ವಿಜಯವಾಣಿ ದೀಪಾವಳಿ ಕಥಾ ಸ್ಪರ್ಧೆ: ಪ್ರಥಮ ಬಹುಮಾನ ಪಡೆದ "ಗಂಟೆ ಹತ್ತು" ಕಥೆ!  
ದೀಪಾವಳಿ ವಿಶೇಷ

ವಿಜಯವಾಣಿ ದೀಪಾವಳಿ ಕಥಾ ಸ್ಪರ್ಧೆ: ಪ್ರಥಮ ಬಹುಮಾನ ಪಡೆದ "ಗಂಟೆ ಹತ್ತು" ಕಥೆ! Vijayavani Deepavali Story Contest

ಪಂಡಿತ್ ದೇವದತ್ತ ಶರ್ಮ, ಭಾರತೀಯ ಶಾಸ್ತ್ರೀಯ ಸಂಗೀತದ ಜೀವಂತ ದಂತಕಥೆಯಾಗಿದ್ದರು. ಅಜಾತಶತ್ರು ಎಂದು ಹೆಸರು ಪಡೆದಿದ್ದ ಎಪ್ಪತ್ತೈದು ವರ್ಷದ ಈ ವಿದ್ವಾಂಸ, ಬೆಂಗಳೂರಿನ ಹೊರವಲಯದಲ್ಲಿದ್ದ ತಮ್ಮ ತೋಟದ ಬಂಗಲೆಯಲ್ಲಿ ಗುಂಡೇಟಿಗೆ ಬಲಿಯಾಗಿದ್ದರು ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು.

ಇನ್ಸ್​ಪೆಕ್ಟರ್ ಸುನಿಲ್ ಭಂಡಾರಿ ಎಲ್ಲ ಪ್ರಯತ್ನಗಳನ್ನು ಮಾಡಿ ಸೋತಿದ್ದ. ಅಂತಿಮವಾಗಿ, ನಿವೃತ್ತ ಪೊಲೀಸ್ ಕಮಿಷನರ್ ಹಾಗೂ ಖಾಸಗಿ ಪತ್ತೇದಾರ ಈಶ್ವರ ರಾವ್ ಅವರ ಮುಂದೆ ಬಂದು ನಿಂತಿದ್ದ. ಸಮಯ ಬೆಳಗಿನ ಹತ್ತು ಗಂಟೆ.

‘ಇಲ್ಲಿಯವರೆಗೆ ನಮಗೆ ಉಪಯೋಗವಾಗುವಂಥ ಒಂದೇ ಒಂದು ಸುಳಿವೂ ಸಿಕ್ಕಿಲ್ಲ. ಬಂಗಲೆ ಊರ ಹೊರಗಿದೆ. ಕೊಲೆಗಾರ ಮುಖ ಮುಚ್ಚಿಕೊಂಡು ಬಂದಿದ್ದು, ಹೋದದ್ದು ಮಾತ್ರ ಸಿಸಿಟಿವಿಯಲ್ಲಿ ಕಾಣುತ್ತದೆ. ಮನೆಯೊಳಗೆ ಕ್ಯಾಮರಾಗಳಿಲ್ಲ. ಸುತ್ತಮುತ್ತಲಿನ ರಸ್ತೆಗಳಲ್ಲೂ ಸಿಸಿಟಿವಿಗಳಿಲ್ಲ. ಹೊರಗೆ ಬಂದ ಮೇಲೆ ಆತ ಗಾಳಿಯಲ್ಲಿ ಕರಗಿದಂತಾಗಿದ್ದಾನೆ. ಮುಖ್ಯಮಂತ್ರಿಗಳು ನಮಗೆ ಹನ್ನೆರಡು ಗಂಟೆಗಳ ಅವಧಿ ಕೊಟ್ಟಿದ್ದಾರೆ’ ಎಂದ ಸುನಿಲ್ ದುಗುಡದಿಂದ.

ಬಕ್ಕತಲೆ, ತುಸು ಮುಂದೆ ಬಂದ ಹೊಟ್ಟೆ, ಒಟ್ಟಾರೆ ‘ತೂಕದ ಮನುಷ್ಯ’ ಎನಿಸಿರುವ ಈಶ್ವರ ರಾವ್, ಸುನಿಲ್ ತಂದಿದ್ದ ಕಾಗದಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು.

‘ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಗೆ ಬೇಸತ್ತ ಪಂಡಿತರು ಸಂಗೀತ ಸಾಧನೆಗಾಗಿ ಊರ ಹೊರಗೆ ಬಂಗಲೆ ಕಟ್ಟಿಕೊಂಡಿದ್ದರು. ಅದೇ ಬಂಗಲೆಯಲ್ಲಿ ಕೊಲೆಯಾಗಿದ್ದು ಮಾತ್ರ ವಿಪರ್ಯಾಸ...’ ಎಂದರು ಈಶ್ವರರಾವ್.

‘ಹೌದು ಸರ್. ಪಂಡಿತರು ಪ್ರತಿದಿನ ಬೆಳಗ್ಗೆ ನಾಲ್ಕಕ್ಕೆ ಎದ್ದು ಯೋಗ, ಪ್ರಾಣಾಯಾಮ ಮಾಡುತ್ತಿದ್ದರು. ಸ್ನಾನ, ಪೂಜೆಯಾದ ಮೇಲೆ ಹಾಲು ಸೇವಿಸುತ್ತಿದ್ದರು. ಅಡುಗೆಯವನಿಗೆ ಬೆಳಗ್ಗೆ ಆರರಿಂದ ಸಂಜೆ ಆರರವರೆಗೆ ಮಾತ್ರ ಕೆಲಸ. ಮನೆಕೆಲಸದವಳು ಬೆಳಗ್ಗೆ ಒಂಬತ್ತಕ್ಕೆ ಬಂದು ಹೋಗುತ್ತಿದ್ದಳು. ಉಳಿದ ಕೆಲಸಗಳನ್ನು ಪಂಡಿತರು ತಾವೇ ಮಾಡಿಕೊಳ್ಳುತ್ತಿದ್ದರು. ಬೆಳಗ್ಗೆ ಹತ್ತರಿಂದ ಸಂಜೆ ಆರು ಗಂಟೆಯವರೆಗೆ ಗಂಟೆಗೊಂದು ತರಗತಿಯಂತೆ ಉಚಿತ ಸಂಗೀತ ಪಾಠಗಳು ನಡೆಯುತ್ತಿದ್ದವು. ಆರು ಗಂಟೆಯ ನಂತರ ಬಂಗಲೆಯಲ್ಲಿ ಪಂಡಿತರು ಒಬ್ಬರೇ. ಸರ್ಕಾರ ಭದ್ರತೆ ಕೊಡಲು ಮುಂದಾದಾಗಲೂ ಅವರು ಖಡಾಖಂಡಿತವಾಗಿ ನಿರಾಕರಿಸಿದ್ದರು. ಬಡವರಿಗೆ ಧನಸಹಾಯ ಮಾಡುತ್ತಿದ್ದರು. ಅಂಥವರನ್ನು ಯಾರಾದರೂ ಕೊಲ್ಲುತ್ತಾರೆ ಅಂದರೆ...’

‘ಸರಿ... ಸ್ಪಾಟ್​ಗೆ ಹೋಗೋಣ...’

ಇಬ್ಬರೂ ಪಂಡಿತರ ಬಂಗಲೆಗೆ ಬಂದರು. ದೇವದತ್ತ ಶರ್ಮರು ಮಲಗುವ ಕೋಣೆಯಲ್ಲಿ ಮೃತರಾಗಿದ್ದರು. ಮಲಗಿದ್ದಾಗ ಅತ್ಯಂತ ಸಮೀಪದಿಂದ ತಲೆಗೆ ಗುಂಡು ಹೊಡೆಯಲಾಗಿತ್ತು. ಅಡುಗೆ ಕೆಲಸದ ಗವಿಸಿದ್ದಪ್ಪ ಬೆಳಗ್ಗೆ ಬಂದಾಗ, ಪಂಡಿತರು ಕೊಲೆಯಾದ ವಿಷಯವನ್ನು ಪೋಲೀಸರಿಗೆ ತಿಳಿಸಿದ್ದ.

‘ಪೋಸ್ಟ್​ಮಾರ್ಟಂ ರಿಪೋರ್ಟ್?’ ‘ಬಂದಿದೆ ಸರ್. ರಾತ್ರಿ ಹತ್ತು ಗಂಟೆಯ ಸುಮಾರಿಗೆ ಸಾವು ಸಂಭವಿಸಿದೆ ಅಂತಿದೆ. ಸಿಸಿಟಿವಿಯಲ್ಲಿರುವ ಕೊಲೆಗಾರ ಬಂದು ಹೊರ ಹೋದ ಸಮಯಕ್ಕೂ ಅದು ಸರಿಹೊಂದುತ್ತೆ.... ಮನೆಕೆಲಸದವಳು ಮತ್ತು ಅಡುಗೆಯವನನ್ನು ವಿಚಾರಿಸೋಣವೇ?’

‘ಹಣ, ಚಿನ್ನ, ಒಡವೆ ಯಾವುದಾದರೂ ಕಳ್ಳತನವಾಗಿದೆಯೇ?’

‘ಏನೂ ಕಾಣೆಯಾಗಿಲ್ಲ. ಸಂಗೀತ ವಾದ್ಯಗಳೂ ಹಾಗೇ ಇವೆ.’

‘ಹಾಗಾದರೆ ಈಗ ಅವರನ್ನು ವಿಚಾರಿಸುವ ಅಗತ್ಯವಿಲ್ಲ. ನಮ್ಮ ಬಳಿ ಸಮಯ ಕಡಿಮೆ. ಸಿಸಿಟಿವಿ ತೋರಿಸಿ.’

ಮುಸುಕುಧಾರಿ ರಾತ್ರಿ 9.45ಕ್ಕೆ ಬಂಗಲೆಯೊಳಗೆ ಪ್ರವೇಶಿಸಿದ್ದ. ಅವನ ನಡೆ ಮತ್ತು ಮನೆಯೊಳಗೆ ನೇರವಾಗಿ ಸಾಗಿದ ರೀತಿ ನೋಡಿದರೆ, ಆ ದಾರಿ ಅವನಿಗೆ ಅಪರಿಚಿತವಲ್ಲ ಎಂಬ ಅನುಮಾನ ಮೂಡುತ್ತಿತ್ತು. 10.05ಕ್ಕೆ ಆತ ಹೊರಗೆ ಹೋದ. ಏನನ್ನೂ ತೆಗೆದುಕೊಂಡು ಹೋದಂತೆ ಕಾಣಲಿಲ್ಲ.

‘ಸುನಿಲ್, ಈ ವ್ಯಕ್ತಿ ಒಳಗೆ ಬಂದದ್ದು ಮತ್ತು ಹೊರಗೆ ಹೋದದ್ದರ ನಡುವೆ ಇಪ್ಪತ್ತು ನಿಮಿಷಗಳ ಅಂತರವಿದೆ. ಅವನು ಇಪ್ಪತ್ತು ನಿಮಿಷ ಇಲ್ಲಿ ಏನು ಮಾಡುತ್ತಿದ್ದ?’

ಸುನಿಲ್ ಯೋಚಿಸತೊಡಗಿದ.

‘ಹಣ ಕದ್ದಿಲ್ಲ. ಬೇರೆ ಯಾವುದನ್ನೂ ತೆಗೆದುಕೊಂಡಿಲ್ಲ. ಅಂದರೆ ಉದ್ದೇಶ ಕಳ್ಳತನವಲ್ಲ. ಆ ಇಪ್ಪತ್ತು ನಿಮಿಷಗಳಲ್ಲಿ ಏನೋ ನಡೆದಿದೆ. ಮಾತುಕತೆ, ವಾಗ್ವಾದ ಅಥವಾ ಇನ್ನೇನಾದರೂ. ಅದು ನಮಗೆ ಗೊತ್ತಾಗಬೇಕು.’

ರಾವ್ ಸುತ್ತಲೂ ನೋಡಿದರು.

‘ಈ ಬಂಗಲೆಯನ್ನು ಡಿಸೈನ್ ಮಾಡಿದ ಆರ್ಕಿಟೆಕ್ಟ್​ನನ್ನು ಕರೆಸಿ.’

ಆರ್ಕಿಟೆಕ್ಟ್ ಸುಂದರೇಶ್ ಬಂದ.

ರಾವ್ ಅವನನ್ನು ಮಾತನಾಡಿಸುತ್ತಿದ್ದಾಗ, ಅವನು ಒಳಗೆ ಬಂದು ಕುಳಿತ ರೀತಿ, ವಿಶೇಷವಾಗಿ ಅವನ ಎಡಗಾಲಿನ ಹೆಜ್ಜೆಯಲ್ಲಿ ಕಾಣುತ್ತಿದ್ದ ಸಣ್ಣ ಎಳೆತವನ್ನು ಗಮನಿಸಿದರು.

‘ಸರ್, ಹಾಲ್​ನಲ್ಲಿ ಒಂದು ರೆಕಾರ್ಡಿಂಗ್ ಸಿಸ್ಟಮ್ ಇದೆ. ಒಂದು ತಿಂಗಳ ರೆಕಾರ್ಡಿಂಗ್ ಉಳಿಯುತ್ತದೆ.’

‘ರೆಕಾರ್ಡಿಂಗ್ ಸಿಸ್ಟಮ್’

‘ಪಂಡಿತರೇ ಹಾಕಿಸಿಕೊಂಡಿದ್ದು. ಸಂಗೀತಾಭ್ಯಾಸದ ವೇಳೆ ಕೋಣೆಯ ಧ್ವನಿ-ಪ್ರತಿಧ್ವನಿಗಳ ಗುಣಮಟ್ಟ ಪರೀಕ್ಷಿಸಲು ಹೈ-ಸೆನ್ಸಿಟಿವ್ ಆಡಿಯೊ ರೆಕಾರ್ಡರ್ ಅಳವಡಿಸಿದ್ದರು.’

‘ಕೋಣೆಯೊಳಗಿನ ಮಾತುಗಳೂ ದಾಖಲಾಗುತ್ತವೆಯೇ?’

ಸುನಿಲ್ ಕೇಳಿದ. ಈ ಕೇಸು ಮುಗಿಯಿತು ಎಂಬ ಧಾವಂತ ಅವನ ಧ್ವನಿಯಲ್ಲಿತ್ತು.

‘ಎಲ್ಲ ಕಡೆ ನಿಶ್ಶಬ್ದವಾಗಿದ್ದರೆ ಕೇಳಿಸುತ್ತದೆ.’

‘ಸರಿ. ಅದನ್ನು ಪ್ಲೇ ಮಾಡಿ.’

ರೆಕಾರ್ಡಿಂಗ್ ಪ್ಲೇ ಆಯಿತು.

ಮಕ್ಕಳ ಸಂಗೀತ, ಪಂಡಿತರ ಪಾಠ, ಕೆಲಸಗಾರರ ಮಾತುಗಳು...

‘9.45ಕ್ಕೆ ಬನ್ನಿ!’ ಎಂದ ಸುನಿಲ್ ಆತುರಾತುರವಾಗಿ.

ಪಂಡಿತರು ಮಲಗುವ ಕೋಣೆಗೆ ಹೋಗುವ ಹೆಜ್ಜೆಸದ್ದು.

ಬಾಗಿಲು ತೆರೆದ ಸದ್ದು.

ಹೆಜ್ಜೆಗಳು.

ಒಂದು ನಿಮಿಷದ ನಂತರ

‘ಕ್ಲಿಪ್!’

ಸೈಲೆನ್ಸರ್ ಹಾಕಿದ ಗನ್​ನ ಗುಂಡಿನ ಸದ್ದು.

ಅಷ್ಟೇ.

ಯಾವ ಮಾತೂ ಇಲ್ಲ.

ಯಾವ ವಾಗ್ವಾದವೂ ಇಲ್ಲ.

ಸುನಿಲ್ ಕುರ್ಚಿಯಲ್ಲಿ ಕುಸಿದು ಕುಳಿತ.

‘ಕೊಲೆಗಾರ ಸಿಕ್ಕನಾ, ಸುನಿಲ್?’ ರಾವ್ ನಕ್ಕರು.

‘ಇಲ್ಲ ಸರ್.’

‘ಆದರೆ ಅವನು ಬಂದಿದ್ದು, ಪಂಡಿತರನ್ನು ಕೊಂದಿದ್ದು, ಹೊರಗೆ ಹೋದದ್ದು ಖಚಿತ. ಇನ್ನೇನೋ ಇದೆ.’

‘ಏನು?’

‘ಕಳೆದ ಒಂದು ತಿಂಗಳ ರೆಕಾರ್ಡಿಂಗ್ ಕೊಡಿ.’

ಸುಂದರೇಶ್ ಪೆನ್​ಡ್ರೈವ್​ ಕೊಟ್ಟು ಹೋದ.

‘ಸರ್, ಒಂದು ತಿಂಗಳ ರೆಕಾರ್ಡಿಂಗ್ ಕೇಳಬೇಕಾ?’

‘ಅಷ್ಟು ಸಮಯ ಇದೆಯಾ?’

‘ಇಲ್ಲ, ಸರ್.’

‘ಕೊಲೆಯಾದ ದಿನದ ಸಂಜೆಯ ಸಂಪೂರ್ಣ ರೆಕಾರ್ಡಿಂಗ್ ಮೊದಲು ಕೇಳೋಣ.’

ಯಾವುದೇ ಸುಳಿವು ಸಿಗಲಿಲ್ಲ.

‘ಸುನಿಲ್, ಪೆನ್​ಡ್ರೖೆವ್​ನ ಕಾಪಿ ಮಾಡಿ. ಮೊದಲ ಹದಿನೈದು ದಿನದ್ದು ನೀವು ಫಾಸ್ಟ್​ಫಾರ್ವರ್ಡ್ ಮಾಡಿಕೊಂಡು ಕೇಳಿ. ನಂತರದ್ದು ನಾನು ಕೇಳುತ್ತೇನೆ.’

‘ಸರಿ ಸರ್.’

ಮುಂದಿನ ಅಮೂಲ್ಯ ಮೂರು ಗಂಟೆಗಳೂ ಕಳೆದುಹೋದವು. ಯಾವ ಸುಳಿವೂ ಸಿಗಲಿಲ್ಲ. ಗೋಡೆಯ ಮೇಲಿದ್ದ ಹಳೆಯ ಗಡಿಯಾರ ನಾಲ್ಕು ಗಂಟೆ ಹೊಡೆದು, ಅವರ ಸಮಯ ಜಾರುತ್ತಿದೆ ಎಂದು ನೆನಪಿಸಿತು. ಇಬ್ಬರೂ ಮೌನವಾಗಿ ಯೋಚಿಸುತ್ತಾ ಕುಳಿತಿದ್ದರು.

ಹಠಾತ್ತನೆ ರಾವ್ ಎದ್ದು ಕುಳಿತರು.

‘ಸುನಿಲ್.

‘ಸರ್?’

‘ಕೊಲೆಯಾದ ದಿನದ ರಾತ್ರಿ 9.25ರಿಂದ 10.05ರವರೆಗಿನ ರೆಕಾರ್ಡಿಂಗ್ ಮತ್ತೆ ಪ್ಲೇ ಮಾಡಿ.’

ಸುನಿಲ್ ಪ್ಲೇ ಮಾಡಿದ.

9.25.

ನಿಶ್ಶಬ್ದ.

9.30. ಅರ್ಧಗಂಟೆಯಾದ ಗಡಿಯಾರದ ಬೆಲ್.

ಪಂಡಿತರ ಹೆಜ್ಜೆಗಳು.

9.45.

ಬಾಗಿಲು.

ಹೆಜ್ಜೆಗಳು.

9.46. ‘ಕ್ಲಿಪ್!’

ನಂತರ ಮೌನ.

10.00.

ಮತ್ತೆ ಮೌನ.

‘ನಿಲ್ಲಿಸಿ.’

‘ಗೊತ್ತಾಯ್ತಾ, ಸರ್?’

ರಾವ್ ಗೋಡೆಯ ಮೇಲಿದ್ದ ಹಳೆಯ ಗಡಿಯಾರದತ್ತ ನೋಡಿದರು.

‘ಈ ಗಡಿಯಾರ ಪ್ರತಿ ಗಂಟೆ ಮತ್ತು ಅರ್ಧ ಗಂಟೆಗೆ ಬೆಲ್ ಹೊಡೆಯುತ್ತದೆಯಲ್ಲ?’

‘ಹೌದು.’

‘ಹಾಗಾದರೆ ಹತ್ತು ಗಂಟೆಯ ಬೆಲ್ ಯಾಕೆ ಕೇಳಿಸಲಿಲ್ಲ?’

ಸುನಿಲ್ ಗಡಿಯಾರದತ್ತ ನೋಡಿದ.

‘ಅದಕ್ಕೂ ಕೊಲೆಗೂ ಏನು ಸಂಬಂಧ?’

ರಾವ್ ಗಡಿಯಾರದ ಹತ್ತಿರ ಹೋದರು. ಗಡಿಯಾರದ ಪಕ್ಕದ ಗೋಡೆಯ ಮೇಲೆ ಕಾಣುತ್ತಿದ್ದ ಸಣ್ಣ ಕಪ್ಪು ಗುರುತು ತೋರಿಸಿದರು.

‘ಮೊದಲು ನಾನು ಇದನ್ನು ಗಮನಿಸಿರಲಿಲ್ಲ. ಈಗ ನನ್ನ ಗಮನಕ್ಕೆ ಬಂತು. ಎಷ್ಟೋ ವರ್ಷ ಒಂದೇ ಜಾಗದಲ್ಲಿರುವ ಗಡಿಯಾರವನ್ನು ಕೆಳಗಿಳಿಸಿದರೆ, ಅದರ ಅಂಚು ಗೋಡೆಯ ಬಣ್ಣದ ಮೇಲೆ ಗುರುತು ಬಿಡುತ್ತದೆ. ಮತ್ತೆ ಅದೇ ಜಾಗಕ್ಕೆ ಹಾಕಿದರೆ ಅದು ಬಹುತೇಕ ಮುಚ್ಚಿಹೋಗುತ್ತದೆ. ಆದರೆ ಇದು ಸ್ವಲ್ಪ ಬದಿಗೆ ಸರಿದಿದೆ.’

ಸುನಿಲ್​ನ ಕಣ್ಣುಗಳು ಹಿರಿದಾದವು.

‘ಅಂದರೆ ಕೊಲೆಗಾರ ಗಡಿಯಾರವನ್ನು ಕೆಳಗಿಳಿಸಿದ್ದಾನೆಯೇ?’

‘ಅದನ್ನು ಈಗಲೇ ಹೇಳಲಾಗುವುದಿಲ್ಲ.’

‘ಆದರೆ ಹತ್ತು ಗಂಟೆಯ ಬೆಲ್?’

‘ಅದೇ ನಮಗೆ ಉತ್ತರ ಕೊಡಬಹುದು.’

ಅಷ್ಟರಲ್ಲಿ ಸುನಿಲ್​ಗೆ ಏನೋ ನೆನಪಾಯಿತು.

‘ಸರ್ ಒಂದು ದಿನದ ರೆಕಾರ್ಡಿಂಗ್​ನಲ್ಲಿ ಬೇರೆ ಯಾರದೋ ಧ್ವನಿ ಕೇಳಿತ್ತು. ಆದರೆ ವಾಗ್ವಾದ ಅಥವಾ ಬಿಸಿ ಚರ್ಚೆಯಂತದ್ದಲ್ಲ. ಅದಕ್ಕೆ ನಾನು ಗಮನ ಕೊಡಲಿಲ್ಲ.’

‘ಯಾವ ದಿನದ್ದು?’

‘ಕೊಲೆಯಾದ ದಿನದಿಂದ ಸುಮಾರು ಇಪ್ಪತ್ತು ದಿನ ಹಿಂದಿನದ್ದು.’

ರೆಕಾರ್ಡಿಂಗ್ ಪ್ಲೇ ಆಯಿತು.

‘ಬಾ, ಮಾಧವ್. ಬಹಳ ಅಪರೂಪಕ್ಕೆ ಬಂದೆಯಲ್ಲ?’

ಪಂಡಿತರ ಸೌಮ್ಯ ಧ್ವನಿ.

‘ನಿಮ್ಮ ಮೇಲೆ ಅಮ್ಮನಿಗೆ ಬಹಳ ನಂಬಿಕೆ. ನಮ್ಮ ಬ್ಯಾಂಕ್ ಲಾಕರ್ ಕೀ ನಿಮ್ಮ ಹತ್ತಿರ ಕೊಟ್ಟಿದ್ದಾರೆ. ಲಾಕರ್​ನ ಜಾಯಿಂಟ್ ಹೋಲ್ಡರ್ ನಾನು. ಕೀ ನನಗೆ ಕೊಟ್ಟುಬಿಡಿ, ಮಾವ...’ ಮಾಧವ್​ನ ಶಾಂತ ಧ್ವನಿ.

‘ಸಮಯ ಬಂದಾಗ ನಾನೇ ಕೊಡುತ್ತೇನೆ. ನಿನ್ನ ಅಮ್ಮನದು ಸಾಯುವ ವಯಸ್ಸಲ್ಲ. ಆಕೆ ನನಗೆ ಹೇಳಿದ್ದಳು. ನೀನು ನಿನ್ನ ಕಾಲ ಮೇಲೆ ನಿಂತುಕೊಂಡಾಗ ಕೀ ಕೊಡಬೇಕೆಂದು.’

‘ನನಗೆ ಈಗಲೇ ದುಡ್ಡು ಬೇಕು. ಒಂದು ಬಿಜಿನೆಸ್ ಆಫರ್ ಬಂದಿದೆ. ಮತ್ತೆ ಇಂಥ ಅವಕಾಶ ಸಿಗದಿರಬಹುದು.’

‘ಬೇಕಾದರೆ ನಾನು ನಿನಗೆ ದುಡ್ಡು ಕೊಡುತ್ತೇನೆ. ಬಿಜಿನೆಸ್ ಶುರು ಮಾಡು.’

‘ನನಗೆ ನಿಮ್ಮ ದುಡ್ಡು ಬೇಡ. ಲಾಕರ್ ಕೀ ನನಗೆ ಬೇಕು.’

‘ಮಾಧವ. ನಿನ್ನ ಅಮ್ಮ ಕೊಟ್ಟದ್ದನ್ನು ಒಂದು ಸುರಕ್ಷಿತವಾದ ಯಾರಿಗೂ ಸಿಗದ ಜಾಗದಲ್ಲಿಟ್ಟಿದ್ದೇನೆ. ಈಗ ನಿನಗೆ ಕೀ ಕೊಡಲು ಸಾಧ್ಯವಿಲ್ಲ. ಎಂದಿದ್ದರೂ ಅದು ನಿನ್ನದೇ.’

ಕೆಲವು ಕ್ಷಣ ಮೌನ.

‘ಹಾಗಾದರೆ ನಾನು ಬೇರೆ ದಾರಿ ನೋಡಿಕೊಳ್ಳುತ್ತೇನೆ.’

ಮಾಧವ್ ಹೊರಗೆ ಹೋದ ಹೆಜ್ಜೆ ಸಪ್ಪಳ ಕೇಳಿಸಿತು.

ಸುನಿಲ್ ನಿಂತ.

‘ಸರ್, ಇವನೇ!’

‘ಇರಬಹುದು. ಆದರೆ ಇನ್ನೂ ಒಂದು ಪ್ರಶ್ನೆ ಇದೆ.’

‘ಏನು?’

‘ಲಾಕರ್ ಕೀ ಗಡಿಯಾರದಲ್ಲಿದೆ ಎಂದು ಮಾಧವ್​ಗೆ ಹೇಗೆ ಗೊತ್ತು?’

ಸುನಿಲ್ ಯೋಚಿಸಿದ.

‘ಮಾಧವ್ ಹೊರ ಹೋದಾಗಿನ ಸಿಸಿಟಿವಿ ರೆಕಾರ್ಡ್ ನೋಡೋಣ.’

ಸುನಿಲ್ ರೆಕಾರ್ಡಿಂಗ್ ಹಾಕಿದ.

ಮಾಧವ್ ಹೊರ ಹೋಗುವಾಗ, ಅಡುಗೆಯವ ಗವಿಸಿದ್ದಪ್ಪನೊಂದಿಗೆ ಮಾತನಾಡಿದ್ದ. ಮಾತುಕತೆ ಮುಗಿದ ಮೇಲೆ ಅವನ ಕೈಗೆ ಏನೋ ಕೊಟ್ಟ. ಗವಿಸಿದ್ದಪ್ಪ ಅದನ್ನು ಜೇಬಿಗೆ ಹಾಕಿಕೊಂಡ.

‘ಗವಿಸಿದ್ದಪ್ಪನನ್ನು ಕರೆಸಿ.’

ಗವಿಸಿದ್ದಪ್ಪ ಬಂದ.

‘ಮಾಧವ್ ನಿನ್ನ ಹತ್ತಿರ ಏನು ಕೇಳಿದ?’

‘ಅಯ್ಯನವರ ಹತ್ತಿರ ಕೀ ಇದೆಯಾ ಅಂತ ಕೇಳಿದ್ರು. ಗೊತ್ತಿಲ್ಲ ಅಂದೆ. ಇತ್ತೀಚೆಗೆ ಮನೆಯಲ್ಲಿ ರಿಪೇರಿ, ಗೋಡೆ, ಕಪಾಟು ಒಡೆದು ಕಟ್ಟೋದು ಅಂತ ಏನಾದ್ರೂ ಮಾಡಿದ್ರಾ ಅಂತ ಕೇಳಿದ್ರು. ಅಂತದ್ದೇನಿಲ್ಲ. ಗಡಿಯಾರ ಮಾತ್ರ ಇತ್ತೀಚೆಗೆ ರಿಪೇರಿ ಮಾಡಿಸಿದ್ರು ಅಂದೆ.’

‘ಗಡಿಯಾರ?’

‘ಹೌದು. ಅದು ಸರಿಯಾಗೇ ನಡೀತಿತ್ತು. ಆದರೂ ರಿಪೇರಿ ಮಾಡಿಸಿದ್ರು. ಯಾಕೆ ಅಂತ ಗೊತ್ತಿಲ್ಲ ಅಂದೆ. ದುಡ್ಡು ಕೊಟ್ರು.’

ರಾವ್ ಮತ್ತು ಸುನಿಲ್ ಒಬ್ಬರನ್ನೊಬ್ಬರು ನೋಡಿದರು.

‘ಕೀ ಕೊಡುವಂತೆ ಪಂಡಿತರನ್ನು ಕೇಳಿದ್ದಾನೆ. ಅವರು ಕೊಡಲಿಲ್ಲ. ಗವಿಸಿದ್ದಪ್ಪ ಗಡಿಯಾರದ ವಿಷಯ ಹೇಳಿದ. ಆಗಲೇ ಮಾಧವ್​ಗೆ ಅನುಮಾನ ಬಂದಿರಬೇಕು. ಆದರೆ ಕೀ ಅದರಲ್ಲಿದೆ ಅನ್ನೋದು ಖಚಿತವಾಗಿರಲಿಲ್ಲ.’

ರಾವ್ ಯೋಚಿಸಿದರು.

‘ಮಾಧವ್​ನನ್ನು ಕರೆಸಿ.’

ಮಾಧವ್ ಬಂದ.

‘ನನ್ನ ಹತ್ತಿರ ಹೆಚ್ಚು ಸಮಯ ಇಲ್ಲ. ಏನು ಕೇಳಬೇಕೋ ಬೇಗ ಕೇಳಿ.’

ಗವಿಸಿದ್ದಪ್ಪನ ಹೇಳಿಕೆಯ ರೆಕಾರ್ಡಿಂಗ್ ಪ್ಲೇ ಮಾಡಿದರು.

‘ಪಂಡಿತರ ಬಳಿ ಇದ್ದ ಲಾಕರ್ ಕೀ ನಿಮಗೆ ಬೇಕಿತ್ತು.’

‘ಹೌದು. ನನಗೆ ಹಣ ಬೇಕಿತ್ತು.’

‘ಗವಿಸಿದ್ದಪ್ಪನ ಬಳಿ ಯಾಕೆ ವಿಚಾರಿಸಿದ್ದಿರಿ?’

ಮಾಧವ್ ಕ್ಷಣಕಾಲ ಮೌನವಾಗಿದ್ದ.

‘ಪಂಡಿತರು ಲಾಕರ್ ಕೀ ಅಡಗಿಸಿಟ್ಟಿದ್ದಾರೆ ಎಂದು ನನಗೆ ಅನುಮಾನವಿತ್ತು. ಅದಕ್ಕೆ ಗವಿಸಿದ್ದಪ್ಪನನ್ನು ವಿಚಾರಿಸಿದೆ.’

‘ಗಡಿಯಾರದೊಳಗೆ ಪರಿಶೀಲಿಸಲು ಯಾರಿಗಾದರೂ ಹೇಳಿದ್ದೀರಾ?’

ಮಾಧವ್ ಮುಖ ಬದಲಾಯಿತು.

‘ಹೌದು.’

‘ಯಾರಿಗೆ?’

‘ಸುಂದರೇಶನಿಗೆ.’

ಸುನಿಲ್ ಎದ್ದು ನಿಂತ.

‘ಆರ್ಕಿಟೆಕ್ಟ್​ಗೆ?’

‘ಅವನಿಗೆ ಮನೆಯ ವಿನ್ಯಾಸ ಗೊತ್ತು. ಗಡಿಯಾರವನ್ನು ಯಾರು ಅಳವಡಿಸಿದರು ಎಂಬುದೂ ಗೊತ್ತು. ಕೀ ಸಿಗುತ್ತದೆಯೇ ಎಂದು ನೋಡಲು ಹೇಳಿದ್ದೆ.’

‘ಕೊಲೆ ಮಾಡಲು ಹೇಳಿದ್ದಿರಾ?’

ಮಾಧವ್ ತಕ್ಷಣ ತಲೆ ಆಡಿಸಿದ.

‘ಇಲ್ಲ.’

‘ಸುಂದರೇಶನನ್ನು ಕರೆಸಿ.’

ಸುಂದರೇಶ್ ಬಂದ.

‘ಮಾಧವ್ ನಿಮಗೆ ಲಾಕರ್ ಕೀ ಹುಡುಕಿಕೊಡಲು ಹೇಳಿದ್ದರಾ?’

ಸುಂದರೇಶ್ ಮೌನವಾಗಿದ್ದ.

ಮಾಧವ್​ನ ಹೇಳಿಕೆಯ ರೆಕಾರ್ಡಿಂಗ್ ಪ್ಲೇ ಮಾಡಿದರು.

‘ಹೌದು.’

‘ಗಡಿಯಾರವನ್ನು ಯಾಕೆ ಕೆಳಗಿಳಿಸಿದ್ದಿರಿ?’

‘ಪಂಡಿತರು ರಿಪೇರಿ ಮಾಡಿಸಬೇಕೆಂದಿದ್ದರು.’

‘ಗಡಿಯಾರ ಸರಿಯಾಗಿಯೇ ನಡೆಯುತ್ತಿತ್ತು ಎಂದು ಗವಿಸಿದ್ದಪ್ಪ ಹೇಳಿದ್ದಾನೆ.’

ಸುಂದರೇಶ್​ನ ಮುಖ ಬಿಳಿಚಿಕೊಂಡಿತು.

ರಾವ್ ಮುಂದುವರಿಸಿದರು.

‘ಗಡಿಯಾರ ರಿಪೇರಿ ಮಾಡಲು ಜನರೊಡನೆ ಬಂದಿರಿ. ಸರಿಯಾಗಿ ನಡೆಯುತ್ತಿದ್ದ ಗಡಿಯಾರವನ್ನು ರಿಪೇರಿ ಮಾಡಿಸಬೇಕೆಂದಾಗ ನಿಮಗೆ ಅನುಮಾನ ಬಂತು. ನೀವು ಪಂಡಿತರ ಕಣ್ಣು ತಪ್ಪಿಸಿ ಗಡಿಯಾರದ ಹಿಂದೆ, ಒಳಗೆ ಹುಡುಕಿದ್ದೀರಿ. ಆದರೆ ಕೀ ಸಿಗಲಿಲ್ಲ.’

ಸುಂದರೇಶ್ ಬೆವರಿದ.

‘ಆದರೆ ಕೊಲೆಯ ದಿನ ನೀವು ಮತ್ತೆ ಬಂಗಲೆಗೆ ಬಂದಿದ್ದಿರಿ.’

‘ನಾನು ಬಂದಿಲ್ಲ.’

‘ಸಿಸಿಟಿವಿ ಸುಳ್ಳು ಹೇಳುವುದಿಲ್ಲ.’

ರಾವ್ ರೆಕಾರ್ಡಿಂಗ್ ತೋರಿಸಿದರು.

9.45.

ಮುಸುಕುಧಾರಿಯ ನಡೆ.

ದೇಹದಾಕೃತಿ.

ಅವನು ನಡೆಯುವ ರೀತಿ.

ಸುಂದರೇಶ್ ಕಣ್ಣುಗಳನ್ನು ಮುಚ್ಚಿಕೊಂಡ.

‘ಅದು ನೀವೇ. ಕಾರನ್ನು ದೂರದಲ್ಲಿ ನಿಲ್ಲಿಸಿ ನಡೆದು ಬಂದಿರಿ. ನಿಮ್ಮ ಎಡಗಾಲಿನ ಹೆಜ್ಜೆಯಲ್ಲಿ ಸಣ್ಣ ಎಳೆತವಿದೆ. ಬೆಳಗ್ಗೆಯೇ ನಿಮ್ಮ ನಡೆ ಗಮನಿಸಿದ್ದೆ.’

ಯಾವ ಉತ್ತರವೂ ಇಲ್ಲ.

ರಾವ್ ಕೊಲೆಯ ರೆಕಾರ್ಡಿಂಗ್ ಪ್ಲೇ ಮಾಡಿದರು.

ಬಾಗಿಲು ತೆರೆದ ಸದ್ದು. ಹೆಜ್ಜೆಗಳು. ಒಂದು ನಿಮಿಷ.

‘ಕ್ಲಿಪ್!’

ಗುಂಡಿನ ಸದ್ದು.

‘ಕೇಳಿದಿರಾ?’

ಯಾವುದೇ ಮಾತಿಲ್ಲ. ಯಾವುದೇ ವಾಗ್ವಾದವಿಲ್ಲ. ನೀವು ಪಂಡಿತರನ್ನು ಮನವೊಲಿಸಲು ಬಂದಿರಲಿಲ್ಲ. ನಿಮಗೆ ಬೇಕಾಗಿದ್ದು ಲಾಕರ್ ಕೀ.

ಸುಂದರೇಶ್ ತಲೆ ತಗ್ಗಿಸಿದ.

‘ಪಂಡಿತರು ಕೀ ಕೊಡುವುದಿಲ್ಲ ಎಂದು ನಿಮಗೆ ಗೊತ್ತಿತ್ತು. ಅವರನ್ನು ಕೊಂದು ಗಡಿಯಾರದ ಬಳಿ ಹೋದಿರಿ.’

ರಾವ್ ಗೋಡೆಯ ಮೇಲಿನ ಗುರುತನ್ನು ತೋರಿಸಿದರು.

‘ಗಡಿಯಾರವನ್ನು ಕೆಳಗಿಳಿಸಿ ಹುಡುಕಿದಿರಿ. ಕೀ ಸಿಕ್ಕಿತು. ಮತ್ತೆ ಗಡಿಯಾರವನ್ನು ಹಾಕಿದಿರಿ. ಆದರೆ ಮೊದಲಿದ್ದ ಜಾಗಕ್ಕಿಂತ ಕೊಂಚ ಬದಿಗೆ ಸರಿಸಿ ಹಾಕಿದಿರಿ.’

ಸುಂದರೇಶ್ ಮೌನ.

‘ಅದು ನಿಮ್ಮ ಮೊದಲ ತಪ್ಪು.’

ರಾವ್ ಕೆಲವು ಕ್ಷಣ ಮೌನವಾಗಿದ್ದರು. ‘ಆದರೆ... ಅದು ನಿಮ್ಮ ದೊಡ್ಡ ತಪ್ಪಲ್ಲ.’

ಅವರು ಗಡಿಯಾರದತ್ತ ನೋಡಿದರು.

‘ನಿಮ್ಮ ಎರಡನೆಯ ತಪ್ಪು ಹತ್ತು ಗಂಟೆಗೆ ನಡೆದಿದೆ.’

ಮೌನ.

‘ಗಡಿಯಾರವನ್ನು ಕೆಳಗಿಳಿಸಿದಾಗ ಸಮಯ ಸುಮಾರು ಒಂಬತ್ತು ಐವತೆôದು. ಕೀ ಹುಡುಕುವಷ್ಟರಲ್ಲಿ ಹತ್ತು ಗಂಟೆ ದಾಟಿತ್ತು. ಗಡಿಯಾರವನ್ನು ಕೆಳಗಿಳಿಸುವಾಗ ಅದರ ಟೈಮ್ ವ್ಯವಸ್ಥೆ ಕದಲಿದೆ. ಅದಕ್ಕೇ ಹತ್ತು ಗಂಟೆಯ ನಾದ ತಪ್ಪಿಹೋಗಿದೆ.’

ಸುಂದರೇಶ್ ನಿಧಾನವಾಗಿ ತಲೆ ಎತ್ತಿದ.

‘ನೀವು ಕೀ ಸಿಕ್ಕಿತೇ ಎಂಬುದರಲ್ಲೇ ಮುಳುಗಿದ್ದಿರಿ. ಹತ್ತು ಗಂಟೆ ಐದು ನಿಮಿಷಕ್ಕೆ ಗಡಿಯಾರವನ್ನು ಮತ್ತೆ ಗೋಡೆಗೆ ಏರಿಸಿ, ಅದರ ಸಮಯವನ್ನು ಸರಿಪಡಿಸಿ ಹೊರಟಿರಿ. ಆದರೆ ಹತ್ತು ಗಂಟೆಯ ಚೈಮ್ ಆಗಲೇ ತಪ್ಪಿಹೋಗಿತ್ತು. ಆ ಸಣ್ಣ ದೋಷವನ್ನು ನೀವು ಗಮನಿಸಲಿಲ್ಲ ಅಥವಾ ಇಷ್ಟು ಚಿಕ್ಕ ವಿಷಯ ಯಾರೂ ಗಮನಿಸುವುದಿಲ್ಲ ಎಂದುಕೊಂಡಿರಿ.’

ಸುನಿಲ್​ನ ಮುಖದಲ್ಲಿ ಆಶ್ಚರ್ಯ.

‘ಅಂದರೆ... ನಮಗೆ ಕೇಳಿಸದ ಬೆಲ್...’

‘ಹೌದು. ಅದು ಈ ಪ್ರಕರಣದ ಅತ್ಯಂತ ದೊಡ್ಡ ಸಾಕ್ಷಿ.’

ಸುಂದರೇಶ್ ಮುಖ ಮುಚ್ಚಿಕೊಂಡ.

‘ನಿಮಗೆ ಈ ಅನುಮಾನ ಬರಲು ಕಾರಣ ಇಪ್ಪತ್ತು ದಿನಗಳ ಹಿಂದೆ ಪಂಡಿತರೊಡನೆ ಮಾಧವ ಮಾತಾಡಿದ ರೆಕಾರ್ಡ್. ಮಾಧವ್ ನನಗೆ ಕೀ ಹುಡುಕಲು ಮಾತ್ರ ಹೇಳಿದ್ದ. ಈ ಮಾತುಕತೆಯ ವಿಷಯ ನನಗೆ ಗೊತ್ತಿರಲಿಲ್ಲ. ಗೊತ್ತಿದ್ದಿದ್ದರೆ...’

‘ಗೊತ್ತಿದ್ದರೆ ರೆಕಾರ್ಡಿಂಗ್ ನಾಶಪಡಿಸುತ್ತಿದ್ದಿರಿ. ಅಲ್ಲವೇ?’

ರಾವ್ ಅವನ ಮಾತನ್ನು ಪೂರ್ಣಗೊಳಿಸಿದರು.

‘ಗೋಡೆಯ ಮೇಲಿನ ಗುರುತು ಮಾತ್ರ ನಿಮ್ಮನ್ನು ಹಿಡಿಯುತ್ತಿರಲಿಲ್ಲ. ಅದು ಕಣ್ಣಿಗೆ ಕಾಣುವ ಸಾಕ್ಷಿ. ಆದರೆ ಹತ್ತು ಗಂಟೆಯ ಮೌನವೇ ನೀವು ಆ ಗಡಿಯಾರವನ್ನು ಕೊಲೆಯ ನಂತರ ಮುಟ್ಟಿದ್ದೀರಿ ಎಂಬುದಕ್ಕೆ ಸಮಯದ ಸಾಕ್ಷಿ.’

ಅಷ್ಟರಲ್ಲಿ ಸುನಿಲ್ ಹೊರಗೆ ಹೋಗಿ ಕೆಲ ನಿಮಿಷಗಳ ನಂತರ ಮರಳಿದ. ಅವನ ಕೈಯಲ್ಲಿ ಒಂದು ಚೀಲ.

‘ಸರ್... ಸುಂದರೇಶನ ಕಾರಿನಲ್ಲಿ ಸಿಕ್ಕಿತು.’

ರಾವ್ ಚೀಲದಿಂದ ಹೊರತೆಗೆದದ್ದು ಒಂದು ಗನ್.

‘ಚೆನ್ನಾಗಿ ನೋಡಿ, ಸುಂದರೇಶ್.’

ಸುಂದರೇಶ್ ಕಣ್ಣುಗಳು ಗನ್ ಮೇಲೆ ನೆಟ್ಟವು.

‘ಇದು ನಿಮ್ಮದೇ ಅಲ್ಲವೇ?’

ಅವನ ಮುಖ ಬಿಳಿಚಿಕೊಂಡಿತು.

‘ಇದು ಕೊಲೆಗೆ ಬಳಸಿದ ಆಯುಧವಾಗಿರಬಹುದು. ಬ್ಯಾಲಿಸ್ಟಿಕ್ ಪರೀಕ್ಷೆ ಅದನ್ನು ದೃಢಪಡಿಸುತ್ತದೆ.’

ಸುಂದರೇಶ್ ತಲೆ ತಗ್ಗಿಸಿದ.

‘ಮಿಕ್ಕ ಸಾಕ್ಷಿಗಳನ್ನು ಹುಡುಕಲು ನಮಗೆ ಹೆಚ್ಚು ಸಮಯ ಬೇಕಾಗುವುದಿಲ್ಲ.’

ಮಾಧವ್​ನತ್ತ ನೋಡಿದರು. ‘ಮಾಧವ್, ಈ ಪ್ರಕರಣದಲ್ಲಿ ನಿಮ್ಮದೂ ಪಾತ್ರವಿದೆ.’

ಮಾಧವ್ ಏನೋ ಹೇಳಲು ಯತ್ನಿಸಿದ.

‘ನೀವು ಕೊಲೆ ಮಾಡಿಲ್ಲ,’ ಎಂದರು ರಾವ್. ‘ಆದರೆ ಕೊಲೆಯಾಗುವ ಪರಿಸ್ಥಿತಿಯನ್ನು ಸೃಷ್ಟಿಸಿದ್ದೀರಿ. ಹಣಕ್ಕಾಗಿ ಕೀ ಹುಡುಕಲು ಮನುಷ್ಯನನ್ನು ನೇಮಿಸಿದ್ದೀರಿ. ಅವನು ಕೊಲೆ ಮಾಡುವ ಸಾಧ್ಯತೆಯನ್ನು ನಿರ್ಲಕ್ಷಿಸಿದ್ದಕ್ಕಾಗಿ ನೀವು ಉತ್ತರಿಸಬೇಕಾಗುತ್ತದೆ. ಲಾಕರ್ ಕೀ ಎಲ್ಲಿದೆ?’

ಮಾಧವ್ ಕ್ಷಣಕಾಲ ರಾವ್​ರನ್ನು ನೋಡಿದ.

‘ನನ್ನ ಹತ್ತಿರ.’

‘ಅದನ್ನು ನಮಗೆ ಒಪ್ಪಿಸಿ.’

ನಡುಗುವ ಕೈಗಳಿಂದ ಮಾಧವ್ ಲಾಕರ್ ಕೀಯನ್ನು ಮೇಜಿನ ಮೇಲಿಟ್ಟ. ಇಬ್ಬರನ್ನೂ ಬಂಧಿಸಿದರು.

ಸುನಿಲ್​ಗೆ ಸಂತೋಷ ತಡೆಯಲಾಗಲಿಲ್ಲ.

‘ಸರ್...’

‘ಹೇಳಿ.’

‘ಕೊಲೆಯಾದ ದಿನ ಕೇಳಿದ ಗುಂಡಿನ ಸದ್ದು ಕೇಸ್​ಗೆ ತಿರುವು ಅಲ್ವಾ?’

ರಾವ್ ಗಡಿಯಾರದತ್ತ ನೋಡಿದರು.

‘ಇಲ್ಲ.’

‘ಹಾಗಾದರೆ?’

‘ಗುಂಡಿನ ಸದ್ದು ಕೊಲೆ ನಡೆದಿದೆ ಎಂದು ಹೇಳಿತು.’

ಗೋಡೆಯ ಮೇಲಿನ ಸಣ್ಣ ಗುರುತನ್ನು ತೋರಿಸಿದರು.

‘ಆ ಗುರುತು ಕೊಲೆಗಾರ ಗಡಿಯಾರವನ್ನು ಮುಟ್ಟಿದ್ದಾನೆ ಎಂದು ಹೇಳಿತು.’

ಗಡಿಯಾರದತ್ತ ನೋಡಿದರು.

‘ಆದರೆ ಹತ್ತು ಗಂಟೆಗೆ ಕೇಳಿಸದ ಬೆಲ್...’

ರಾವ್ ಮೆಲ್ಲನೆ ನಕ್ಕರು.

‘ಅದು ಕೊಲೆಗಾರ ಯಾವಾಗ ಸುಳ್ಳು ಹೇಳುತ್ತಿದ್ದಾನೆ ಎಂದು ಹೇಳಿತು.’

ರಾತ್ರಿ ಗಾಢವಾಗಿತ್ತು.

ಗೋಡೆಯ ಗಡಿಯಾರ ಹತ್ತು ಗಂಟೆ ತೋರಿಸಿತು.

ಈ ಬಾರಿ ಗಡಿಯಾರದ ಬೆಲ್ ಸ್ಪಷ್ಟವಾಗಿ ಹತ್ತು ಬಾರಿ ಮೊಳಗಿತು.

ಟಣ್... ಟಣ್...