ಹಾಸನ: ಹೊಸ ವರ್ಷದ ಉಡುಗೊರೆಯಾಗಿ ಜಿಲ್ಲೆಯ ಹಾಲು ಉತ್ಪಾದಕರಿಗೆ ನೀಡುವ ದರವನ್ನು ಪ್ರತಿ ಲೀಟರ್‌ಗೆ 1.50 ರೂ. ಹೆಚ್ಚಿಸಲಾಗಿದೆ ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಡಿ. ರೇವಣ್ಣ ಹೇಳಿದರು.
ಡಿ.19 ರಂದು 1 ರೂ. ಹೆಚ್ಚಿಸಲಾಗಿತ್ತು. ಹಾಸನ ಹಾಲು ಒಕ್ಕೂಟ ಈ ಬಾರಿ 40 ಕೋಟಿ ರೂ. ಆದಾಯ ಗಳಿಸಿದ್ದು ಅದರಲ್ಲಿ 25 ಕೋಟಿ ರೂ.ಗಳನ್ನು ಹಾಲು ಉತ್ಪಾದಕರಿಗೆ ವಿನಿಯೋಗಿಸಲಾಗುತ್ತಿದೆ. ಜನವರಿ 1ರಿಂದ ಪ್ರತಿ ಲೀಟರ್ ಹಾಲಿಗೆ 29 ರೂ.ಗಳನ್ನು ರೈತರು ಪಡೆಯುತ್ತಿದ್ದು ರಾಜ್ಯದಲ್ಲಿ ಹೆಚ್ಚು ಹಣ ನೀಡುವ ಒಕ್ಕೂಟ ನಮ್ಮದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
ಉತ್ಪಾದಕರಿಗೆ ಖರೀದಿ ದರ ಹೆಚ್ಚಿಸಿರುವುದರಿಂದ ಪ್ರತಿ ತಿಂಗಳು 6.5 ಕೋಟಿ ರೂ. ಹೊರೆಯಾಗಲಿದೆ. ಮಾರ್ಚ್ ವೇಳೆಗೆ ಅಂದಾಜು 25 ಕೋಟಿ ರೂ. ವೆಚ್ಚವಾಗುವ ಸಾಧ್ಯತೆಯಿದೆ. ಜಿಲ್ಲೆಯ ರೈತರ ಹಿತದೃಷ್ಟಿಯಿಂದ ದರ ಹೆಚ್ಚಿಸಿದ್ದು ನಷ್ಟವಾಗದಂತೆ ಎಚ್ಚರ ವಹಿಸಲಾಗುವುದು ಎಂದರು.
ರಾಸು, ಮಾಲೀಕರಿಗೆ ವಿಮೆ: ಒಕ್ಕೂಟಕ್ಕೆ ಹಾಲು ನೀಡುವ ರಾಸು ಹಾಗೂ ಅದರ ಮಾಲೀಕರಿಗೆ ವಿಮೆ ಮಾಡಿಸಲು ನಿರ್ಧರಿಸಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. 30,000 ಹಾಲು ಉತ್ಪಾದಕರು ಹಾಗೂ 50,000 ರಾಸುಗಳನ್ನು ವಿಮೆಗೆ ಒಳಪಡಿಸಲಾಗುವುದು. ವಿಮೆಯ ಶೇ. 40 ರಷ್ಟು ಪ್ರೀಮಿಯಂ ಅನ್ನು ರೈತರು, ಶೇ. 60 ರಷ್ಟು ಒಕ್ಕೂಟ ಭರಿಸುತ್ತದೆ. ರೈತರು ಅಕಾಲಿಕ ಮರಣಕ್ಕೀಡಾದರೆ 2 ಲಕ್ಷ ರೂ. ಹಾಗೂ ರಾಸುಗಳು ಪ್ರಾಣ ಕಳೆದುಕೊಂಡರೆ 50 ಸಾವಿರ ರೂ.ವರೆಗೆ ವಿಮೆ ಲಭ್ಯವಾಗಲಿದೆ. ಇದಕ್ಕಾಗಿ 4 ಕೋಟಿ ರೂ. ಮೀಸಲಿಡಲಾಗಿದೆ ಎಂದು ಹೇಳಿದರು.
ದಕ್ಷಿಣ ಭಾರತದಲ್ಲೇ ಪ್ರಥಮ: ವಿನೂತನ ಪ್ರಯೋಗಗಳ ಮೂಲಕ ದೇಶಕ್ಕೆ ಮಾದರಿಯಾಗಿರುವ ಹಾಸನ ಹಾಲು ಒಕ್ಕೂಟ 150 ಕೋಟಿ ರೂ. ವೆಚ್ಚದಲ್ಲಿ ಪೆಟ್ ಬಾಟಲ್‌ನಲ್ಲಿ ಸುವಾಸಿತ ಹಾಲು ಉತ್ಪಾದಿಸುವ ಘಟಕ ನಿರ್ಮಿಸುತ್ತಿದ್ದು, ಏಪ್ರಿಲ್‌ಗೆ ಕಾರ್ಯಾರಂಭವಾಗಲಿದೆ. ಪ್ರತಿ ಗಂಟೆಗೆ 30,000 ಪೆಟ್ ಬಾಟಲ್ ತಯಾರಿಸಲಾಗುವುದು.
ಹಾಲು, ಮೊಸರು, ಮಜ್ಜಿಗೆ ಸೇರಿದಂತೆ ಅನೇಕ ಉಪಉತ್ಪನ್ನಗಳು ಬಾಟಲ್‌ನಲ್ಲಿ ತಯಾರಾಗುತ್ತವೆ. ಪೆಟ್ ಬಾಟಲ್‌ಗಳ ಮಾರಾಟಕ್ಕೆ ಈಗಾಗಲೇ ತಯಾರಿ ನಡೆಸಲಾಗಿದೆ. ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಪೆಟ್ ಬಾಟಲ್ ಘಟಕ ಆರಂಭವಾಗಲಿದೆ ಎಂದರು.
ಬೆಂಗಳೂರಲ್ಲಿ ಅವಕಾಶ ನೀಡಿ: ರಾಜಧಾನಿ ಬೆಂಗಳೂರಿನಲ್ಲಿ ನಿತ್ಯ 10 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದ್ದರೂ ಹಾಸನ ಹಾಲು ಒಕ್ಕೂಟದಿಂದ ಕೇವಲ 1.50 ಲಕ್ಷ ಲೀ. ಸರಬರಾಜು ಆಗುತ್ತಿದೆ. ಹೊರ ರಾಜ್ಯದ ಖಾಸಗಿ ಸಂಸ್ಥೆಗಳ ಹಾಲು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ದಶಕಗಳಿಂದ ಸರ್ಕಾರದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ನಮಗೆ ನಾಲ್ಕರಿಂದ ಐದು ಲಕ್ಷ ಲೀ. ಹಾಲು ಮಾರಾಟಕ್ಕೆ ಅವಕಾಶ ನೀಡಬೇಕು. ನಮ್ಮ ಒಕ್ಕೂಟದ ಹಾಲನ್ನು ಹೆಜ್ಜೆಗೊಂದು ಸಾರಿ ಪರೀಕ್ಷಿಸುವ ಆರೋಗ್ಯ ಇಲಾಖೆ ಅಧಿಕಾರಿಗಳು ಹೊರ ರಾಜ್ಯದ ಉತ್ಪನ್ನಗಳ ಪರೀಕ್ಷೆ ಮಾಡುವುದಿಲ್ಲ. ಬೆಂಗಳೂರಿನ ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ, ರಾಜ್ಯದಿಂದ 10 ರೂ. ಬಂದಿಲ್ಲ: 2018ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ರೈತರಿಗಾಗಿ ಅನೇಕ ಯೋಜನೆ ಜಾರಿಗೊಳಿಸಿದ್ದರು. ಆದರೆ ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ರೈತರಿಗೆ 10 ರೂ. ಸಹ ಲಾಭ ದೊರೆತಿಲ್ಲ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ವ್ಯಂಗ್ಯವಾಡಿದರು.
ಯಾವ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ತುಮಕೂರಿಗೆ ಬರುತ್ತಿದ್ದಾರೆಂಬುದೇ ಗೊತ್ತಿಲ್ಲ. ಅನ್ನದಾತರಿಗೆ ಏನಾದರೂ ಲಾಭ ಮಾಡಿಕೊಟ್ಟರೆ ತಾನೇ ಅವರನ್ನು ಸ್ಮರಿಸಲು ಸಾಧ್ಯ ಎಂದು ಕಾಲೆಳೆದರು.
ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಹಂಚಿಕೆ ಕುರಿತ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲ ಜಿಲ್ಲೆಗೂ ಡಿಸಿಎಂ ನೇಮಿಸಿದರೆ ತುಂಬ ಒಳ್ಳೆಯದು ಎಂದು ಛೇಡಿಸಿದರು.