ರಾಮಾಪುರದಲ್ಲಿ ಆಯೋಜಿಸಿದ್ದ ಗ್ರಾಮಸಭೆಯನ್ನು ಅಧ್ಯಕ್ಷ ರವಿ ಉದ್ಘಾಟಿಸಿದರು. ನಾರಾಯಣ್, ಮಲ್ಲು, ಪುಷ್ಪಲತಾ ಇತರರು ಇದ್ದರು.  
ಜಿಲ್ಲೆ

209 ಕಾಮಗಾರಿಗಳಿಗೆ 1.54 ಕೋಟಿ ರೂ. ಖರ್ಚು

ಹನೂರು: ಒಂದು ವರ್ಷದ ಅವಧಿಯಲ್ಲಿ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ 209 ಕಾಮಗಾರಿಗಳು ನಡೆದಿದ್ದು, 1.54 ಕೋಟಿ ರೂ. ಅನುದಾನ ಖರ್ಚು ಮಾಡಲಾಗಿದೆ ಎಂದು ನರೇಗಾ ಯೋಜನೆಯ ತಾಲೂಕು ಸಂಯೋಜಕ ನಾರಾಯಣ್ ತಿಳಿಸಿದರು.

ರಾಮಾಪುರ ಗ್ರಾಮ ಪಂಚಾಯಿತಿ ವತಿಯಿಂದ ಮಂಗಳವಾರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ತಪಾಸಣೆ ಹಾಗೂ 15ನೇ ಹಣಕಾಸು ಯೋಜನೆಯ ಗ್ರಾಮಸಭೆಯಲ್ಲಿ ಮಾತನಾಡಿದರು.

ನರೇಗಾ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಪ್ರತಿ ವ್ಯಕ್ತಿ 100 ದಿನ ಉದ್ಯೋಗ ಪಡೆಯುವುದರ ಮೂಲಕ ಪ್ರತಿ ದಿನ 349 ರೂ. ಕೂಲಿ ಪಡೆಯಬಹುದಾಗಿದೆ. ಈ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣ, ದನದ ಕೊಟ್ಟಿಗೆ, ಜಮೀನು, ರಸ್ತೆ ಅಭಿವೃದ್ಧಿ ಸೇರಿದಂತೆ ಇತರ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದರ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ಕಳೆದ ಸಾಲಿನಲ್ಲಿ ನಡೆದಿರುವ ಕಾಮಗಾರಿಗಳನ್ನು ಈಗಾಗಲೇ ಪರಿಶೀಲಿಸಲಾಗಿದೆ. ಹಾಗಾಗಿ ಈ ಕಾಮಗಾರಿಗಳಲ್ಲಿ ಏನಾದರೂ ಆಕ್ಷೇಪಗಳಿದ್ದಲ್ಲಿ ಸಲ್ಲಿಸಬಹುದು. ಈ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಪಳನಿಮೇಡಿನ ಸಂಗನಪುರದ ತಂಗವೇಲು ಮಾತನಾಡಿ, 2020ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಕೆಲವರು ದನದ ಕೊಟ್ಟಿಗೆ ನಿರ್ಮಿಸಿದ್ದಾರೆ. ಆದರೆ ಈವರೆಗೂ ಸಾಮಗ್ರಿ ಬಿಲ್ ಪಾವತಿಯಾಗಿಲ್ಲ. ಇದರಿಂದ ಅವ್ಯವಹಾರ ನಡೆದಿದೆ ಎನ್ನಲಾಗಿದ್ದು, ತನಿಖೆಯಾಗಬೇಕು. ಈ ಯೋಜನೆಯಡಿ ಜನರಿಗೆ ಸಮರ್ಪಕವಾಗಿ 100 ದಿನ ಉದ್ಯೋಗ ನೀಡುತ್ತಿಲ್ಲ ಎಂದು ಆರೋಪಿಸಿದರು.

ಇನ್ನು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತೀಯ ಅಧ್ಯಕ್ಷ ರಾಮಾಪುರ ರಾಜೇಂದ್ರ ಮಾತನಾಡಿ, ಗ್ರಾಮದ ಕೆರೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಆದೇಶಿಸಿದೆ. ಆದರೆ ಈ ಕಾರ್ಯ ಆಗುತ್ತಿಲ್ಲ. ಈ ಬಗ್ಗೆ ಕ್ರಮವಹಿಸಬೇಕು. ಜತೆಗೆ ಜನರು ಗುಳೆ ಹೋಗುವುದನ್ನು ತಪ್ಪಿಸಲು ಗ್ರಾಪಂನಿಂದ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ತಿಳಿಸಬೇಕು ಎಂದರು. ಇದಕ್ಕೆ ಪಿಡಿಒ ಪುಷ್ಪಲತಾ ಪ್ರತಿಕ್ರಿಯಿಸಿ, ಜನರಿಗೆ ಸಮರ್ಪಕವಾಗಿ ಉದ್ಯೋಗ ನೀಡಲಾಗುವುದು. ಕೆರೆಗಳ ಅಭಿವೃದ್ಧಿಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ನರೇಗಾ ಹಾಗೂ 15ನೇ ಹಣಕಾಸು ಯೋಜನೆಯಡಿ ಕೈಗೊಳ್ಳಲಾಗಿದ್ದ ಅಭಿವೃದ್ಧಿ ಕಾಮಗಾರಿಗಳ ವಿವರಗಳನ್ನು ಸಭೆಯಲ್ಲಿ ಮಂಡಿಸಲಾಯಿತು. ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ರವಿ, ಸಮಾಜ ಕಲ್ಯಾಣ ಇಲಾಖೆಯ ಮಲ್ಲು, ಬಿಲ್ ಕಲೆಕ್ಟರ್ ಹನುಮಂತು ಇತರರು ಇದ್ದರು.