ಜಿಲ್ಲೆ

1.47 ಕೋಟಿ ರೂ. ಉಳಿತಾಯ ಬಜೆಟ್

ರಾಣೆಬೆನ್ನೂರ: ಸ್ಥಳೀಯ ನಗರಸಭೆ ವಿಶ್ವೇಶ್ವರ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 2020-21ನೇ ಸಾಲಿನ ಆಯ-ವ್ಯಯ ಮಂಡನಾ ಸಭೆಯಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಒಟ್ಟು 1.47 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿದರು.

ನಗರಸಭೆ ಸ್ವತಂ ಆದಾಯ: ನಗರಸಭೆಯ ಆರಂಭಿಕ ಶುಲ್ಕದ ಸ್ವಂತ ಆದಾಯ ಒಟ್ಟು 13.87 ಕೋಟಿ ರೂ. ಆಗಿದೆ. ಅದರಲ್ಲಿ ಆಸ್ತಿ ತೆರಿಗೆ 4.05 ಕೋಟಿ ರೂ., ಮಳಿಗೆ ಬಾಡಿಗೆ 2.72 ಕೋಟಿ ರೂ., ನೀರಿನ ಕಂದಾಯ 3.31 ಕೋಟಿ ರೂ., ಅಭಿವೃದ್ಧಿ ಕರ 3.50 ಕೋಟಿ ರೂ., ಕಟ್ಟಡ ಪರವಾನಗಿ 32 ಲಕ್ಷ ರೂ., ವ್ಯಾಪಾರ ಪರವಾನಗಿ 25 ಲಕ್ಷ ರೂ., ಎಸ್​ಡಬ್ಲೂಎಂ ಶುಲ್ಕ 52 ಲಕ್ಷ ರೂ., ಸಂತೆ ಶುಲ್ಕ 35 ಲಕ್ಷ ರೂ., ನಳ ಸಂಪರ್ಕ 15 ಲಕ್ಷ ರೂ. ಹಾಗೂ ಇತರೆ ಕರ ಮತ್ತು ಆದಾಯಗಳು 70 ಲಕ್ಷ ರೂ. ಒಳಗೊಂಡಿದೆ.

ರಾಜಸ್ವ ಅನುದಾನ: ನಗರಸಭೆಗೆ ಒಟ್ಟು 14 ಕೋಟಿ ರೂ. ರಾಜಸ್ವ ಅನುದಾನ ಲಭ್ಯವಿದ್ದು, ಅದರಲ್ಲಿ ಎಸ್​ಎಫ್​ಸಿ ವೇತನ ಅನುದಾನ 4.5 ಕೋಟಿ ರೂ., ಎಸ್​ಎಫ್​ಸಿ ವಿದ್ಯುತ್ ಅನುದಾನ 5 ಕೋಟಿ ರೂ., ಎಸ್​ಎಫ್​ಸಿ ಮುಕ್ತಿನಿಧಿ ಅನುದಾನ 4.50 ಕೋಟಿ ರೂ. ಹಾಗೂ ನಲ್ಮ ಯೋಜನೆ ಅನುದಾನದಲ್ಲಿ ರಾಜಸ್ವ ವೆಚ್ಚಗಳಿಗೆ ಸಂಬಂಧಿಸಿದಂತೆ ವರ್ಗಾವಣೆ ಮಾಡಿದ 1.5 ಕೋಟಿ ರೂ. ಒಳಗೊಂಡಿದೆ.

ರಾಜಸ್ವ ಪಾವತಿಗಳು: ನಗರಸಭೆ ರಾಜಸ್ವ ಪಾವತಿ (ಖರ್ಚು) 24.97 ಕೋಟಿ ರೂ.ಇದೆ. ಅದರಲ್ಲಿ ವೇತನ ಪಾವತಿ 5 ಕೋಟಿ ರೂ., ಎಸ್​ಡಬ್ಲೂಎಂ ಹೊರಗುತ್ತಿಗೆ ವಾಹನ ಚಾಲಕರಿಗೆ 1.50 ಕೋಟಿ ರೂ., ಪೌರಕಾರ್ವಿುಕರಿಗೆ ನೇರವೇತನ ಪಾವತಿಗಾಗಿ 2.86 ಲಕ್ಷ ರೂ., ಬೀದಿ ದೀಪದ ಹೊರಗುತ್ತಿಗೆ 60 ಲಕ್ಷ ರೂ., ನೀರು ಸರಬರಾಜು ಹೊರಗುತ್ತಿಗೆ 85 ಲಕ್ಷ ರೂ., ನೀರು ಸರಬರಾಜು ವಿದ್ಯುತ್ ಬಿಲ್ 3 ಕೋಟಿ ರೂ., ಬೀದಿ ದೀಪ ವಿದ್ಯುತ್ ಬಿಲ್ 3 ಕೋಟಿ ರೂ., ದಾಸ್ತಾನು ಖರೀದಿ 120 ಕೋಟಿ ರೂ., ರೇಪೇರಿ ಮತ್ತು ನಿರ್ವಹಣೆ 3.65 ಕೋಟಿ ರೂ. ಒಳಗೊಂಡಿದೆ.

ನಗರಸಭೆ ಆಯುಕ್ತ ಡಾ. ಎನ್. ಮಹಾಂತೇಶ ಹಾಗೂ ಎಲ್ಲ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ಬಜೆಟ್​ನ ಸಂಕ್ಷಿಪ್ತ ವಿವರ: ನಗರಸಭೆಯ ಆರಂಭಿಕ ಶುಲ್ಕ 13.87 ಕೋಟಿ ರೂ., ರಾಜಸ್ವ ಸ್ವೀಕೃತಿ 32.21 ಕೋಟಿ ರೂ., ಬಂಡವಾಳ ಸ್ವೀಕೃತಿ 13.24 ಕೋಟಿ ರೂ., ಅಸಾಮಾನ್ಯ ಸ್ವೀಕೃತಿ 20.48 ಕೋಟಿ ರೂ. ಸೇರಿ ಒಟ್ಟು 65.95 ಕೋಟಿ ರೂ. ನಗರಸಭೆಯ ಸ್ವೀಕೃತಿಯಾಗಿದೆ. ರಾಜಸ್ವ ಪಾವತಿ 24.97 ಕೋಟಿ ರೂ., ಬಂಡಾವಳ ಪಾವತಿ 30.51 ಕೋಟಿ ರೂ. ಹಾಗೂ ಅಸಾಮಾನ್ಯ ಪಾವತಿ 22.85 ಕೋಟಿ ರೂ. ಆಗಿದ್ದು, ಅಂದಾಜು 1.47 ಕೋಟಿ ರೂ. ಉಳಿತಾಯವಾಗಲಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ವಿವರಿಸಿದರು.

ಪ್ರಮುಖ ಅಂಶಗಳು: ನಗರಸಭೆಯ ಅಂಗನವಾಡಿ ಕೇಂದ್ರಗಳನ್ನು ಸ್ಮಾರ್ಟ್ ಅಂಗನವಾಡಿ ಕೇಂದ್ರವನ್ನಾಗಿಸಲು 30 ಲಕ್ಷ ರೂ., ಕುಡಿಯುವ ನೀರು ಸರಬರಾಜಿಗಾಗಿ 3.97 ಕೋಟಿ ರೂ., ರಸ್ತೆ ಹಾಗೂ ಚರಂಡಿ ನಿರ್ವಣಕ್ಕಾಗಿ 12.57 ಲಕ್ಷ ರೂ., ನಗರದಲ್ಲೆಡೆ ಸಿಸಿ ಕ್ಯಾಮರಾ ಅಳವಡಿಕೆಗಾಗಿ 50 ಲಕ್ಷ ರೂ., ಜಿ ಪ್ಲಸ್ 1 ಮಾದರಿಯಲ್ಲಿ ಮನೆ ನಿರ್ವಣಕ್ಕಾಗಿ 1.5 ಕೋಟಿ ರೂ., ಮಳೆ ನೀರು ನಿರ್ವಹಣೆ ಚರಂಡಿ ಹಾಗೂ ರಾಜ ಕಾಲುವೆ ಅಭಿವೃದ್ಧಿಗಾಗಿ 1.6 ಕೋಟಿ ರೂ., ಸರ್ಕಾರಿ ಕಟ್ಟಡಗಳ ಮೇಲೆ ಮಳೆ ನೀರು ಕೊಯ್ಲು ನಿರ್ಮಾಣ ಮಾಡಲು 30 ಲಕ್ಷ ರೂ. ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮೀಸಲಿಡಲಾಗಿದೆ.

ಆರೋಗ್ಯವನ್ನೇ ಮರೆತ ಬಜೆಟ್: ಜಿಲ್ಲಾಧಿಕಾರಿ ಬಜೆಟ್ ಮಂಡಿಸುತ್ತಿದ್ದಂತೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಮಾತನಾಡಿ, ಜನತೆ ಕರೊನಾದಂತಹ ವೈರಸ್​ನಿಂದ ಭಯಭೀತರಾಗಿದ್ದಾರೆ. ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚುತ್ತಿದೆ. ಆದ್ದರಿಂದ ಜನತೆಯ ಆರೋಗ್ಯದ ದೃಷ್ಟಿಯಿಂದ ಹಾಗೂ ಕರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವಂತಹ ಕಾರ್ಯಕ್ರಮ ನಡೆಸಲು ಬಜೆಟ್​ನಲ್ಲಿ ಯಾವುದೇ ಅನುದಾನ ಮೀಸಲಿಟ್ಟಿಲ್ಲ. ಇಂಥ ಸಮಯದಲ್ಲಿ ಜನತೆಗೆ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ಬಜೆಟ್​ನಲ್ಲಿ ಇದನ್ನು ಸೇರಿಸಿ ಎಂದು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಜನತೆಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾನೂನು ಬಾಹಿರ ಸಭೆ: ನಗರಸಭೆಯಲ್ಲಿ ಒಂದೂವರೆ ವರ್ಷದಿಂದ ಆಡಳಿತ ಮಂಡಳಿ ಇಲ್ಲದೇ ನಡೆಯುತ್ತಿದೆ. ಸ್ಥಳೀಯ ಶಾಸಕರು ಅಧಿಕಾರವಿಲ್ಲದಿದ್ದರೂ ಕಾನೂನು ಬಾಹಿರವಾಗಿ ಅಧಿಕಾರಿಗಳ ಸಭೆ ಮಾಡಿದ್ದಾರೆ. ಆದರೆ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಜಿಲ್ಲಾಧಿಕಾರಿಗಳು ಈವರೆಗೂ ಒಂದೇ ಒಂದು ಸಭೆ ನಡೆಸಿಲ್ಲ. ಹಾಗಾದರೆ ನಾವು ಸಮಸ್ಯೆಯನ್ನು ಯಾರ ಮುಂದೆ ಹೇಳಿಕೊಳ್ಳಬೇಕು ಎಂದು ಸದಸ್ಯ ನಿಂಗರಾಜ ಕೋಡಿಹಳ್ಳಿ ಜಿಲ್ಲಾಧಿಕಾರಿಯನ್ನು ಪ್ರಶ್ನಿಸಿದರು. ಇದಕ್ಕೆ ಧ್ವನಿ ಗೂಡಿಸಿದ ಪುಟ್ಟಪ್ಪ ಮರಿಯಮ್ಮನವರ, ಶಾಸಕರು ಕರೆದರೆ ನಾವು ಸಭೆಗೆ ಬರಲ್ಲ. ಜಿಲ್ಲಾಧಿಕಾರಿಯಾದ ನೀವು ಬಂದು ಸಭೆ ನಡೆಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಡಿಸಿ, ನಾನೇ ಸ್ವತಃ ಸಭೆ ಕರೆದು ಸಮಸ್ಯೆ ಆಲಿಸುವೆ ಎಂದರು.