ಜಿಲ್ಲೆ

1.07 ಕೋಟಿ ರೂ. ವರ್ಗಾಯಿಸಿಕೊಂಡು ವಂಚನೆ

ಮರಿದೇವ ಹೂಗಾರ

ಹುಬ್ಬಳ್ಳಿ: ಮುಂಬೈ ಕೊಲಬಾ ಪೊಲೀಸ್ ಠಾಣೆ ಅಧಿಕಾರಿಗಳೆಂದು ನಂಬಿಸಿ ಅಪರಿಚಿತರು, ನಗರದ ವೃದ್ಧರೊಬ್ಬರಿಗೆ ಡಿಜಿಟಲ್ ಅರೆಸ್ಟ್ ಮಾಡಿರುವುದಾಗಿ ಹೆದರಿಸಿ ಆರ್‌ಟಿಜಿಎಸ್ ಮೂಲಕ 1.07 ಕೋಟಿ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ಇಲ್ಲಿಯ ಕೇಶ್ವಾಪುರ ವಿನಯ ಕಾಲನಿಯ ನಾಗೇಶ ಶರ್ಮಾ ವಂಚನೆಗೆ ಒಳಗಾದವರು.

ವಿಶ್ವಾಸ ಹಾಗೂ ಇನ್ನೊಬ್ಬ ವಾಟ್ಸ್‌ಆ್ಯಪ್ ಮೂಲಕ ವಿಡಿಯೋ ಕರೆ ಮಾಡಿ ಪೊಲೀಸ್ ಅಧಿಕಾರಿಯೆಂದು ನಟಿಸಿದ್ದಾರೆ. ನೀವು ಮುಂಬೈನ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಖಾತೆ ತೆರೆದು ಅದರಲ್ಲಿ 2 ಕೋಟಿ ರೂ. ವ್ಯವಹಾರ ಮಾಡಲು ಒ.ಎಂ. ಅಬ್ದುಲ್ ಸಲಾಮ್‌ನಿಂದ 20 ಲಕ್ಷ ರೂ. ಕಮಿಷನ್ ಪಡೆದಿದ್ದೀರಿ. ಈ ಬಗ್ಗೆ ಮುಂಬೈ ಕೊಲಬಾ ಪೊಲೀಸ್ ಠಾಣೆಯಲ್ಲಿ ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದ್ದು, ನಿಮ್ಮನ್ನು ಡಿಜಿಟಲ್ ಬಂಧನ ಮಾಡಿರುವುದಾಗಿ ಹೆದರಿಸಿದ್ದಾರೆ. ನಂತರ ಆದ್ಯತೆ ಮೇರೆಗೆ ತನಿಖೆ ಮಾಡುವುದಾಗಿ ಹೇಳಿ, ವಿವಿಧ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಆರ್‌ಟಿಜಿಎಸ್ ಮೂಲಕ ಒಟ್ಟು 1,07,80,600 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ನಾಗೇಶ, ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಸಿಇಎಸ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.