ವಾಣಿಜ್ಯ

ಲಾಭಕ್ಕಾಗಿ ಅಂಗಾಂಶ ಕೃಷಿಯಡೆ ಒಲವು

ಸುಭಾಸ ಹೆಗಡೆ ಧೂಪದಹೊಂಡ

ಶಿರಸಿ: ಬಾಳೆ ಕೃಷಿಯನ್ನು ಹೆಚ್ಚು ಲಾಭದಾಯಕಗೊಳಿಸಲು ಅಂಗಾಂಶ ಕೃಷಿಗೆ ಒಲವು ತೋರಲಾಗುತ್ತಿದೆ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಹಣ್ಣು ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ನಾಗೇಶ ನಾಯ್ಕ ಹೇಳಿದರು.

ತೋಟಗಾರಿಕೆ ಮಹಾವಿದ್ಯಾಲಯದ ಶಿರಸಿಯ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ಅಂಗಾಂಶ ಬಾಳೆ ಕೃಷಿ ಬಗ್ಗೆ ರೈತರಿಗೆ ಒಂದು ದಿನದ ಅಂತರ್ಜಾಲ ತರಬೇತಿಯಲ್ಲಿ ಅವರು ಮಾತನಾಡಿದರು.

ರಾಜ್ಯದ ಎಲ್ಲೆಡೆ ಬಾಳೆಯನ್ನು ಪ್ರಮುಖ ಬೆಳೆಯಾಗಿ ಬೆಳೆಯಲಾಗುತ್ತಿದೆ. ಎಲ್ಲ ಋತುಮಾನದಲ್ಲೂ ದೊರೆಯುವುದರಿಂದ ಬಾಳೆಯನ್ನು ಇನ್ನು ಹೆಚ್ಚು ಲಾಭದಾಯಗೊಳಿಸುವ ನಿಟ್ಟಿನಲ್ಲಿ ಅಂಗಾಂಶ ಕೃಷಿಗೆ ಒಲವು ಹೆಚ್ಚುತ್ತಿದೆ. ಬಾಳೆ ಹಣ್ಣಿಗೆ ಒಳ್ಳೆಯ ಬೇಡಿಕೆ ಇರುವುದರಿಂದ ಬಾಳೆಯು ಲಾಭದಾಯಕ ಬೆಳೆಯಾಗಿದೆ ಎಂದು ವಿವರಿಸಿದರು.

ವಿಷಯ ಸಂಪನ್ಮೂಲ ವ್ಯಕ್ತಿ ಡಾ.ಡಿ.ಪಿ. ಪ್ರಕಾಶ ಮಾತನಾಡಿ, ರೈತರು ಅಂಗಾಂಶ ಬಾಳೆ ಕೃಷಿ ಸಸಿಯ ಆಯ್ಕೆ, ಅವುಗಳ ನಿರ್ವಹಣೆ ಮತ್ತು ಯಾವ ತಳಿಗಳು ಅಂಗಾಂಶ ಕೃಷಿಗೆ ಸೂಕ್ತ. ಅಂಗಾಂಶ ಬಾಳೆ ಕೃಷಿಯ ಬೇಸಾಯ ಕ್ರಮಗಳು, ಬೆಳೆಯುವ ವಿಧಾನ, ಪೋಷಕಾಂಶಗಳ ನಿರ್ವಹಣೆ, ರೋಗ ಮತ್ತು ಕೀಟ ನಿರ್ವಹಣೆಯ ಬಗ್ಗೆ ರೈತರು ಹೆಚ್ಚಿನ ಮಾಹಿತಿ ಪಡೆದು ಕೃಷಿ ಮಾಡಬೇಕು ಎಂದರು.

ವಿಸ್ತರಣಾ ಮುಂದಾಳು ಡಾ. ಶಿವಕುಮಾರ ಕೆ.ಎಂ.ಮಾತನಾಡಿ, ಜಿಲ್ಲೆಯಲ್ಲಿ ಅಡಕೆ ಜತೆ ಬಾಳೆಯನ್ನು ಮಿಶ್ರ ಬೆಳೆಯಾಗಿ ಬೆಳೆಯುವುದರಿಂದ ರೈತರಿಗೆ ಆರ್ಥಿಕ ಲಾಭ ತಂದುಕೊಡುತ್ತದೆ ಎಂದರು.

ವಿಷಯ ಸಂಪನ್ಮೂಲ ವ್ಯಕ್ತಿಯಾದ ಡಾ. ರತ್ನಾಕರ್ ಶೇಟ್ ಅವರು ಅಂಗಾಂಶ ಬಾಳೆ ಕೃಷಿಯ ಉಪಯೋಗದ ಕುರಿತು ಮಾಹಿತಿ ನೀಡಿದರು. ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾಧಿಕಾರಿ ಡಾ.ಎನ್.ಕೆ. ಹೆಗಡೆ ಕಾರ್ಯಕ್ರಮ ಉದ್ಘಾಟಿಸಿದರು. ವಿವಿಧ ಜಿಲ್ಲೆಗಳಿಂದ ಸುಮಾರು 35 ರೈತರು, ರೈತ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಪ್ರೀತಮ್ ಎಸ್.ಪಿ., ಭಾಗವಹಿಸಿದ್ದರು. ತಾಂತ್ರಿಕ ನಿರ್ವಹಣೆಯನ್ನು ಪ್ರವೀಣಕುಮಾರ ಯಲಗೂರ ಮಾಡಿದರು.