ಜಿಲ್ಲೆ

ರಾಜಧಾನಿಯಲ್ಲಿ ಈಗ 1.02 ಕೋಟಿ ಮತದಾರರರು ಅಧಿಕೃತ

ಬೆಂಗಳೂರು: ಬಿಬಿಎಂಪಿ ಒಳಗೊಂಡಂತೆ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಈಗ 1.02 ಕೋಟಿ ಮತದಾರರಿದ್ದಾರೆ. ಇತ್ತೀಚಿಗೆ ನಡೆದ ವಾರ್ಷಿಕ ಪರಿಷ್ಕರಣೆಯ ಅಂತಿಮ ಪಟ್ಟಿಯನ್ನು ಚುನಾವಣಾ ಆಯೋಗದ ಪರಾಮರ್ಶೆ ಬಳಿಕ ನಗರ ಜಿಲ್ಲಾ ಚುನಾವಣಾಧಿಕಾರಿಯೂ ಆದ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರಕಟಿಸಿದ್ದಾರೆ.

ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ನಂತರ ಮಾತನಾಡಿದ ಅವರು, 2025ರ ಜ.1ಕ್ಕೆ ಅನ್ವಯವಾಗುವಂತೆ ಬೆಂಗಳೂರು ನಗರ ಜಿಲ್ಲೆಯಲ್ಲಿ 1,02,64,714 ಮತದಾರರಿದ್ದಾರೆ. ಈ ಪೈಕಿ 52,80,287 ಪುರುಷರು ಹಾಗೂ 49,82,589 ಮಹಿಳೆಯರು ಇದ್ದು, 1,838 ತೃತೀಯ ಲಿಂಗಿಗಳು ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದರು.

ಅಂತಿಮ ಮತದಾರರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ ಇವರ ಮತ್ತು ಬಿಬಿಎಂಪಿ ವೆಬ್‌ಸೈಟ್ ನಲ್ಲಿ ಪರಿಶೀಲಿಸಿ ತಮ್ಮ ಹೆಸರುಗಳನ್ನು ಖಾತರಿಪಡಿಸಿಕೊಳ್ಳಬಹುದು. ನಗರದ ಎಲ್ಲ 28 ವಿಧಾನಸಭಾ ಕ್ಷೇತ್ರಗಳ ಮತದಾರರ ನೊಂದಣಾಧಿಕಾರಿಗಳ ಕಚೇರಿ, ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಚೇರಿ ಹಾಗೂ ವಾರ್ಡ್ ಕಚೇರಿಗಳಲ್ಲಿ ಪ್ರಕಟಿಸಲಾಗಿದ್ದು, ನಾಗರಿಕರಿಗೆ ಮತಪಟ್ಟಿ ಪರಿಶೀಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಆನ್‌ಲೈನ್ ಮೂಲಕ ಪರಿಶೀಲನೆಗ ಅವಕಾಶ:

ಸಾರ್ವಜನಿಕರು ತಾವಿರುವ ಜಾಗದಿಂದಲೇ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಮಾಹಿತಿಯನ್ನು ಯಾವುದೇ ಕಚೇರಿಗೆ ಹೋಗದೆ ಆನ್‌ಲೈನ್‌ನಲ್ಲೇ ಪರಿಶೀಲಿಸಿಕೊಳ್ಳಬಹುದಾಗಿದೆ. ಅಗತ್ಯ ತಿದ್ದುಪಡಿಗಳಿದ್ದಲ್ಲಿ ನಮೂನೆ 6, 7 ಮತ್ತು 8ರ ಅರ್ಜಿ ಸಲ್ಲಿಸಬಹುದಾಗಿದೆ.

ನಗರ ಜಿಲ್ಲೆಯಲ್ಲಿ ಮತದಾರರ ವಿವರ:

ಪುರುಷರು: 49,82,589

ಮಹಿಳೆಯರು: 49,82,589

ತೃತೀಯ ಲಿಂಗಿಗಳು: 1,838

ಯುವ ಮತದಾರರು: 95,391

ಅನಿವಾಸಿ ಭಾರತೀಯರು: 2,294

ಸೇವಾ ಮತದಾರರು: 1,712

ವಿಶೇಷ ಚೇತನ ಮತದಾರರು: 32,505

ಒಟ್ಟು ಮತದಾರರು: 1.02 ಕೋಟಿ