ವಾಣಿಜ್ಯ

ಮೆಕ್ಕೆಜೋಳ ಬೆಲೆ ಪಾತಾಳಕ್ಕೆ

ಮುಂಡರಗಿ: ಗೋವಿನಜೋಳ ಬೆಳೆದ ತಾಲೂಕಿನ ರೈತರು ದರ ಕುಸಿತದಿಂದ ಗೋಳಾಡುತ್ತಿದ್ದಾರೆ. ಬೆಳೆಗೆ ಮಾಡಿದ ಖರ್ಚು ಕೂಡ ವಾಪಸ್ ಬಾರದಿರುವುದು ಚಿಂತೆಗೀಡು ಮಾಡಿದೆ.

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಳೆದ ತಿಂಗಳಲ್ಲಿ ಕ್ವಿಂಟಾಲ್ ಗೋವಿನಜೋಳವು 1600-1900 ರೂ.ಗೆ ಮಾರಾಟವಾಗಿತ್ತು. ಸದ್ಯ ಪ್ರತಿ ಕ್ವಿಂಟಾಲ್​ಗೆ 1059-1259 ರೂ.ಗೆ ಮಾರಾಟವಾಗುತ್ತಿದೆ. ಇದು ರೈತ ಸಮುದಾಯದಲ್ಲಿ ಬೇಸರ ಮೂಡಿಸಿದೆ.

ತಾಲೂಕಿನಲ್ಲಿ 2,503 ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಗೋವಿನಜೋಳ ಬೆಳೆಯಲಾಗಿದೆ. ರೈತರು ಪ್ರತಿ ಎಕರೆಗೆ ಅಂದಾಜು 25 ಸಾವಿರ ರೂ. ಖರ್ಚು ಮಾಡಿದ್ದಾರೆ.

ಆದರೆ, ಸದ್ಯ ಮಾರುಕಟ್ಟೆಯಲ್ಲಿ ಸಿಗುವ ದರಕ್ಕೆ ಹೋಲಿಸಿದರೆ ರೈತರು ಮಾಡಿದ ಖರ್ಚೂ ಸಹ ತೆಗೆಯುವುದು ಕಷ್ಟವಾಗಿದೆ. ನಾಲ್ಕೈದು ತಿಂಗಳು ಹಗಲು-ರಾತ್ರಿ ಬೆವರು ಹರಿಸಿ ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಕಾರಣ ರೈತರಿಗೆ ದಿಕ್ಕು ತೋಚದಂತಾಗಿದೆ. ಈಗಾಗಲೇ ಹಲವು ರೈತರು ಸಿಕ್ಕ ಬೆಲೆಗೆ ಗೋವಿನಜೋಳ ಮಾರಾಟ ಮಾಡಿದ್ದಾರೆ. ಕೆಲವರು ಉತ್ತಮ ಬೆಲೆ ನಿರೀಕ್ಷೆಯಲ್ಲಿ ಬೆಳೆಯನ್ನು ಸಂಗ್ರಹಿಸಿಟ್ಟು ಕಾದು ಕುಳಿತಿದ್ದಾರೆ.

ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಬೆಲೆ ಕಡಿಮೆಯಾಗುತ್ತಿದೆ. ಕರೊನಾ ವೈರಸ್ ಹಿನ್ನೆಲೆಯಲ್ಲಿ ಬೇರೆ ದೇಶಗಳಿಗೆ ಗೋವಿನಜೋಳ ರಫ್ತು ಸ್ಥಗಿತಗೊಳಿಸಲಾಗಿದೆ. ಕೆಲವೆಡೆ ಕೋಳಿಫಾರಂಗಳು ಬಂದ್ ಆಗಿವೆ. ಹೀಗಾಗಿ ಗೋವಿನಜೋಳದ ಬೇಡಿಕೆ ತಗ್ಗಿರುವುದೇ ಬೆಲೆ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ.

ಖರೀದಿ ಕೇಂದ್ರ ಪ್ರಾರಂಭಿಸಿ

ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್ ಗೋವಿನಜೋಳಕ್ಕೆ 1,760 ರೂ.ಬೆಂಬಲ ಬೆಲೆ ನಿಗದಿ ಮಾಡಿತ್ತು. ಆದರೆ, ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸಿಲ್ಲ. ರೈತರು ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಮಾರುಕಟ್ಟೆಯಲ್ಲಿ ಗೋವಿನಜೋಳದ ಬೆಲೆ ಸಂಪೂರ್ಣ ಕುಸಿತವಾಗಿದೆ. ಇದರಿಂದ ರೈತರು ಸಂಕಷ್ಟ ಸ್ಥಿತಿ ಅನುಭವಿಸುವಂತಾಗಿದೆ. ಸರ್ಕಾರ ತಕ್ಷಣ ಗೋವಿನಜೋಳ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಪ್ರಾರಂಭಿಸುವ ಮೂಲಕ ರೈತರ ನೆರವಿಗೆ ಬರಬೇಕು. | ಬಸವರಾಜ ಅಂಕದ, ರೈತ
ಗೋವಿನಜೋಳ ಖರೀದಿ ಕೇಂದ್ರ ತೆರೆಯುವ ಕುರಿತು ಜಿಲ್ಲಾಧಿಕಾರಿ ಸಭೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ರೈತರು ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ನೀಡಬೇಕು ಮತ್ತು ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಎರಡು ಬಾರಿ ಮನವಿ ಸಲ್ಲಿಸಿದ್ದಾರೆ. ಮತ್ತೊಮ್ಮೆ ಜಿಲ್ಲಾಧಿಕಾರಿ ಮೂಲಕ ಸರ್ಕಾರದ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. | ಡಾ.ವೆಂಕಟೇಶ ನಾಯಕ, ತಹಸೀಲ್ದಾರ್