ಅದೊಂದು ಸುಸ್ಥಿರ ಕೃಷಿ ಕಾರ್ಯಕರ್ತರ ಸಮಾವೇಶ. ‘ನಾನು ನಿಮಗೊಂದು ಪ್ರಶ್ನೆ ಕೇಳುತ್ತೇನೆ. ನಮ್ಮ ದೇಶದ ಹಣಕಾಸು ಸಚಿವರು ಯಾರು’ ಎಂದು ಸುನೀತಾ ನಾರಾಯಣ್ ಪ್ರಶ್ನಿಸಿದರು. ನಗುನಗುತ್ತ ತಕ್ಷಣವೇ ಹತ್ತಾರು ಜನರು ‘ನಿರ್ಮಲಾ ಸೀತಾರಾಮನ್’ ಎಂದು ಸರಿ ಉತ್ತರವನ್ನೇ ನೀಡಿದರು. ‘ಅಲ್ಲ!’ ಅಂತ ಸುನೀತಾ ಅವರು ಹೇಳಿದಾಗ ಒಬ್ಬರಿಗೊಬ್ಬರು ಮುಖ ನೋಡಿಕೊಂಡರು. ಗೊಂದಲವನ್ನು ಅರಿತ ಸುನೀತಾ, ‘ಇದಕ್ಕೆ ಸರಿಯಾದ ಉತ್ತರ- ಮುಂಗಾರು ಮಾರುತಗಳು’ ಎಂದು ಮುಗುಳ್ನಗುತ್ತ ಹೇಳಿದರು. ದೆಹಲಿಯ ಪರಿಸರ ವಿಜ್ಞಾನ ಸಂಸ್ಥೆ (ಸಿಎಸ್ಇ) ಮಹಾ ನಿರ್ದೇಶಕಿ ಸುನೀತಾ ನಾರಾಯಣ್ ಅವರ ಈ ಪ್ರಶ್ನೆಗೆ ಪ್ರತಿ ಬಾರಿಯೂ ಉತ್ತರ ‘ತಪ್ಪೇ’ ಸಿಗುತ್ತದಂತೆ! ‘ಇಡೀ ಭಾರತ ಉಪಖಂಡದ ಹಣಕಾಸು ವ್ಯವಸ್ಥೆ ನಿಂತಿರುವುದೇ ಮುಂಗಾರಿನ ಮೇಲೆ. ಯಾರೇನೇ ಭರವಸೆ ಕೊಡಲಿ; ನೀತಿ ನಿರೂಪಣೆ ಮಾಡಲಿ, ಕೊನೆಗೆ ದೇಶದ ಆರ್ಥಿಕ ವ್ಯವಸ್ಥೆಯನ್ನು ರೂಪಿಸುವುದು ಮುಂಗಾರು ಹಂಗಾಮು. ಭಾರತದಂಥ ಕೃಷಿ ಪ್ರಧಾನ ದೇಶದಲ್ಲಿ ಸಕಾಲಿಕ ಮಳೆ ಇಲ್ಲದೇ ಹೋದರೆ ಆರ್ಥಿಕ ಸ್ಥಿತಿ ಏನಾದೀತು’ ಎಂಬುದು ಅವರ ಪ್ರಶ್ನೆ.
ಬರೀ ಮೂರ್ನಾಲ್ಕು ದಶಕಗಳ ಹಿಂದೆ ಊರ ಮುಂದಿನ ದೇವಸ್ಥಾನದ ಕಟ್ಟೆ ಮೇಲೆ ವಿರಾಮದ ಮಾತುಕತೆ ನಡೆಸುತ್ತಿದ್ದ ಕೃಷಿಕರು, ‘ಮಳಿ ಭಾಳ ತೊಂದ್ರಿ ಕೊಡಕತೆôತಿ’ ಅಂತ ದೂರುತ್ತಿದ್ದುದೇ ಕಡಿಮೆ. ಆಗಲೂ ಬರ- ಪ್ರವಾಹ ಇರುತ್ತಿತ್ತು. ಆದರೆ ಅದನ್ನೆದುರಿಸುವ ತಂತ್ರಗಳು ಅವರಿಗೆ ಗೊತ್ತಿದ್ದವು. ಈಗ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಹತ್ವ ಪಡೆಯುತ್ತಿರುವ ಆಹಾರ ಭದ್ರತೆ, ಹವಾಮಾನ ವೈಪರೀತ್ಯ ಆಗಲೂ ಇದ್ದವು. ಅದನ್ನು ಮೀರಿಯೂ ಬೇಸಾಯ ಬಲು ಕಷ್ಟ ಎಂಬ ಮಾತು ಹೆಚ್ಚೇನೂ ಚಾಲ್ತಿಯಲ್ಲಿ ಇರಲಿಲ್ಲ. ಬರ ನಿರೋಧಕ ಜಾಣ್ಮೆಯ ತಂತ್ರಗಳ ಗುಚ್ಛವು ರೈತ ಸಮುದಾಯದಲ್ಲಿತ್ತು. ಪ್ರಸ್ತುತ, ಕೃಷಿಕರು ಎದುರಿಸುತ್ತಿರುವ ಸವಾಲುಗಳಿಗೆ ಬೇರೆಲ್ಲೋ ಉತ್ತರ ಹುಡುಕದೇ, ಹಿಂದಿನ ದಿನಗಳನ್ನು ಅವಲೋಕಿಸಿದರೆ ಸಾಕು; ಸಾಕಷ್ಟು ಪರಿಹಾರ ಮಾರ್ಗಗಳು ಸಿಗುತ್ತವೆ.
ಹೊಲದಲ್ಲಿ ಕಟಾವಾದ ಬೆಳೆಯನ್ನು ನೇರವಾಗಿ ಮಾರುಕಟ್ಟೆಗೆ ಒಯ್ಯಲು ಈಗಿನ ಮುಖ್ಯ ಕಾರಣವೆಂದರೆ, ಬೆಳೆದಿರುವುದು ಒಂದೇ ಬೆಳೆ! ಅದನ್ನು ಮಾರಾಟ ಮಾಡಿ, ಅಗತ್ಯ ಆಹಾರ ಧಾನ್ಯಗಳನ್ನು ಮಾರುಕಟ್ಟೆಯಿಂದ ಮನೆಗೆ ತರುವ ಪರಿ ಸೋಜಿಗ. ‘ನಾನಂತೂ ವರ್ಷಕ್ಕೆ ಬೇಕಾಗುವಷ್ಟು ಬೇಳೆ ಕಾಳು ನನ್ನ ಹೊಲದಲ್ಲೇ ಬೆಳೆದುಕೊಳ್ಳುವೆ’ ಎಂದು ಹೇಳುವ ಕುಂದಗೋಳ ತಾಲ್ಲೂಕು ಹಿರೇಗುಂಜಳ ಗ್ರಾಮದ ಮಲ್ಲೇಶಪ್ಪ ಬಿಸಿರೊಟ್ಟಿ, ಪರಂಪರೆಯ ಜ್ಞಾನ ‘ಅಕ್ಕಡಿ ಪದ್ಧತಿ’ಯ ಪ್ರಬಲ ಪ್ರತಿಪಾದಕ. ಮಣ್ಣಿನ ವಿವಿಧ ಪದರುಗಳಲ್ಲಿನ ಪೋಷಕಾಂಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಅಕ್ಕಡಿ ಪದ್ಧತಿ ನಮ್ಮಲ್ಲಿದ್ದರೆ, ಉತ್ತರ ಭಾರತದಲ್ಲಿ ‘ಬಾರಾನಾಜ್’ ಚಾಲ್ತಿಯಲ್ಲಿದೆ. ಹನ್ನೆರಡು ಧಾನ್ಯಗಳನ್ನು ಒಂದೇ ಹೊಲದಲ್ಲಿ ಬಿತ್ತನೆ ಮಾಡಿ, ಒಂದು ತಿಂಗಳಿನಿಂದ ಶುರುವಾಗುವ ಕಟಾವು ಆರು ತಿಂಗಳವರೆಗೂ ನಡೆಯುತ್ತಲೇ ಇರುತ್ತದೆ. ಹಿಮಾಲಯದ ಘಡವಾಲ್ ಪ್ರಾಂತ್ಯದಲ್ಲಿ ಈ ಪದ್ಧತಿ ಉಳಿಸಲು ಯತ್ನಿಸುತ್ತಿರುವ ದೇಸಿ ಬೀಜ ಸಂರಕ್ಷಕ ವಿಜಯ್ ಜರ್ಧಾರಿ, ‘ಹವಾಮಾನ ವೈಪರೀತ್ಯದಿಂದ ಬೆಳೆಹಾನಿ ಅನುಭವಿಸುವ ರೈತರಿಗೆ ಈ ವಿಧಾನ ಪ್ರಯೋಜನಕಾರಿ. ಒಂದಲ್ಲಾ ಒಂದು ಬೆಳೆ ಕೈಗೆ ಸಿಕ್ಕೇ ಸಿಗುತ್ತದೆ ಎಂಬುದೇ ಬಾರಾನಾಜ್ ವಿಧಾನದ ಹೆಗ್ಗಳಿಕೆ’ ಎಂದು ಬಣ್ಣಿಸುತ್ತಾರೆ.
ಹಾಗೆ ನೋಡಿದರೆ, ಕೃಷಿ ಬೆಳೆ ವೈವಿಧ್ಯವೇ ಒಂದರ್ಥದಲ್ಲಿ ‘ವಿಮೆ’ ಇದ್ದಂತೆ. ಹಲವು ವಿಧದ ಬೆಳೆಗಳಿದ್ದಾಗ, ಒಂದು ಹಾನಿಗೀಡಾದರೂ ಇನ್ನೊಂದು ಇಳುವರಿ ಖಚಿತ. ‘ಏಕಬೆಳೆ ವಿಧಾನದಲ್ಲಿ ಒಂದೇ ಬಗೆಯ ಸಸ್ಯಗಳು ಮಣ್ಣಿನಲ್ಲಿರುವ ನಿರ್ದಿಷ್ಟ ಪದರಿನ ಪೋಷಕಾಂಶಗಳನ್ನು ಬಳಸಿಕೊಳ್ಳುತ್ತವೆ. ಆದರೆ ವಿವಿಧ ಬಗೆಯ ಬೇರು ವಲಯವುಳ್ಳ ಬೆಳೆಗಳು ಎಲ್ಲ ಬಗೆಯ ಪೋಷಕಾಂಶಗಳನ್ನೂ ಬಳಸಿಕೊಳ್ಳುತ್ತವೆ’ ಎಂದು ಮಣ್ಣಿನ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದ ತಜ್ಞ ದಿ. ಸಾಯಿಲ್ ವಾಸು ಹೇಳುತ್ತಿದ್ದರು.
ಸೂಕ್ಷ್ಮವಾಗಿ ಗಮನಿಸಿದರೆ, ಪರಂಪರಾಗತ ಬೇಸಾಯ ಯಾವತ್ತೂ ವೈವಿಧ್ಯದಿಂದ ಕೂಡಿತ್ತು ಎಂಬುದು ಗೊತ್ತಾಗುತ್ತದೆ. ಬೆಳೆಗಳಲ್ಲಿ ಏಕದಳ, ಬೇಳೆಕಾಳು, ಎಣ್ಣೆಕಾಳು ಒಳಗೊಂಡ ಪದ್ಧತಿಯು ಆರ್ಥಿಕವಾಗಿ ಭದ್ರತೆಯನ್ನು ಕಲ್ಪಿಸುತ್ತದೆ. ದಕ್ಷಿಣ ಕರ್ನಾಟಕದಲ್ಲಿ ರಾಗಿ, ಉತ್ತರ ಕರ್ನಾಟಕದಲ್ಲಿ ಜೋಳ ಮುಖ್ಯ ಬೆಳೆ. ಇದರ ಜತೆಯಲ್ಲಿ ಉಪಬೆಳೆ ಇರುತ್ತವೆ. ಈ ಪೈಕಿ ಉತ್ತರ ಕರ್ನಾಟಕದಲ್ಲಿ ಸಿರಿಧಾನ್ಯಗಳು ಬರಸಹಿಷ್ಣು ಎಂದೇ ಹೆಸರಾಗಿವೆ. ಸಿರಿಧಾನ್ಯಗಳ ಜತೆಗೆ ತೊಗರಿ, ಉದ್ದು, ಹೆಸರು, ಅಲಸಂದೆ, ಶೇಂಗಾ, ಎಳ್ಳು, ಕುಸುಬೆ, ಗುರೆಳ್ಳು ಇತ್ಯಾದಿ ಬೆಳೆಗಳು ಅಕ್ಕಡಿ ಸಾಲಿನಲ್ಲಿ ಜಾಗ ಪಡೆದಿವೆ. ಮೆಕ್ಕೆಜೋಳ, ಹತ್ತಿ, ಕಬ್ಬಿನಂಥ ಏಕಬೆಳೆ ಬೆಳೆಯುವ ಬದಲಿಗೆ, ರೈತ ಸಮುದಾಯಕ್ಕೆ ಹಲವು ಬಗೆಯ ಭದ್ರತೆ ಒದಗಿಸುವ ಈ ಸಾಂಪ್ರದಾಯಿಕ ವಿಧಾನವನ್ನು ಮತ್ತೆ ಪುನಶ್ಚೇತನಗೊಳಿಸಬೇಕಿದೆ.
‘ಸಾಕಷ್ಟು ಮಳೆ ಬರುತ್ತಿಲ್ಲ; ಬಂದರೆ ನೀರು ನಿಲ್ಲುವುದೇ ಇಲ್ಲ. ಬೆಳೆ ಹಾನಿಯಾಗದಂತೆ ನೋಡಿಕೊಳ್ಳುವುದೇ ಕಷ್ಟ’ ಎಂದು ರೈತರು ದೂರುತ್ತಾರೆ. ‘ಹಾಗಿದ್ದರೆ ಮಳೆ ನೀರನ್ನು ಎಷ್ಟು ಪ್ರಮಾಣದಲ್ಲಿ ಇಂಗಿಸುತ್ತೀರಿ’ ಎಂದು ಪ್ರಶ್ನಿಸಿದರೆ ಖಚಿತ ಉತ್ತರ ಸಿಗದು. ಈಗಲೂ ಮಳೆ ನೀರು ಇಂಗಿಸುವಿಕೆ ಪ್ರಕ್ರಿಯೆ ರೈತರಿಗೆ ಆದ್ಯತೆ ಅನಿಸುತ್ತಿಲ್ಲ. ಅತಿ ಕಡಿಮೆ ಮಳೆ ಬೀಳುವ ಹಾಗೂ ಅರ್ಧಕ್ಕಿಂತ ಹೆಚ್ಚು ಭೂಭಾಗ ಮರುಭೂಮಿ ಆಗಿರುವ ಇಸ್ರೇಲ್ ನೀರಿನ ಸದ್ಬಳಕೆಯ ಬಹು ದೊಡ್ಡ ಪಾಠ ಹೇಳುತ್ತದೆ. ಬೆಳೆಗಳಿಗೆ ಹರಿವು ನೀರಾವರಿ (ಫ್ಲಡ್ ಇರಿಗೇಶನ್) ಆಶ್ರಯಿಸಿರುವ ನಮ್ಮ ದೇಶದ ಸ್ಥಿತಿಗೂ ಹನಿ ನೀರಾವರಿಯಿಂದ ನೀರಿನ ಪೋಲು ಆಗುತ್ತದೆ ಎಂದು ಯೋಚಿಸಿ ನೀರಿನ ಮಿತಬಳಕೆಯಲ್ಲಿ ನೂರು ಹೆಜ್ಜೆ ಮುಂದೆ ಸಾಗಿರುವ ಇಸ್ರೇಲಿಗೂ ಅಜಗಜ ವ್ಯತ್ಯಾಸವಿದೆ. ಸುಡುಬಿಸಿಲಿನ ಮರುಭೂಮಿ ಮಧ್ಯೆ ದಿಢೀರೆಂದು ಎದುರಾಗುವ ತೋಟಗಳು ನೀರಿನ ವಿವೇಚನಾಯುಕ್ತ ಬಳಕೆಯ ವಿಧಾನ ತೋರಿಸುತ್ತವೆ. ಹನಿ ನೀರಾವರಿ ಅನುಶೋಧಿಸಿದ ಎಂಜಿನಿಯರ್ ಸಿಮ್ಚಾ ಬ್ಲಾಸ್ ಕಾಲದಿಂದ ಈವರೆಗೆ ಇಸ್ರೇಲ್ ಸಾಗಿ ಬಂದ ಹಾದಿಯು ಹತ್ತಾರು ಸಾಧ್ಯತೆಗಳನ್ನು ತೆರೆದಿಟ್ಟಿದೆ. ಕೊಳವೆಬಾವಿಯಲ್ಲಿ ಎರಡಿಂಚು ನೀರಿದ್ದರೆ ನಾಲ್ಕೈದು ಎಕರೆ ಬೇಸಾಯ ಮಾಡಬಹುದು ಎಂದು ನಾವು ಭಾವಿಸಿದ್ದರೆ, ಅಷ್ಟು ಪ್ರಮಾಣದ ನೀರಿನಲ್ಲಿ ಇಸ್ರೇಲ್ ನೂರು ಎಕರೆವರೆಗೂ ಯಶಸ್ವಿ ಕೃಷಿ ಸಾಬೀತುಪಡಿಸುತ್ತದೆ.
ಇರುವುದೇ ಒಂದೆಕರೆ ಜಮೀನು. ಅದರಲ್ಲಿ ನಾಲ್ಕು ಗುಂಟೆ ಭಾಗಕ್ಕೆ ತಂತಿ ಬೇಲಿ ಹಾಕಿ, ಕೋಳಿ ಸಾಕಣೆ ಮಾಡುತ್ತಿರುವ ಕೊಪ್ಪಳ ಬಳಿಯ ಕಾಮನೂರಿನ ಕೃಷಿಕ ಮಲ್ಲಪ್ಪ ಕುಂಬಾರ, ವರ್ಷದಲ್ಲಿ ನಾಲ್ಕು ಸಲ ಕೋಳಿ ಮಾರಾಟ ಮಾಡುತ್ತಾರೆ. ಪ್ರತಿ ಸಲವೂ ಕನಿಷ್ಠ ಇಪ್ಪತ್ತು ಸಾವಿರ ರೂಪಾಯಿ ಆದಾಯ! ‘ನಾಟಿ ಕೋಳಿ ಹೆಚ್ಚೇನೂ ಆರೈಕೆ ಕೇಳುವುದಿಲ್ಲ. ಹುಳು ಹುಪ್ಪಟೆ ತಿಂದು ಓಡಾಡುತ್ತವೆ. ಕಳೆದ ನಾಲ್ಕು ವರ್ಷಗಳಿಂದಲೂ ಮೊಟ್ಟೆ, ಕೋಳಿ ಮಾರಾಟದಿಂದ ಖಚಿತ ಆದಾಯ ಪಡೆಯುತ್ತಿದ್ದೇನೆ’ ಎಂದು ಮಲ್ಲಪ್ಪ ಹೇಳುತ್ತಾರೆ. ಇವರಲ್ಲಿನ ಹತ್ತು ಜೇನು ಪೆಟ್ಟಿಗೆಗಳೂ ಆದಾಯ ಸೃಷ್ಟಿಯ ಭಾಗವಾಗಿವೆ.
ಎಷ್ಟೇ ಹೆಚ್ಚು ಪ್ರಮಾಣದ ಜಮೀನು ಇದ್ದರೂ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ರೈತ ತತ್ತರಿಸುವುದು ಸಹಜ. ಆದರೆ ಪಶುಪಾಲನೆಯನ್ನು ಬೇಸಾಯದ ಭಾಗವಾಗಿ ರೂಪಿಸಿಕೊಂಡ ರೈತರಿಗೆ ನಷ್ಟದ ಬಿಸಿ ತಟ್ಟುವುದು ಕಡಿಮೆ. ಇಂಥ ಕೌಶಲಗಳನ್ನು ಒರೆಗೆ ಹಚ್ಚಿ, ನಿರ್ದಿಷ್ಟ ಚೌಕಟ್ಟಿನಲ್ಲಿ ಕೂಡಿಸಿ, ರೈತರಿಗೆ ತರಬೇತಿ- ಮಾರ್ಗದರ್ಶನ ನೀಡುತ್ತಿರುವ ಹಲವು ಸಂಸ್ಥೆಗಳಿವೆ. ತಿಪಟೂರು ಬಳಿಕ ‘ಅಕ್ಷಯ ಕಲ್ಪ’ ಅಂಥದರಲ್ಲೊಂದು. ‘ಬೇಸಾಯದಿಂದ ಶೇಕಡ 50ರಷ್ಟು ಆದಾಯ ಸಿಕ್ಕರೆ, ಉಪಕಸುಬುಗಳಿಂದ ಅಷ್ಟೇ ಆದಾಯ ಪಡೆಯುವ ಸಾಧ್ಯತೆಯನ್ನು ರೈತರಿಗೆ ಮನದಟ್ಟು ಮಾಡಿಸುತ್ತಿದ್ದೇವೆ. ಒಟ್ಟಾರೆ ಕೃಷಿ ಅಂದರೆ, ಬೆಳೆ ಅಷ್ಟೇ ಅಂತಲ್ಲ; ಇದರ ಸುತ್ತಲೂ ಹಲವು ಉಪಕಸುಬು ಇದ್ದರೆ ರೈತರು ಆರ್ಥಿಕವಾಗಿ ಸ್ವಾವಲಂಬಿ ಆಗುತ್ತಾರೆ’ ಎಂದು ಸಂಸ್ಥೆಯ ತರಬೇತುದಾರ ರಘುರಾಮ್ ವಿವರ ಕೊಡುತ್ತಾರೆ. ಬೇಸಾಯವನ್ನು ಕೇಂದ್ರವಾಗಿಟ್ಟುಕೊಂಡು, ಪಶುಪಾಲನೆ, ಜೇನು, ಮೀನು, ಕೋಳಿ ಸಾಕಣೆಯಂಥ ಉಪಕಸುಬುಗಳನ್ನು ಸಮನ್ವಯದಿಂದ ಜೋಡಿಸಿ, ಅಕ್ಷಯ ಕಲ್ಪ ರೈತರ ಸಾಮರ್ಥ್ಯ ಹೆಚ್ಚಿಸುವಲ್ಲಿ ಶ್ರಮಿಸುತ್ತಿದೆ. ಈ ಹೆಜ್ಜೆಯಲ್ಲಿ ಯಶಸ್ವಿಯಾಗಿ ಸಾಗಿದ ರೈತರೂ ಸಾಕಷ್ಟು ಇದ್ದಾರೆ.
ಒಂದು ಕಿಲೋ ಜೋಳ ಅಥವಾ ಸಜ್ಜೆ ಬೆಲೆ ನಲವತ್ತು ರೂಪಾಯಿ. ಆದರೆ ಮೌಲ್ಯವರ್ಧನೆ ಮಾಡಿದರೆ, ಆ ಕಿಲೋ ಧಾನ್ಯದ ಬೆಲೆ ಮುನ್ನೂರು ರೂಪಾಯಿ ಆದೀತು! ಅಚ್ಚರಿ ಎನಿಸಿದರೂ ನಿಜ. ಕುಂದಗೋಳ ತಾಲ್ಲೂಕಿನ ತೀರ್ಥ ಗ್ರಾಮದ ಬೀಬಿ ಫಾತಿಮಾ ಮಹಿಳಾ ಸಂಘದ ಬೀಬಿ ಜಾನ್ ಹಳೇಮನಿ ಮೌಲ್ಯವರ್ಧನೆಯ ಹೊಸ ಹಾದಿ ತೋರಿಸುತ್ತಾರೆ. ‘ಕಿಲೋ ಜೋಳಕ್ಕೆ ಮೂವತ್ತು ರೊಟ್ಟಿ ಆಗ್ತಾವ್ರಿ. ಹತ್ತು ರೊಟ್ಟಿ ಪ್ಯಾಕಿಗೆ ನೂರು ರೂಪಾಯಿ’ ಎನ್ನುವ ಅವರು, ಜೋಳ ಹಾಗೂ ಸಜ್ಜೆಯ ರೊಟ್ಟಿ ಮಾಡಿ ಆಹಾರ ಮೇಳಗಳಲ್ಲಿ ಗ್ರಾಹಕರಿಗೆ ಪೂರೈಸುತ್ತಾರೆ. ಸಜ್ಜೆಯ ರುಚಿಕರ ಸಿಹಿ ತಿನಿಸು ಮಾದಲಿ ಕಿಲೋಗೆ ನೂರೈವತ್ತು ರೂಪಾಯಿ. ಗೋಧಿ ಮೌಲ್ಯ ಹೆಚ್ಚಿಸುವ ನಿಟ್ಟಿನಲ್ಲಿ, ಇವರು ತಯಾರಿಸುವ ಶಾವಿಗೆ ಪ್ರತಿ ವರ್ಷ 50 ಕ್ವಿಂಟಲುಗಳಷ್ಟು ಮಾರಾಟ ಆಗುತ್ತದಂತೆ! ನಿಂಬೆ, ಮಾವಿನ ಕಾಯಿ, ಹೇರಳೇಕಾಯಿ ನೇರ ಮಾರಾಟಕ್ಕಿಂತ ಉಪ್ಪಿನಕಾಯಿ ತಯಾರಿಸಿ, ಮಾರಿದರೆ ಲಾಭ ಹಲವು ಪಟ್ಟು ಹೆಚ್ಚುತ್ತದೆ.
ಉತ್ತರ ಕರ್ನಾಟಕದ ಮುಖ್ಯ ಖಾದ್ಯತೈಲ ಬೆಳೆ ಶೇಂಗಾವನ್ನು ಪ್ರಮುಖವಾಗಿ ಬೆಳೆಯುವ ಕುಷ್ಟಗಿ ಸಮೀಪ ಆಚಾರತಿಮ್ಮಾಪುರ ಗ್ರಾಮದ ಶ್ರೀಪಾದರಾಜ ಮುರಡಿ, ತಮ್ಮದೇ ಆದ ಮಾರ್ಗವನ್ನು ಕಂಡುಕೊಂಡಿದ್ದಾರೆ. ಒಂದನೇ ದರ್ಜೆಯ ಕಾಳುಗಳನ್ನು ಸಾವಯವ ಮಳಿಗೆಗೆ, ಎರಡನೇ ದರ್ಜೆಯ ಶೇಂಗಾವನ್ನು ಗಾಣದಲ್ಲಿ ಎಣ್ಣೆ ಮಾಡಿಸಿ ಗ್ರಾಹಕರಿಗೆ ಒದಗಿಸುತ್ತಾರೆ. ‘ನನ್ನ ಬೆಳೆ; ನನ್ನ ಬೆಲೆ- ಇದು ನನ್ನ ಧ್ಯೇಯ. ಮೌಲ್ಯವರ್ಧನೆಯಿಂದ ನನಗೆ ವಿಶ್ವಾಸಭರಿತ ಗ್ರಾಹಕರ ಜಾಲವೊಂದು ಸಿಕ್ಕಿದೆ’ ಎನ್ನುವ ಶ್ರೀಪಾದರಾಜ, ರೈತರು ಹೊಲದಿಂದ ಮಾರುಕಟ್ಟೆಗೆ ಶೇಂಗಾ ದಾಟಿಸುವ ಅವಸರದ ಪರಿ ಕಂಡು ಬೇಸರ ವ್ಯಕ್ತಪಡಿಸುತ್ತಾರೆ.
ಒಮ್ಮೆ ಬಿರುಬಿಸಿಲು, ಮರುದಿನ ಮಳೆ ಸುರಿಯುತ್ತದೆ. ಅದಾದ ಎರಡೂ ದಿನ ಮತ್ತೆ ಸೂರ್ಯ ಕೆಂಗಣ್ಣು ಬೀರುತ್ತಾನೆ. ಮೇಲ್ನೋಟಕ್ಕೆ ಈ ಸ್ಥಿತಿ ಕಾಣುತ್ತದಾದರೂ, ನೆಲದೊಡಲಿನಲ್ಲಿ ಏನಿದೆ?
ಮಣ್ಣಿನ ವಿವಿಧ ಪದರುಗಳ ಸ್ಥಿತಿ, ಬೆಳೆಗೆ ಬೇಕಾದ ಅಗತ್ಯ ಪೋಷಕಾಂಶಗಳ ಬಗ್ಗೆ ಖಚಿತ ಮಾಹಿತಿ ಒದಗಿಸುವ ತಂತ್ರಜ್ಞಾನ ಈಗೆಲ್ಲ ಕೈಗೆಟಕುವ ದರದಲ್ಲಿ ಲಭ್ಯ. ಸುಸ್ಥಿರ ಕೃಷಿ ಪರ ಕೆಲಸ ಮಾಡುತ್ತಿರುವ ಸಂಸ್ಥೆಗಳು ಈಗ ಇಂಥ ತಂತ್ರಜ್ಞಾನದ ಮೊರೆ ಹೋಗುತ್ತಿವೆ. ನೆಲದೊಡಲ ಮಾಹಿತಿ ರೈತನ ಕೈಗೆ ಬರುತ್ತದೆ. ಅದರ ಅನುಸಾರ ಬೇಸಾಯದ ಮುಂದಿನ ಹೆಜ್ಜೆ ನಿರ್ಧರಿಸಬೇಕಷ್ಟೇ.
ಮಣ್ಣಿನ ತೇವಾಂಶ ಅಳೆಯುವ ಸೆನ್ಸರ್, ತಾಪಮಾನ ಖಚಿತಪಡಿಸಿಕೊಂಡು ಎಲೆಕ್ಟ್ರಾನಿಕ್ ಸಾಧನಕ್ಕೆ ಸಂದೇಶ ರವಾನಿಸುವ ಉಪಕರಣ, ಸ್ವಯಂಚಾಲಿತವಾಗಿ ನೀರಿನ ಪಂಪ್ ಚಾಲೂ ಮಾಡುವ ಸ್ಟಾರ್ಟರ್, ಇವೆಲ್ಲಕ್ಕೂ ಸೌರಶಕ್ತಿಯ ವಿದ್ಯುತ್- ಇಷ್ಟೆಲ್ಲ ಮಾಹಿತಿಯನ್ನು ಕ್ರೋಡೀಕರಿಸಿ, ಬೆಳೆಗಳಿಗೆ ಅಗತ್ಯವಾಗಿ ಬೇಕಾದಷ್ಟೇ ನೀರನ್ನು ಪೂರೈಸುವ ಸಮಗ್ರ ವ್ಯವಸ್ಥೆಯು ಈಗ ಹಳ್ಳಿ ಹೊಲಕ್ಕೇ ಬಂದಿದೆ. ವಿವಿಧ ಬೆಳೆಗಳಿಗೆ ಬೇಕಾಗುವ ನೀರು ಹಾಗೂ ಪೋಷಕಾಂಶಗಳ ದತ್ತಾಂಶವನ್ನು ವಿಶ್ಲೇಷಿಸಿ, ಈ ಉಪಕರಣದಲ್ಲಿ ಸಂಗ್ರಹಿಸಿ ಇಡಲಾಗಿರುತ್ತದೆ. ವಾತಾವರಣಕ್ಕೆ ಅನುಗುಣವಾಗಿ ಯಾವ ಯಾವ ಬೆಳೆಗೆ ಏನೆಲ್ಲ ಬೇಕೋ ಅದನ್ನಷ್ಟೇ ಕರಾರುವಾಕ್ಕಾಗಿ ಒದಗಿಸುವ ತಂತ್ರಜ್ಞಾನ ರೈತರಿಗೆ ವರದಾನವೇ ಸೈ. ಹೆಚ್ಚೇನೂ ವೆಚ್ಚ ಅನಿಸದ ಈ ತಂತ್ರಜ್ಞಾನವು ಪ್ರಾದೇಶಿಕ ಭಾಷೆಗಳಲ್ಲಿ ಸಿದ್ಧವಾಗಿ ಕೃಷಿಕರ ಅಂಗೈಯಲ್ಲಿನ ಮೊಬೈಲಿಗೆ ಬಂದು ಬೀಳುತ್ತಿದೆ. ‘ದೂರದ ವಿಜಯಪುರ ಜಿಲ್ಲೆ ತಾಳಿಕೋಟೆ ತಾಲ್ಲೂಕಿನ ನೀರಲಗಿ ಗ್ರಾಮದಲ್ಲಿನ ನನ್ನ ತೋಟದಲ್ಲಿ ತೇವಾಂಶ ಹೇಗಿದೆ? ಬೆಳೆಗಳ ಸ್ಥಿತಿ ಏನು? ತೋಟದ ಗಿಡಗಳಿಗೆ ನೀರು ಕೊಡಬೇಕೇ? ಪೋಷಕಾಂಶ ಕೊರತೆ ಇದೆಯೇ? ಈಗಿನ ವಾತಾವರಣಕ್ಕೆ ಬೆಳೆಯು ಕೀಟ- ರೋಗ ಬಾಧೆಗೆ ಈಡಾಗಲಿದೆಯೇ? ಇಂಥ ಹತ್ತಾರು ಪ್ರಶ್ನೆಗೆ ನಾನು ಬೆಂಗಳೂರಿನಲ್ಲೇ ಕೂತು ಪರಿಹಾರ ಪಡೆಯುತ್ತಿದ್ದೇನೆ’ ಎಂದು ಅನುಭವ ಹಂಚಿಕೊಳ್ಳುತ್ತಾರೆ ಐಟಿ ಎಂಜಿನಿಯರ್ ಹಾಗೂ ಕೃಷಿಕ ಶಿವಪುತ್ರ ಚೌಧರಿ.
ಕೃಷಿಯನ್ನು ಒಂದು ಉದ್ಯಮವಾಗಿ ರೂಪಿಸಿಕೊಂಡ ದೇಶಗಳಲ್ಲಿ ರೈತರಿಗೆ ನೆರವಿನ ಮಹಾಪೂರ ಸಿಗುತ್ತದೆ. ಜಮೀನು ಹದ ಮಾಡುವುದರಿಂದ ಹಿಡಿದು, ಮೌಲ್ಯವರ್ಧನೆ- ಮಾರುಕಟ್ಟೆಯವರೆಗೂ ಸ್ಪಷ್ಟವಾದ ದಾರಿ ತೋರಿಸಲಾಗುತ್ತದೆ. ಜನಸಂಖ್ಯೆಯ ಮುಕ್ಕಾಲು ಭಾಗ ಬೇಸಾಯಕ್ಕೆ ಮೊರೆ ಹೋಗಿರುವ ಭಾರತದಲ್ಲಿ ಈವರೆಗೆ ಸ್ಪಷ್ಟವಾದ ರೈತಪರ ನೀತಿಗಳೇ ರೂಪುಗೊಂಡಿಲ್ಲ. ಬದಲಾಗಿ, ಕಾರ್ಪೆರೇಟ್ ಹಾಗೂ ಬೃಹತ್ ಬಂಡವಾಳದಾರರ ಹಿಡಿತದಲ್ಲೇ ಕೃಷಿ ವಲಯ ಸಿಲುಕಿಕೊಂಡಿವೆ. ರೈತನೇ ದೇಶದ ಬೆನ್ನೆಲುಬು ಎಂಬ ಕ್ಲೀಷೆಯ ನುಡಿಗಟ್ಟು ಮೇಲ್ನೋಟಕ್ಕೆ ಬಲು ಜನಪ್ರಿಯ. ವಾಸ್ತವದಲ್ಲಿ ರೈತನನ್ನು ಪರಾವಲಂಬಿ ಮಾಡಿ, ಆತನ ಬೆನ್ನೆಲುಬನ್ನೇ ಮುರಿಯಲಾಗಿದೆ. ಈಗಂತೂ ದೇಶದಲ್ಲಿ ಬರಗಾಲ ತಾಂಡವವಾಡುತ್ತಿದೆ. ಮೂಲಸೌಲಭ್ಯಗಳ ಮರೀಚಿಕೆ, ಪ್ರಾಕೃತಿಕ ಸಂಪನ್ಮೂಲಗಳ ವಿವೇಚನಾರಹಿತ ಬಳಕೆ ಜತೆಗೆ ಉಳ್ಳವರ ಹಿಡಿತದಲ್ಲಿನ ಮಾರುಕಟ್ಟೆಯು ರೈತರನ್ನು ಹೈರಾಣಾಗಿಸಿದೆ.
ಹಾಗೆಂದು ಖಂಡಿತವಾಗಿ ನಿರಾಶೆಯಾಗಬೇಕಿಲ್ಲ! ನಿಸರ್ಗದ ಸವಾಲುಗಳನ್ನು ಎದುರಿಸಿ, ಪರಿಸರಪೂರಕ ವಿಧಾನ ಅನುಸರಿಸಿ, ಲಭ್ಯ ಸರಳ ತಂತ್ರಜ್ಞಾನ ಬಳಸುತ್ತ ಬೇಸಾಯ ಮಾಡುತ್ತಿರುವ ಸಾಧಕ ರೈತ ಸಮೂಹವೇ ಇದೆ. ಇಂಥ ಸುಸ್ಥಿರ ರೈತರ ದಾರಿಯನ್ನು ಇತರರಿಗೂ ತೋರಿಸಬೇಕು. ಇದಕ್ಕೆ ಪೂರಕವಾಗಿ, ರೈತರಿಗೆ ಬೇಕೋ- ಬೇಡವೋ ಎಂದು ತುಸು ಕೂಡ ಯೋಚಿಸದೇ ಪ್ರಯೋಗಾಲಯಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡಿರುವ ಕೃಷಿ ಸಂಶೋಧಕರು, ವಿಜ್ಞಾನಿಗಳೂ ರೈತನ ಕ್ಷೇತ್ರಕ್ಕೆ ಬರಬೇಕು. ಸಾವಿರಾರು ವರ್ಷಗಳ ಕೃಷಿ ಇತಿಹಾಸದಲ್ಲಿ ಪ್ರಕೃತಿ ಆಗಾಗ್ಗೆ ಅಸಹನೆ ತೋರಿದ್ದು ಇದ್ದೇ ಇದೆ. ಈ ಸಲದ ಬರಗಾಲ ಅದಕ್ಕೊಂದು ಸೇರ್ಪಡೆ. ಮೈನಡುಗಿಸಬೇಕಾದ ಚಳಿಗಾಲದ ಸಮಯದಲ್ಲೀಗ ಸುಡುಬಿಸಿಲ ಧಗೆ! ಮುಂದಿನ ದಿನಗಳಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಪಾಠವಾಗಿ ಈ ಕಾಲವನ್ನು ಪರಿಗಣಿಸಬೇಕೇ ಹೊರತು, ತಲೆ ಮೇಲೆ ಕೈಹೊತ್ತು ಕೂರುವ ಅಸಹಾಯಕ ಸ್ಥಿತಿಯನ್ನಲ್ಲ!