ವಿಜಯವಾಣಿ ದೀಪಾವಳಿ ಕಥಾ ಸ್ಪರ್ಧೆ: ತೃತೀಯ ಬಹುಮಾನ ಪಡೆದ 'ಸತ್ತವನ ಬೆನ್ನು ಹತ್ತಿ​' ಕಥೆ!  
ದೀಪಾವಳಿ ವಿಶೇಷ

ವಿಜಯವಾಣಿ ದೀಪಾವಳಿ ಕಥಾ ಸ್ಪರ್ಧೆ: ತೃತೀಯ ಬಹುಮಾನ ಪಡೆದ 'ಸತ್ತವನ ಬೆನ್ನು ಹತ್ತಿ​' ಕಥೆ! Vijayavani Deepavali Story Contest

ಇನ್ಸ್ಪೆಕ್ಟರ್ ರವಿನಾರಾಯಣ್​ಗೆ ಆ ಬೆಳಗಿನ ಜಾವ ಇದ್ದಕ್ಕಿದ್ದ ಹಾಗೆ ಎಚ್ಚರವಾಯಿತು. ಎಲ್ಲೋ ನೋಡಿದಂತಿರುವ, ಯಾವುದೋ ಅಸ್ಪಷ್ಟ ಮುಖವೊಂದು ಕಣ್ಣೆದುರು ಬಂದಂತಾಗಿ, ಯಾವುದೋ ಹಳೆಯ ದೃಶ್ಯವೊಂದು ತಲೆಯ ಒಳಗೇ ರಿವೈಂಡ್ ಆದಂತಾಗಿ ತಕ್ಷಣ ಎದ್ದು ಕೂತರು. ಅವರಿಗೆ ಈ ರೀತಿ ಯಾವತ್ತೂ ಆಗಿರಲಿಲ್ಲ. ತಮ್ಮ ಕಣ್ಣು ತಮಗೆ ಮೋಸ ಮಾಡಲು ಸಾಧ್ಯವೇ ಇಲ್ಲ ಎಂಬ ವಿಶ್ವಾಸ ಅವರಿಗೆ. ಇಷ್ಟು ವರ್ಷದ ತಮ್ಮ ವೃತ್ತಿ ಬದುಕಿನಲ್ಲಿ ಒಮ್ಮೆ ಒಬ್ಬ ವ್ಯಕ್ತಿಯನ್ನು ಹತ್ತಿರದಿಂದ ನೋಡಿದರೆ, ಆತನೊಂದಿಗೆ ಮಾತನಾಡಿದರೆ ಆತನ ಧ್ವನಿ, ಮುಖಚರ್ಯು ಎಲ್ಲ ಅವರ ಮಿದುಳಿನ ಮಡಿಕೆಗಳಲ್ಲಿ ಅಚ್ಚೊತ್ತಿದಂತೆ ಕೂತುಬಿಡುತ್ತಿತ್ತು.

ನಿನ್ನೆ ಸಂಜೆ ಆದದ್ದೂ ಅದೇ... ತ್ಯಾಪೇರ ಗಲ್ಲಿಯ ಬೀಡಾ ಅಂಗಡಿಯಲ್ಲಿ ಆ ವ್ಯಕ್ತಿಯನ್ನು ನೋಡಿ, ಆತನೊಂದಿಗೆ ಮಾತನಾಡಿದ ಮೇಲೆ ಆ ಮುಖವನ್ನು ಎಲ್ಲೋ ನೋಡಿದ್ದೇನೆ, ಆ ಧ್ವನಿಯನ್ನು ಎಲ್ಲೋ ಕೇಳಿದ್ದೇನೆ ಎಂದು ರವಿನಾರಾಯಣ್​ಗೆ ಅನ್ನಿಸತೊಡಗಿತ್ತು. ಆ ಕ್ಷಣದಿಂದ ಬಿಟ್ಟೂ ಬಿಡದೇ ಕೊರೆಯಲಾರಂಭಿಸಿದ್ದ ಅನುಮಾನದ ಆ ಗುಂಗಿ ಹುಳ, ಈಗ ಈ ನಸುಕಿನಲ್ಲಿ ಸ್ಪಷ್ಟವಾಗಿ ರೆಕ್ಕೆ ಬಿಚ್ಚಿ ಹಾರಾಡಲಾರಂಭಿಸಿತ್ತು.

ಅದು ನಿಜಕ್ಕೂ ಅವನೇನಾ? ಅದ್ಹೇಗೆ ಸಾಧ್ಯ? ಆತ ಸತ್ತು ನಾಲ್ಕು ವರ್ಷಗಳೇ ಆದವಲ್ಲ? ತಮ್ಮ ಅನುಮಾನ ಒಂದು ವೇಳೆ ಸುಳ್ಳಾದರೆ? ಸುಳ್ಳಾದರೆ ಆಗುವ ನಷ್ಟವಾದರೂ ಏನು? ಹೇಗಿದ್ದರೂ ಅನುಮಾನ ಎಂಬುದು ಪೊಲೀಸರ ಮನೆ ದೇವರಲ್ಲವೇ ಎಂದು ಸಮಾಧಾನಪಟ್ಟುಕೊಂಡು ಮತ್ತೆ ಹಾಸಿಗೆ ಮೇಲುರುಳಿ ಮಗ್ಗುಲಾದರು.

ಕಾರ್ಕಳದಲ್ಲಿ ಎರಡು ವರ್ಷ ಸಬ್ ಇನ್ಸ್ಪೆಕ್ಟರ್ ಆಗಿದ್ದ ರವಿನಾರಾಯಣ್ ವರ್ಗಾವಣೆಯ ಕಾರಣಕ್ಕೆ ಹಲವು ಊರುಗಳಲ್ಲಿ ಕಾರ್ಯ ನಿರ್ವಹಿಸಿ, ಇನ್ಸ್ಪೆಕ್ಟರ್ ಆಗಿ ಬಡ್ತಿ ಹೊಂದಿ ದಾವಣಗೆರೆಯ ಇಂಟೆಲಿಜೆನ್ಸ್ ವಿಭಾಗಕ್ಕೆ ಬಂದವರು. ಅವರಿಗೆ ಕಾರ್ಕಳದಲ್ಲಿ ಸದಾನಂದ ಎಂಬ ವ್ಯಕ್ತಿ ತನ್ನದೇ ಮಾರುತಿ ವ್ಯಾನ್ ಒಳಗಡೆ ಸುಟ್ಟು ಭಸ್ಮವಾಗಿದ್ದ ಘಟನೆ ತಮ್ಮ ವೃತ್ತಿ ಜೀವನದಲ್ಲೇ ಮರೆಯಲಾಗದಂಥದ್ದು.

ಕಾರಿನ ಮುಂಭಾಗದ ಸೀಟ್​ನಲ್ಲಿ ತಲೆ ತಗ್ಗಿಸಿ ಕೂತ ಭಂಗಿಯಲ್ಲೇ ಆತನ ದೇಹ ಸುಟ್ಟು ಕರಕಲಾಗಿತ್ತು! ಪೋಸ್ಟ್ಮಾರ್ಟಂಗೆ ಶವ ಎತ್ತಲೂ ಸಾಧ್ಯವಾಗದ ಪರಿಸ್ಥಿತಿ. ಅದನ್ನು ಮುಟ್ಟುತ್ತಿದ್ದಂತೆ ಕುಸಿವ ಮರಳ ಗುಡ್ಡೆಯಂತೆ ದೇಹದ ಬೂದಿ ಮತ್ತು ಮೂಳೆಗಳು ಒಟ್ಟಿಗೇ ಕೆಳಕ್ಕೆ ಕುಸಿದು ಬಿದ್ದಿದ್ದವು.

ಆ ಏರಿಯಾ ಸಬ್ ಇನ್ಸ್ಪೆಕ್ಟರ್ ಆಗಿದ್ದ ರವಿನಾರಾಯಣ್ ತಾವೇ ಖುದ್ದು ನಿಂತು ಪೋಸ್ಟ್ಮಾರ್ಟಂ ಮಾಡಿಸಿದ್ದರು. ಅದೊಂದು ಆತ್ಮಹತ್ಯೆ ಪ್ರಕರಣ ಎಂದು ಎಫ್ಐಆರ್ ದಾಖಲಿಸಿ ಕುಟುಂಬಸ್ಥರಿಗೆ ಬೂದಿ ಮತ್ತು ಮೂಳೆ ತುಂಬಿದ ಚೀಲವನ್ನು ಹಸ್ತಾಂತರಿಸಿದ್ದರು.

ಹಾಗೆ ಕಾರ್ಕಳದಲ್ಲಿ ಆತ್ಮಹತ್ಯೆ ಮಾಡಿಕೊಂಡವನು ದಾವಣಗೆರೆಯಲ್ಲಿ ಪ್ರತ್ಯಕ್ಷನಾಗಲು ಹೇಗೆ ಸಾಧ್ಯ? ಅದೂ ನಾಲ್ಕು ವರ್ಷಗಳ ನಂತರ? ತಮಗೇಕೆ ಆ ಬೀಡಾ ಅಂಗಡಿಯವನನ್ನು ನೋಡಿದ ಕೂಡಲೇ ಅವನು ಸದಾನಂದನೇ ಎಂಬ ಅನುಮಾನ ಬಂತು? ಗೊತ್ತಿಲ್ಲ, ಒಮ್ಮೆ ಅನುಮಾನ ಬಂದ ಮೇಲೆ ಅದು ಬಗೆಹರಿಯಲೇಬೇಕು. ಅದು ಅವರ ಜಾಯಮಾನ.

ಕಾರ್ಕಳದಲ್ಲಿ ಚಿಟ್ಫಂಡ್ ವ್ಯವಹಾರ ನಡೆಸುತ್ತಿದ್ದ ಸದಾನಂದ ಕೋಟಿಗಟ್ಟಲೆ ಸಾಲ ಮಾಡಿಕೊಂಡಿದ್ದ. ಸಾಕಷ್ಟು ನಷ್ಟ ಅನುಭವಿಸಿ ಚೀಟಿ ಕಟ್ಟಿದವರಿಗೆ, ಸಾಲಗಾರರಿಗೆ ಹಣ ಕೊಡಲಾಗದೆ ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದ. ಕೊನೆಗೊಮ್ಮೆ ಬೇಸತ್ತು ತನ್ನದೇ ಮಾರುತಿ ವ್ಯಾನ್​ನಲ್ಲಿ ಕೂತು ಪೆಟ್ರೋಲ್ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಸಾಲಗಾರರ ಹಿಂಸೆ ತಾಳಲಾರದೆ ಹಲವಾರು ಸಲ ತಾವಿದ್ದ ಪೊಲೀಸ್ ಠಾಣೆಗೆ ಬಂದಿದ್ದ ಸದಾನಂದನಿಗೆ ರವಿನಾರಾಯಣ್ ಧೈರ್ಯ ಹೇಳಿ ಕಳಿಸುತ್ತಿದ್ದರು. ಸ್ಪಲ್ಪ ಸ್ಪಲ್ಪವಾದರೂ ಹಣ ಕೊಟ್ಟು ಋಣಮುಕ್ತನಾಗು ಎಂದು ಬುದ್ಧಿವಾದ ಹೇಳುತ್ತಿದ್ದರು. ಸದಾನಂದನದು ಒಂದು ರೀತಿಯ ಗೊಗ್ಗರು ಧ್ವನಿ, ಮಾತು ತಕ್ಷಣಕ್ಕೆ ಅರ್ಥವಾಗುತ್ತಿರಲಿಲ್ಲ. ನಡೆಯುವಾಗ ಒಂದು ಕಾಲು ಎಳೆದು ಹಾಕುತ್ತಿದ್ದ.

ನಿನ್ನೆ ಸಂಜೆ ಬೀಡಾ ಅಂಗಡಿಯಲ್ಲಿ ರವಿನಾರಾಯಣ್ ಕಿವಿಗೆ ಬಿದ್ದದ್ದು, ಒಂದು ಕ್ಷಣ ಅವರನ್ನು ವಿಚಲಿತರನ್ನಾಗಿಸಿದ್ದು ಅದೇ ಗೊಗ್ಗರು ಧ್ವನಿ! ನೋಡಲು ಆ ವ್ಯಕ್ತಿ ಸದಾನಂದನನ್ನು ಹೋಲುತ್ತಿರಲಿಲ್ಲ. ದಪ್ಪ, ಎತ್ತರ ಅವನದೇ ಆದರೂ ಗಡ್ಡ ಬಿಟ್ಟಿದ್ದ, ಕನ್ನಡಕ ಹಾಕಿದ್ದ, ತಲೆಗೆ ಟವೆಲ್ ಸುತ್ತಿಕೊಂಡಿದ್ದ. ಬಾಯಲ್ಲಿ ಜರ್ದಾ ಬೇರೆ. ಅವನ ಧ್ವನಿ ಮತ್ತು ಅರ್ಥವಾಗದ ಮಾತು ರವಿನಾರಾಯಣ್​ಗೆ ಮತ್ತೆ ಕಾರ್ಕಳವನ್ನು ನೆನಪು ಮಾಡಿಕೊಳ್ಳುವಂತೆ ಮಾಡಿತ್ತು!

ಏನಕ್ಕೂ ನಾಳೆ ಇನ್ನೊಮ್ಮೆ ಆತನ ಬೀಡಾ ಅಂಗಡಿಗೆ ಹೋಗುವುದು, ಆತನ ಜೊತೆ ಮಾತನಾಡುತ್ತ ಸೂಕ್ಷ್ಮವಾಗಿ ಎಲ್ಲವನ್ನೂ ಗಮನಿಸುವುದು. ಅದಕ್ಕೂ ಮೊದಲು ಈ ವಿಚಾರದ ಬಗ್ಗೆ ದಾವಣಗೆರೆಯ ಬಸವನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಲೋಕ್ ಕುಮಾರ್ ಜೊತೆ ಚರ್ಚಿಸುವುದು ಎಂದು ರವಿನಾರಾಯಣ್ ನಿರ್ಧರಿಸಿದರು.

***

ಮರುದಿನ ಬಸವನಗರ ಠಾಣೆಗೆ ಹೋದಾಗ ಇನ್ಸ್ಪೆಕ್ಟರ್ ಅಲೋಕ್ ‘ಬಾರಯ್ಯ ರವಿ’ ಎಂದು ಸ್ವಾಗತಿಸಿದರು. ಕಾಫಿ ಬರುವುದರೊಳಗೆ ರವಿನಾರಾಯಣ್ ಅಲೋಕ್ ಕುಮಾರ್​ಗೆ ಕಾರ್ಕಳದಲ್ಲಿದ್ದಾಗ ನಡೆದ ಆತ್ಮಹತ್ಯೆ ಘಟನೆ ಹಾಗೂ ಈಗ ಉದ್ಭವಿಸಿರುವ ಬೀಡಾ ಅಂಗಡಿ ವ್ಯಕ್ತಿಯ ಬಗೆಗಿನ ಅನುಮಾನವನ್ನೆಲ್ಲ ವಿವರಿಸಿದರು. ಒಮ್ಮೆ ಕ್ರಾಸ್ ಚೆಕ್ ಮಾಡೋದ್ರಲ್ಲಿ ತಪ್ಪೇನಿದೆ ಎಂದೂ ಸಮರ್ಥಿಸಿಕೊಂಡರು.

‘ಬಿಡು ರವಿ, ಎಲ್ಲ ಯಾಕೆ ಮೈಮೇಲೆ ಎಳ್ಕಂತಿ.. ಮೊದ್ಲೇ ನಿನ್ನ ಜುರಿಸ್ಡಿಕ್ಷನ್ ಅಲ್ಲ. ಮೇಲಾಗಿ ಸತ್ತೋನು ಮತ್ತೆ ಬದುಕಿ ಬರೋಕೆ ಹೇಗೆ ಸಾಧ್ಯ? ನೀನು ಕನ್ಫ್ಯೂಸ್ ಮಾಡ್ಕಂಡಿದಿ’ ಎಂದು ನಕ್ಕರು ಅಲೋಕ್​ ಕುಮಾರ್. ‘ಇಲ್ಲ ಅಲೋಕ್, ಏನೋ ಫಿಶಿ ಅನ್ನಿಸ್ತಿದೆ. ನೋಡೋಣ, ನಾನೇ ಸೂಕ್ಷ್ಮವಾಗಿ ಮೂವ್ ಮಾಡ್ತೀನಿ. ಬಟ್ ನಂಗೆ ನಿಮ್ ಕೋಆಪರೇಷನ್ ಬೇಕು..’ ಎಂದರು.

‘ಓ ಶ್ಯೂರ್, ನಡೀಲಿ ನಿಮ್ಮ ಪುರುಷೋತ್ತಮನ ಪತ್ತೇದಾರಿಕೆ..’ ರವಿನಾರಾಯಣ್ರ ಕೈ ಕುಲುಕಿ ಬೀಳ್ಕೊಟ್ಟರು ಅಲೋಕ್.

ಅಲೋಕ್ ಕಚೇರಿಯಿಂದ ಹೊರಬಂದ ರವಿನಾರಾಯಣ್ ನೇರ ತ್ಯಾಪೇರಗಲ್ಲಿ ಕಡೆಗೆ ಜೀಪ್ ತಿರುಗಿಸಿದರು. ಸ್ಪಲ್ಪ ದೂರದಲ್ಲೇ ಜೀಪ್ ನಿಲ್ಲಿಸಿ ನಡೆದುಕೊಂಡೇ ನಿನ್ನೆ ಹೋಗಿದ್ದ ಬೀಡಾ ಅಂಗಡಿ ಬಳಿಗೆ ಬಂದರು. ಆಶ್ಚರ್ಯ! ಅಂಗಡಿಯಲ್ಲಿ ನಿನ್ನೆ ಕಂಡ ಆ ವ್ಯಕ್ತಿ ಇರಲಿಲ್ಲ. ಬದಲಿಗೆ ಬೇರೊಬ್ಬ ವ್ಯಕ್ತಿ ಗ್ರಾಹಕರಿಗೆ ಬೀಡಾ ಕಟ್ಟಿ ಕೊಡುತ್ತಿದ್ದ.

‘ಒಂದು ಸ್ವೀಟ್ ಬೀಡಾ’ ಎಂದು ಆರ್ಡರ್ ಮಾಡಿದ ರವಿನಾರಾಯಣ್, ಆತನನ್ನು ಸಹಜವಾಗೇ ಎಂಬಂತೆ ‘ನಿನ್ನೆ ಇದ್ದರಲ್ಲ, ಅವರೆಲ್ಲಿ?’ ಎಂದು ವಿಚಾರಿಸಿದರು. ‘ಉಮೇಶಣ್ಣನಾ ಸಾ? ಊರಿಗೆ ಹೋಗಿದ್ದಾರೆ’ ಎಂದ ಆತ.

ಉಮೇಶಣ್ಣ? ಹೆಸರು ಬೇರೆ ಬದಲಿಸಿಕೊಂಡಿದ್ದಾನಾ ಎಂದು ಅಂದುಕೊಂಡು ‘ಯಾವ ಊರು?’ ಕೇಳಿದರು. ‘ಕಾಸರಗೋಡು ಹತ್ರ ಯಾವುದೋ ಹಳ್ಳಿ ಸಾ, ನಂಗೊತ್ತಿಲ್ಲ’ ಎಂದ ಅಂಗಡಿಯಲ್ಲಿದ್ದವ. ಬೀಡಾದೊಂದಿಗೆ ಜೀಪ್ ಬಳಿಗೆ ಬಂದ ರವಿನಾರಾಯಣ್​ಗೆ ಸದಾನಂದನ ಮೇಲಿದ್ದ ಅನುಮಾನ ಮತ್ತಷ್ಟು ಬಲವಾಯಿತು. ಮೊನ್ನೆ ಆತನನ್ನು ಗುರುತಿಸಲು ತಮಗೆ ಸಾಧ್ಯವಾಗದಿದ್ದರೂ ಅವನಿಗೆ ತಮ್ಮ ಗುರುತು ಸಿಕ್ಕೇ ಸಿಕ್ಕಿರುತ್ತದೆ. ಅದಕ್ಕೇ ಇವತ್ತು ತಪ್ಪಿಸಿಕೊಂಡಿದ್ದಾನೆ ಎಂದುಕೊಂಡು ಜೀಪ್ ಹತ್ತಿದರು.

ಅಲ್ಲಿಂದ ತಮ್ಮ ಕಚೇರಿಗೆ ಬಂದವರೇ ತಮ್ಮ ಶಿಷ್ಯ ಕಾನ್ಸ್ಟೆಬಲ್ ಜಗದೀಶನನ್ನು ಕರೆದು ಸದರಿ ಬೀಡಾ ಅಂಗಡಿಯ ಮೇಲೊಂದು ಕಣ್ಣಿಡಲು ಹೇಳಿದರು. ಉಮೇಶ ಎಂಬ ವ್ಯಕ್ತಿ ಅಂಗಡಿಯಲ್ಲಿ ಇರುವುದು ಕಂಡರೆ ತಕ್ಷಣ ತಮಗೆ ತಿಳಿಸಲು ಸೂಚಿಸಿದರು.

‘ಯಾಕ್ಸಾ, ಅವನೇನಾದ್ರು ದುಡ್ಡು ಕೊಡ್ಬೇಕಿತ್ತಾ? ಇದ್ರೆ ಹೇಳಿ, ಒದ್ದು ವಸೂಲ್ ಮಾಡ್ಕಂಡ್ ಬರ್ತೀನಿ’ ಎಂದ ಜಗದೀಶ. ‘ಅದೆಲ್ಲ ಆಮೇಲೆ ಹೇಳ್ತೀನಿ, ಈಗ ನಾನೇಳಿದ್ದು ಮಾಡು’ ಎಂದರು ರವಿನಾರಾಯಣ್.

***

ವಾರ, ಹದಿನೈದು ದಿನ ಕಳೆದರೂ ಕಾನ್ಸ್ಟೆಬಲ್ ಜಗದೀಶ್ ಯಾವುದೇ ಮಾಹಿತಿ ತರಲಿಲ್ಲ. ರವಿನಾರಾಯಣ್​ಗೆ ತಮ್ಮ ಕಚೇರಿ ಕಾರ್ಯ ಒತ್ತಡಗಳಿಂದಾಗಿ ಅತ್ತ ಕಡೆ ಗಮನ ಕೊಡಲೂ ಆಗಲಿಲ್ಲ. ಆದರೆ ತಾವು ಮಾಡಲೇಬೇಕಾದ ಪತ್ತೆದಾರಿಕೆ ಕೆಲಸವನ್ನು ತಮ್ಮದೇ ನೆಟ್ವರ್ಕ್​ಲ್ಲಿ ಆರಂಭಿಸಿದ್ದರು. ತ್ಯಾಪೇರಗಲ್ಲಿ ಕಡೆ ಹೋದಾಗಲೆಲ್ಲ ಅವರ ಕಣ್ಣು ಬೀಡಾ ಅಂಗಡಿ ಕಡೆ ತಾನಾಗಿಯೇ ಹೋಗುತ್ತಿತ್ತು. ಇತ್ತೀಚೆಗೆ ಅವರು ನೋಡಿದಾಗಲೆಲ್ಲ ಅಂಗಡಿ ಬಹುತೇಕ ಮುಚ್ಚಿಯೇ ಇರುತ್ತಿತ್ತು. ಒಮ್ಮೊಮ್ಮೆ ತೆರೆದಿದ್ದರೆ ಉಮೇಶನ ಸಹಾಯಕ ಕೂತಿರುವುದು ಕಾಣಿಸುತ್ತಿತ್ತು. ಇಷ್ಟು ದಿನವಾಯ್ತು, ಸದಾನಂದನೆಲ್ಲಿ ನಾಪತ್ತೆಯಾದ?

ಎರಡು ದಿನ ಕಳೆಯುವಷ್ಟರಲ್ಲಿ ಕಾನ್ಸ್​ಟೆಬಲ್ ಜಗದೀಶ್ ಮಾಹಿತಿಯೊಂದನ್ನು ತಂದ. ‘ಸರ್, ಆ ಉಮೇಶ ಮೊನ್ನೆ ರಾತ್ರಿ ಬಂದಿದ್ದನಂತೆ, ಅಂಗಡಿಯಲ್ಲಿದ್ದ ಎಲ್ಲ ಹಣ ತೆಗೆದುಕೊಂಡು ಮತ್ತೆ ಊರಿಗೆ ಹೋದನಂತೆ, ಅಂಗಡಿ ಕೆಲಸಗಾರ ಸುರೇಶ್ನನ್ನು ವಿಚಾರಿಸಿದೆ. ಅವನಿಗೆ ಹೆಂಡತಿ-ಮಕ್ಕಳು ಯಾರೂ ಇಲ್ಲವಂತೆ. ಅವನ ಊರು ಕಾಸರಗೋಡು ಹತ್ತಿರ ಹಳ್ಳಿಯಂತೆ. ಅವನ ತಂದೆಗೆ ಹುಷಾರಿಲ್ಲ ಅಂತ ಹೋಗಿದ್ದಾನಂತೆ. ಮತ್ತೆ ಯಾವಾಗ ಬರುತ್ತಾನೋ ಗೊತ್ತಿಲ್ಲವಂತೆ..’ ಜಗದೀಶ್ ವರದಿ ಒಪ್ಪಿಸಿದ.

ಅವನು ಮತ್ತೆ ಬರೋದು ಅನುಮಾನ ಎಂದು ಒಳಗೇ ನಕ್ಕ ರವಿನಾರಾಯಣ್ ‘ನೀನು ಪೊಲೀಸ್ನವನು ಎಂದು ಅಂಗಡಿ ಕೆಲಸಗಾರನಿಗೆ ಹೇಳಿದೆಯಾ?’ ಎಂದು ಕೇಳಿದರು.

‘ಇಲ್ಲ ಸಾ, ಸಿವಿಲ್ ಡ್ರೆಸ್ನಲ್ಲಿ ಹೋಗಿದ್ದೆ. ಜನಗಣತಿ ಮಾಹಿತಿಗೆ ಉಮೇಶ್ ಅವರ ಆಧಾರ್ ಕಾರ್ಡ್ ಕೊಡಿ ಎಂದೆ. ಅವನು ಇಲ್ಲ ಅಂದ, ಯಾವ ಅನುಮಾನವೂ ಬರಲಿಲ್ಲ’ ಎಂದ ಜಗದೀಶ.

‘ಗುಡ್... ಅವನ ಮೊಬೈಲ್ ನಂಬರ್ ತಗೋಬೇಕಿತ್ತು...’

‘ತಗೊಂಡೆ ಸಾ, ಅದು ನಾಟ್ ರೀಚಬಲ್ ಬರ್ತಿದೆ, ಹಳ್ಳಿ ಅಲ್ವಾ, ಅಲ್ಲಿ ನೆಟ್ವರ್ಕ್ ಸಿಗಲ್ಲಂತೆ...’

‘ಇರಲಿ, ಆ ಮೊಬೈಲ್ ನಂಬರನ್ನ ಟ್ರ್ಯಾಕ್​ಗೆ ಹಾಕಿಸು. ಅದು ಆನ್ ಆದ ಕೂಡಲೇ ಟವರ್ ಲೊಕೇಟ್ ಮಾಡೋಕೆ ನಮ್ಮ ಸೈಬರ್ ಸೆಲ್ನೋರಿಗೆ ಹೇಳು.’

‘ಯಾಕ್ಸಾ, ಅವನೇನು ಟೆರರಿಸ್ಟಾ? ಅಥ್ವಾ ಇನ್ನೇನಾದ್ರು...?’

ಜಗದೀಶ್ ಪ್ರಶ್ನೆಗೆ ನಕ್ಕ ರವಿನಾರಾಯಣ್, ತಮ್ಮನ್ನು ನೋಡಿದ ಮರುದಿನವೇ ನಾಪತ್ತೆಯಾಗಿದ್ದಾನೆ. ಉದ್ದೇಶಪೂರ್ವಕವಾಗಿಯೇ ತಮ್ಮ ಕಣ್ಣು ತಪ್ಪಿಸುತ್ತಿದ್ದಾನೆ, ತಮ್ಮ ಬಗ್ಗೆ ಅವನಿಗೆ ಎಲ್ಲ ಗೊತ್ತಾಗಿದೆ ಎಂಬ ಖಚಿತ ನಿರ್ಧಾರಕ್ಕೆ ಬಂದರು. ಅವನು ಸದಾನಂದನೇ ಆಗಿದ್ದರೆ ಆ ದಿನ ಮಾರುತಿ ವ್ಯಾನ್ನಲ್ಲಿ ಸತ್ತವರು ಯಾರು? ಈ ರಹಸ್ಯವನ್ನು ಭೇದಿಸಲೇಬೇಕು ಎಂದುಕೊಂಡರು.

ಆ ದಿನ ಸಂಜೆ ಆಕಸ್ಮಿಕವಾಗಿ ಇನ್ಸ್ಪೆಕ್ಟರ್ ಅಲೋಕ್ ಸಿಕ್ಕು ‘ಏನ್ ರವಿ, ಎಲ್ಲಿಗೆ ಬಂತು ನಿಮ್ಮ ಪತ್ತೇದಾರಿಕೆ? ಸತ್ತೋನು ಸಿಕ್ಕನಾ?’ ಎಂದು ತಮಾಷೆ ಮಾಡಿದರಲ್ಲದೆ, ‘ಒಬ್ಬನನ್ನು ಹೋಲುವ ಹಾಗೆ ಅನೇಕರಿರುತ್ತಾರೆ, ಆ ರೀತಿಯ ಧ್ವನಿ ಮತ್ತೊಬ್ಬನಿಗೆ ಇರಬಾರದು ಎಂದೇನಿಲ್ಲ. ನೀವು ಗುಡ್ಡ ಅಗೀತಿದೀರಿ, ಇಲಿಯಾದರೂ ಸಿಗಲಿ’ ಎಂದು ನಕ್ಕರು.

ಈ ನಡುವೆ ಎರಡು ದಿನ ಕಚೇರಿಗೆ ರಜೆ ಹಾಕಿ ಕಾರ್ಕಳಕ್ಕೆ ತೆರಳಿದ ರವಿನಾರಾಯಣ್ ಅಲ್ಲಿ ತಾವು ಕೆಲಸ ಮಾಡುತ್ತಿದ್ದ ಪೊಲೀಸ್ ಠಾಣೆಗೆ ಹೋಗಿ ಸದಾನಂದನ ಆತ್ಮಹತ್ಯೆಯ ಹಳೆಯ ಫೈಲ್​ಗಳನ್ನು ತೆಗೆಸಿ ಪರಿಶೀಲಿಸಿದರು. ಕೆಲವು ಫೋಟೋಗಳನ್ನು ತೆಗೆದುಕೊಂಡರು. ಆತನ ಹೆಂಡತಿ- ಮಕ್ಕಳ ಬಗ್ಗೆ ವಿಚಾರಿಸಿದಾಗ ‘ಅವರು ಊರು ಬಿಟ್ಟು ಎರಡು ವರ್ಷದ ಮೇಲಾಯಿತು ಸರ್, ಸಾಲಗಾರರು ಅವರಿಗೂ ಕಾಟ ಕೊಡುತ್ತಿದ್ದರು’ ಎಂದರು ಹೆಡ್ ಕಾನ್ಸ್ಟೆಬಲ್ ರಾಮಣ್ಣ. ಸದಾನಂದ ಸತ್ತಿರಲು ಸಾಧ್ಯವಿಲ್ಲ. ನನ್ನನ್ನು ಒಂದೇ ಬಾರಿ ಆತ ಬೀಡಾ ಅಂಗಡಿಯಲ್ಲಿ ನೋಡಿದ್ದು, ಆ ದಿನದಿಂದ ಈವರೆಗೆ ನಾಪತ್ತೆ ಎಂದರೆ ಇದರಲ್ಲೇನೋ ನಿಗೂಢ ಅಡಗಿದೆ ಎಂದು ರವಿನಾರಾಯಣ್ ಅಂದಾಜು ಮಾಡಿದರು.

***

ದಾವಣಗೆರೆಗೆ ಬಂದ ನಂತರ ತಮ್ಮ ಪತ್ತೆದಾರಿಕೆಯ ಕೆಲವು ರಿಪೋರ್ಟ್​ಗಳಿಗಾಗಿ ಕಾಯುತ್ತಾ ತಮ್ಮ ಕೆಲಸದಲ್ಲೇ ಮುಳುಗಿ ಹೋದರು ರವಿನಾರಾಯಣ್. ಒಂದು ದಿನ ಇದ್ದಕ್ಕಿದ್ದಂತೆ ಹೊಸ ಸುದ್ದಿಯೊಂದಿಗೆ ಪ್ರತ್ಯಕ್ಷನಾದ ಕಾನ್ಸ್ಸ್ಟೆಬಲ್ ಜಗದೀಶ್ ‘ಸರ್ ಬೀಡಾ ಅಂಗಡಿ ಉಮೇಶಣ್ಣ ಇದ್ರಲ್ಲ, ಅವರು ತಮ್ಮ ಊರಿನ ತೋಟದಲ್ಲಿ ಹಾವು ಕಡಿದು ಸತ್ತು ಹೋದ್ರಂತೆ’ ಎಂದ. ರವಿನಾರಾಯಣ್​ಗೆ ಶಾಕ್!

‘ಹೌದಾ? ನಿಂಗ್ಯಾರು ಹೇಳಿದ್ರು?’

‘ಲೋಕಲ್ ಪೇಪರಲ್ಲಿ ಅವರ ನಿಧನದ ಜಾಹೀರಾತು ಬಂದಿದೆ ನೋಡಿ ಸಾ... ಜಗದೀಶ್ ಪೇಪರ್ ಬಿಡಿಸಿ ಸಾಹೇಬರ ಮುಂದೆ ಹಿಡಿದ. ಯೆಸ್, ಅದೇ ಫೋಟೋ! ಗಡ್ಡ, ಕನ್ನಡಕ ಇದ್ದರೂ ಈ ಉದ್ದನೆಯ ಮೂಗು ಅವನದೇ, ಸದಾನಂದನದು.. ರವಿನಾರಾಯಣ್ ತಕ್ಷಣ ತಮ್ಮ ಡ್ರಾನಲ್ಲಿದ್ದ ಕಾರ್ಕಳ ಪೋಲಿಸ್ ಠಾಣೆಯಿಂದ ತಂದಿದ್ದ ಫೋಟೋ ತೆಗೆದು ಅದರ ಜೊತೆಗೆ ಹೋಲಿಸಿ ನೋಡಿದರು. ಅವರ ತಲೆಯಲ್ಲೇನೋ ಮಿಂಚು!

ಪೇಪರಲ್ಲಿ ಜಾಹಿರಾತು ಬಂದಿದೆ ಎಂದ ಮೇಲೆ ಅದನ್ನು ಹಾಕಿಸಿದವರು ಯಾರು? ಕೊಲೆಗಾರ ಎಷ್ಟೇ ಚಾಣಾಕ್ಷ ಇದ್ದರೂ ಒಂದಲ್ಲ ಒಂದು ಸುಳಿವು ಬಿಟ್ಟೇ ಇರುತ್ತಾನೆ ಎಂದುಕೊಂಡು ಸದರಿ ಪತ್ರಿಕಾ ಕಚೇರಿಗೆ ಫೋನಾಯಿಸಿದರು. ಅವರ ಮುಖದಲ್ಲಿ ಯುದ್ಧ ಗೆದ್ದ ಖುಷಿ! ಸತ್ತವನು ಮತ್ತೆ ಸಾಯಲು ಸಾಧ್ಯವೇ? ಇದೆಲ್ಲ ಪೊಲೀಸ್ ಇಲಾಖೆಯನ್ನು ಅದರಲ್ಲೂ ನನ್ನನ್ನು ಯಾಮಾರಿಸಲು ಹೂಡಿದ ನಾಟಕ ಎಂದು ಅವರಿಗೆ ಗೊತ್ತಾಗಿ ಹೋಯಿತು. ತಕ್ಷಣ ಇನ್ಸ್ಪೆಕ್ಟರ್ ಅಲೋಕ್ಗೆ ಫೋನ್ ಮಾಡಲು ಮೊಬೈಲ್ ಕೈಗೆತ್ತಿಕೊಂಡರು.

***

ಇನ್ಸ್ಪೆಕ್ಟರ್ ಅಲೋಕ್​ ಕುಮಾರ್ ಮತ್ತು ರವಿನಾರಾಯಣ್ ಲಾಕಪ್ನಲ್ಲಿ ನಿಂತಿದ್ದರು. ಇಬ್ಬರ ಕೈಯಲ್ಲೂ ಲಾಠಿ. ಲಾಕಪ್​ನ ಮೂಲೆಯಲ್ಲಿ ಸದಾನಂದ ಅಲಿಯಾಸ್ ಉಮೇಶ್ ಮತ್ತವನ ಕೆಲಸಗಾರ ಸುರೇಶ್!

‘ಹೇಳ್ರಿ ಸದಾನಂದ್, ನೀವು ಆತ್ಮಹತ್ಯೆ ಮಾಡಿಕೊಂಡಿಲ್ಲ.. ಬದುಕಿದ್ದೀರಿ. ಅಂದಮೇಲೆ ಅವತ್ತು ಮಾರುತಿ ವ್ಯಾನ್ನಲ್ಲಿ ಸುಟ್ಟು ಭಸ್ಮವಾದವರು ಯಾರು?’

ಸದಾನಂದ ಮಾತನಾಡಲಿಲ್ಲ. ‘ಮಾತನಾಡದಿದ್ದರೆ ಪೊಲೀಸ್ ಟ್ರೀಟ್ವೆುಂಟ್ ಶುರು ಮಾಡ್ಬೇಕಾಗುತ್ತೆ. ನೀವು ಸಿಕ್ಕಿ ಬಿದ್ದಾಯ್ತು, ನಿಜ ಹೇಳಿ..’ ರವಿನಾರಾಯಣ್ ಲಾಠಿ ತೋರಿಸಿ ಹೆದರಿಸಿದರು.

‘ಹೇಳ್ತಿಯೋ ಇಲ್ವೊ ಬದ್ಮಾಶ್..’ ಅಲೋಕ್​ ಕುಮಾರ್ ಜಾಡಿಸಿ ಒದೆಯಲು ಕಾಲೆತ್ತಿದಾಗ ‘ಹೇಳ್ತೀನಿ, ಹೇಳ್ತೀನಿ...’ ಎಂದ ಸದಾನಂದ.

‘ಚಿಟ್ ಫಂಡ್ ವ್ಯವಹಾರದಲ್ಲಿ ಬಹಳ ಲಾಸಾಯ್ತು. ಕೋಟಿಗಟ್ಟಲೆ ಸಾಲ ಮೈಮೇಲೆ. ಸಾಲಗಾರರು ಕಾಟ ಕೊಡುತ್ತಲೇ ಇದ್ದರು. ಕೊಟ್ಟ ಚೆಕ್​ಗಳೆಲ್ಲ ಬೌನ್ಸ್ ಆಗಿ ಕೋರ್ಟ್​ನಲ್ಲಿ ಕೇಸುಗಳು ಬೇರೆ. ಸಾಲಗಾರರ ಕಾಟಕ್ಕೆ ಮನೆಗೆ ಹೋಗೋದನ್ನೇ ನಿಲ್ಲಿಸಿದ್ದೆ. ಹೀಗೆಲ್ಲ ಕಾಟ ಕೊಟ್ರೆ ಆತ್ಮಹತ್ಯೆ ಮಾಡ್ಕೋತೀನಿ ಅಂತಾನೂ ಕೆಲವರಿಗೆ ಬೆದರಿಸಿದ್ದೆ. ಅವರು ಸುಮ್ಮನಾಗಿದ್ದರು. ಕೇವಲ ಬೆದರಿಕೆಗೇ ಸಾಲಗಾರರು ಸುಮ್ಮನಾಗಿದ್ದಾರೆ ಅಂದಮೇಲೆ ನಿಜಕ್ಕೂ ಆತ್ಮಹತ್ಯೆ ಮಾಡಿಕೊಂಡರೆ? ಯಾರಿಗೂ ಸಾಲ ಕೊಡೋ ಹಾಗೇ ಇಲ್ಲ..! ಸತ್ತ ಮೇಲೆ ವಸೂಲಿ ಮಾಡ್ಕಳೋಕ್ಕೆ ನನ್ನತ್ರ ಯಾವ ಆಸ್ತಿಯೂ ಇರಲಿಲ್ಲ. ಆದರೆ...!’ ಸದಾನಂದ ಮಾತು ನಿಲ್ಲಿಸಿದ.

‘ಆದರೆ ಏನು...?’ ಅಲೋಕ್ ಕೇಳಿದರು.

‘ನನಗೆ ಸಾಯಲು ಇಷ್ಟವಿರಲಿಲ್ಲ..’

‘ಮತ್ತೆ ನಿನ್ನ ಕಾರಲ್ಲಿ ಸುಟ್ಟು ಭಸ್ಮವಾದರು ಯಾರು?’

‘ಊರುಮನೆ ರಾಮಚಂದ್ರ ಜೋಯಿಸರು... ನಾನು ಸಾಲಗಾರರಿಂದ ತಪ್ಪಿಸಿಕೊಳ್ಳಲು ಅನಿವಾರ್ಯವಾಗಿ ಅವರನ್ನು ಕೊಲ್ಲಬೇಕಾಯಿತು.’

‘ವಾಟ್! ಅವರಾ? ಓ ಗಾಡ್..’ ರವಿನಾರಾಯಣ್ ತಲೆ ಮೇಲೆ ಕೈ ಇಟ್ಟುಕೊಂಡರು. ‘ಪಾಪ ಅವರು ಅಲ್ಲಿ ಇಲ್ಲಿ ಪೂಜೆ, ಪೌರೋಹಿತ್ಯ ಮಾಡ್ಕಂಡು ಜೀವನ ಮಾಡ್ತಿದ್ರು, ಅವರು ನಿನಗೇನು ಅನ್ಯಾಯ ಮಾಡಿದ್ರು, ಅವರನ್ಯಾಕಯ್ಯ ಕೊಲೆ ಮಾಡಿದೆ?’

‘ಅವರನ್ನೇ ಕೊಲ್ಲಬೇಕು ಅಂತ ಏನಿದ್ದಿಲ್ಲ ಸರ್.. ನನ್ನಷ್ಟು ಎತ್ತರ, ದಪ್ಪ ಇದ್ದೋರು ಯಾರಾದ್ರೂ ಸರಿ, ಅವರನ್ನ ಎಚ್ಚರ ತಪ್ಪಿಸಿ ಕಾರಲ್ಲಿ ಕೂರಿಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚೋದು. ನೋಡಿದವರ ಕಣ್ಣಿಗೆ ನಾನೇ ಆತ್ಮಹತ್ಯೆ ಮಾಡಿಕೊಂಡೆ ಅಂತ ನಂಬಿಸೋಕೆ ಪ್ಲ್ಯಾನ್ ಮಾಡಿದ್ದೆ...’

‘ಸರಿ ಮುಂದೆ?’

‘ಕಾರ್ಕಳದ ಹೊರ ವಲಯದ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿಕೊಂಡು ಮೂರು ದಿನ ಕಾದೆ. ನನ್ನ ಪ್ಲ್ಯಾನ್​ಗೆ ಸೂಟ್ ಆಗೋ ಅಂಥೋರು ಯಾರೂ ಸಿಗಲಿಲ್ಲ. ಮೂರನೇ ದಿನ ಜೋಯಿಸರು ಸಿಕ್ಕರು. ಅವರನ್ನ ಮಾತಾಡಿಸ್ತಾ ಮಾತಾಡಿಸ್ತಾ ಅವರ ಮೂಗಿಗೆ ಕ್ಲೋರೋಫಾರಂ ಹಿಡಿದು ಎಚ್ಚರ ತಪ್ಪಿಸಿದೆ. ನಂತರ ಕಾರಿನ ಮುಂಭಾಗದ ಸೀಟಿಗೆ ಕೂರಿಸಿ ಬೆಂಕಿ ಹಚ್ಚಿದೆ...’

ಕಾನ್ಸ್ಟೆಬಲ್ ಜಗದೀಶ್​ನ ವಿಡಿಯೋ ಕ್ಯಾಮೆರಾ ಎಲ್ಲವನ್ನೂ ರೆಕಾರ್ಡ್ ಮಾಡುತ್ತಿತ್ತು.

ಕೊಲೆ ಆರೋಪಿ ಸದಾನಂದ, ಅವನ ಪತ್ನಿ ಶಶಿಕಲಾ, ಕೆಲಸಗಾರ ಸುರೇಶ್ ಎಲ್ಲರನ್ನೂ ಇನ್ಸ್ಪೆಕ್ಟರ್ ಅಲೋಕ್ಕುಮಾರ್ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಎಲ್ಲರಿಗೂ ನ್ಯಾಯಾಂಗ ಬಂಧನ ಆದೇಶವಾಗಿ ಮೊಕದ್ದಮೆಯನ್ನು ಕಾರ್ಕಳ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು.

***

ರವಿನಾರಾಯಣ್ ಪತ್ತೇದಾರಿಕೆಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ಇನ್ಸ್ಪೆಕ್ಟರ್ ಅಲೋಕ್, ‘ಹೇಳಿ ರವಿ, ಇದೆಲ್ಲ ಹೇಗೆ ಸಾಧ್ಯವಾಯಿತು? ನನಗಂತೂ ನಂಬೋಕೇ ಆಗ್ತಿಲ್ಲ’ ಎಂದರು.

‘ಸದಾನಂದನ ಗೊಗ್ಗರು ಧ್ವನಿಯೇ ಇಷ್ಟೆಲ್ಲ ಪತ್ತೇದಾರಿಕೆಗೆ ಮೂಲ ಕಾರಣ. ಮೇಲಾಗಿ ಆತ ಬೀಡಾ ಅಂಗಡಿಯಲ್ಲಿ ನನ್ನ ಕಂಡ ಆ ಕ್ಷಣದಿಂದಲೇ ನಾಪತ್ತೆಯಾಗಿ ಹೋದ. ಇಂಥವರನ್ನ ಸ್ಲಿಪೆರಿ ಅಂತ ಕರೀತಾರೆ. ಅವನ ಬೀಡಾ ಅಂಗಡಿಯ ಚಲನವಲನಗಳು ಎದುರುಗಡೆ ಅಂಗಡಿಯಲ್ಲಿದ್ದ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗುವ ಹಾಗೆ ವ್ಯವಸ್ಥೆ ಮಾಡಿದ್ದೆ. ಸದಾನಂದ ನಾಪತ್ತೆ ಆದ ದಿನದಿಂದ ನಾಲ್ಕು ಬಾರಿ, ಅದೂ ರಾತ್ರಿ ಹೊತ್ತು ಬೀಡಾ ಅಂಗಡಿಗೆ ಬಂದು ಹೋಗಿದ್ದು ಅದರಲ್ಲಿ ರೆಕಾರ್ಡ್ ಆಗಿದೆ. ನಡೆಯುವಾಗ ಕಾಲೆಳೆದು ಹಾಕುತ್ತಿದ್ದ. ಆಗಲೇ ಗೊತ್ತಾಯಿತು ಆತ ಸದಾನಂದ ಎಂದು. ಆತನ ಫೋಟೋ ಪ್ರಿಂಟ್ ಮಾಡಿಸಿ ರಿವರ್ಸ್ ಇಮೇಜ್ ತೆಗೆಸಿದೆ. ಗಡ್ಡ, ಕನ್ನಡಕ, ಟವೆಲ್ ಎಲ್ಲ ರಿಮೂವ್ ಮಾಡಿಸಿ ನೋಡಿದಾಗ ಆತ ನಿಜಕ್ಕೂ ಸದಾನಂದನೇ ಆಗಿದ್ದ.

ತಾನು ಸತ್ತು ಹೋಗಿದ್ದೀನಿ, ತನ್ನ ಬಗ್ಗೆ ಇನ್ಮೇಲೆ ಯಾರೂ ತಲೆ ಕೆಡಿಸಿಕೊಳ್ಳದಿರಲಿ ಎಂದು ನಂಬಿಸೋಕೆ ಪೇಪರಲ್ಲಿ ತನ್ನದೇ ನಿಧನ ವಾರ್ತೆಯನ್ನು ತನ್ನ ಹೆಂಡತಿಯಿಂದ ಅಂಗಡಿ ಕೆಲಸಗಾರ ಸುರೇಶ್​ಗೆ ಹೇಳಿಸಿ ಜಾಹೀರಾತು ಹಾಕಿಸಿದ. ಪತ್ರಿಕಾ ಕಚೇರಿಯಲ್ಲಿ ಸುರೇಶನ ಮೊಬೈಲ್ ನಂಬರ್ ಸಿಕ್ಕು ಆತನ ಬಾಯಿ ಬಿಡಿಸಿದಾಗ ಸದಾನಂದನ ಹೆಂಡತಿ ಶಶಿಕಲಾ ಇದರ ಹಿಂದಿರುವುದು ಗೊತ್ತಾಯಿತು. ಇನ್ನು ಕೆಲವೇ ದಿನದಲ್ಲಿ ಗಂಡ-ಹೆಂಡತಿ ಇಬ್ಬರೂ ಕಾಸರಗೋಡು ಬಿಟ್ಟು ಬೇರೆ ರಾಜ್ಯಕ್ಕೆ ತಲೆ ತಪ್ಪಿಸಿಕೊಂಡು ಹೋಗುವವರಿದ್ದರು. ಅಷ್ಟರಲ್ಲಿ ಸಿಕ್ಕುಬಿದ್ದರು. ಬೀಡಾ ಅಂಗಡಿ ಅಗ್ರಿಮೆಂಟ್, ಮೊಬೈಲ್ ಸಿಮ್ ಕಾರ್ಡ್ ಯಾವುದರಲ್ಲೂ ಸದಾನಂದ ಅಥವಾ ಉಮೇಶ್ ಅನ್ನೋ ಹೆಸರಿರಲಿಲ್ಲ. ಅಷ್ಟು ಎಚ್ಚರ ವಹಿಸಿದ್ದ ಆತನನ್ನು ಹಿಡಿಯಲು ಎಲ್ಲ ಸಿದ್ಧತೆ ಮಾಡಿಕೊಳ್ಳುವಷ್ಟರಲ್ಲಿ ಪೇಪರ್ನಲ್ಲಿ ಹಾಕಿಸಿದ್ದ ಜಾಹೀರಾತಿನಿಂದ ಅವನು ತಾನಾಗಿಯೇ ಬಲೆಗೆ ಬಿದ್ದ. ಇದರಲ್ಲಿ ಸುರೇಶ ಅಮಾಯಕ, ಆತನನ್ನು ಮಾಫಿ ಸಾಕ್ಷಿ ಮಾಡಬಹುದು...’ ರವಿನಾರಾಯಣ್ ವಿವರಿಸುತ್ತ ಹೋದರು. ಅಲೋಕ್ ಮುಖದಲ್ಲಿ ಖುಷಿ ಎದ್ದು ಕಾಣುತ್ತಿತ್ತು. ಬೆಳಿಗ್ಗೆ ಪತ್ರಿಕೆಗಳಲ್ಲಿ ರವಿನಾರಾಯಣ್ ಪತ್ತೇದಾರಿಕೆದೇ ದೊಡ್ಡ ಸುದ್ದಿ! ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆಯ ಸುರಿಮಳೆ!

ಸದಾನಂದನ ಕೃತ್ಯವನ್ನು ತಿಳಿಸಿ, ಹೇಳಿಕೆ ದಾಖಲಿಸಿಕೊಳ್ಳಲು ಊರುಮನೆ ರಾಮಚಂದ್ರ ಜೋಯಿಸರ ಮನೆಯ ಫೋನ್ ನಂಬರ್ಗೆ ಕಾಲ್ ಮಾಡಿದರು ರವಿನಾರಾಯಣ್. ಅದಾಗಲೇ ಪತ್ರಿಕೆಗಳ ಮೂಲಕ ವಿಷಯ ತಿಳಿದಿದ್ದ ಜೋಯಿಸರ ಪತ್ನಿ ಸುಶೀಲಮ್ಮ ‘ನನ್ನ ಗಂಡನ ಸಾವಿನ ವಿಷಯ ನನಗೆ, ನಮ್ಮ ಮಕ್ಕಳಿಗೆ ತಿಳಿಯದೇ ಇದ್ದಿದ್ದರೆ ಒಳ್ಳೆಯದಿತ್ತು. ಅವರು ಎಲ್ಲೋ ಜೀವಂತವಾಗಿದ್ದಾರೆ, ಇವತ್ತಿಲ್ಲ ನಾಳೆ ವಾಪಸ್ ಬರುತ್ತಾರೆ ಎಂಬ ನಂಬಿಕೆಯಲ್ಲಿದ್ದೆವು. ಈಗ ಆ ನಿರೀಕ್ಷೆಯೂ ಇಲ್ಲವಾಯಿತು. ಈ ದುಃಖ ನಿರಂತರ. ಕೊಲೆಗಾರ ಸದಾನಂದನಿಗೆ ಗಲ್ಲು ಶಿಕ್ಷೆ ಕೊಡಿಸಿ’ ಎಂದು ಬಿಕ್ಕಳಿಸಿದರು. ಅವರ ಮಾತು ಕೇಳಿ ರವಿನಾರಾಯಣ್ ಗೆ ಬೇಸರವಾಯಿತು. ಒಮ್ಮೆ ದೀರ್ಘ ನಿಟ್ಟುಸಿರು ಬಿಟ್ಟು ಫೋನಿಟ್ಟರು.

(ಸತ್ಯ ಘಟನೆಯೊಂದರ ಆಧಾರಿತ)