೀದಿ, ಎಂ.ಎಸ್.ಸಿ ಯೋಜನೆಯಲ್ಲಿ ಬಳಂಜ ಶಾಖೆಗೆ ಗೋದಾಮು ಕಟ್ಟಡ ನಿರ್ಮಾಣ ಹಾಗೂ ಶಾಖೆಯನ್ನು ಮೇಲ್ದರ್ಜೆಗೆ ಏರಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಸಂಘದ ವ್ಯಾಪ್ತಿಯ ಕೃಷಿಕರು ಏಕಬೆಳೆಗೆ ಅಂಟಿಕೊಂಡಿರುವ ಸಂದರ್ಭದಲ್ಲಿ ಉಪಬೆಳೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾಳುಮೆಣಸು, ಜಾಯಿಕಾಯಿ ಕೃಷಿ ತರಬೇತಿ ಶಿಬಿರವನ್ನು ಆಯೋಜಿಸಿ ಕಾಳುಮೆಣಸು, ಗಿಡಗಳನ್ನು ಉಚಿತ ವಿತರಣೆ ನಡೆಸಲಾಗಿದೆ. ಈ ಉಪಬೆಳೆಗಳನ್ನು ಅನುಷ್ಠಾನಗೊಳಿಸಲು ನಮ್ಮ ಪ್ರಯತ್ನ ನಿರಂತರವಾಗಿ ಸಾಗಲಿದೆ. - ರಾಕೇಶ್ ಹೆಗ್ಡೆ, ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ