ವಾಣಿಜ್ಯ

ಬೆಳೆ ಸಾಲ ನೀಡಲು ಸಮಸ್ಯೆ ಏನು?

ಜೊಯಿಡಾ: ಕೆಲವು ಸಹಕಾರಿ ಸಂಘಗಳಲ್ಲಿ ರೈತರಿಗೆ ಬೆಳೆ ಸಾಲ ದೊರೆತಿಲ್ಲ ಎಂಬ ಬಗ್ಗೆ ದೂರು ಬಂದಿದೆ. ಯಾವ ಕಾರಣದಿಂದ ಬೆಳೆ ಸಾಲ, ಸಿಗುತ್ತಿಲ್ಲ ಎಂಬ ಬಗ್ಗೆ ತಹಸೀಲ್ದಾರ್ ಹಾಗೂ ಇಒ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಸೂಚಿಸಿದರು.

ಬುಧವಾರ ಪದವಿ ಕಾಲೇಜ್​ನಲ್ಲಿ ನಡೆಸ ತಾಲೂಕು ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಉಸುಕು ಆಕ್ರಮ ಸಾಗಾಟ ವಾಹನದ ಮೇಲೆ ಏಕೆ ಪ್ರಕರಣ ದಾಖಲಿಸಲಾಗುತ್ತಿಲ್ಲ. ಈ ವಿಷಯ ತಹಸೀಲ್ದಾರ್, ಸಿಪಿಐ, ಪಿಎಸ್​ಐ ಹಾಗೂ ಅರಣ್ಯ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದರು.

ಪಶು ಇಲಾಖೆಯ ವಿಷಯ ಬಂದಾಗ ನಂದಿಗದ್ದಾ ಪಶು ವೈದ್ಯಾಧಿಕಾರಿ ಅರ್ಚನಾ ಸಿನ್ಹಾ ಅವರು ಆಸ್ಪತ್ರೆಗೆ ಸರಿಯಾಗಿ ಬರುತ್ತಿಲ್ಲ ತಿಂಗಳಿಗೆ ಒಂದೆರೆಡು ಸಲ ಬಂದು ಸಹಿ ಹಾಕಿ ಹೋಗುತ್ತಾರೆ ಎಂದು ಗ್ರಾ.ಪಂ. ಮಾಜಿ ಸದಸ್ಯ ಆರ್.ವಿ. ದಾನಗೇರಿ ದೂರಿದರು.

ಆರೋಗ್ಯ, ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆ ಸೇರಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.

ತಾ.ಪಂ. ಅಧ್ಯಕ್ಷೆ ನರ್ಮದಾ ಪಾಟ್ನೆಕರ, ಉಪಾಧ್ಯಕ್ಷ ವಿಜಯ ಪಂಡಿತ, ಜಿ.ಪಂ. ಸದಸ್ಯರಾದ ಸಂಜಯ ಹಣಬರ, ರಮೇಶ ನಾಯ್ಕ, ತಾ.ಪಂ. ಸದಸ್ಯೆ ಅಲ್ಕಾಂಜಾ ಮಂಥೇರೊ ಇದ್ದರು.

ಸಿಪಿಐ ಕೆಲಸದ ನೆಪ: ನಾನು ಪ್ರತಿ ಸಲ ಬಂದಾಗಲೂ ಜೊಯಿಡಾ ಸಿಪಿಐ ಬೇರೆ ಕಡೆ ಕೆಲಸ ಇದೆ ಎಂದು ನೆಪ ಹೇಳಿ ಸಭೆಯಿಂದ ತಪ್ಪಿಸಿಕೊಳ್ಳುತ್ತಾರೆ. ಅವರಿಗೆ ಈ ಆಕ್ರಮ ಉಸುಕು ಸಾಗಾಟದ ಬಗ್ಗೆ ಮಾಹಿತಿ ಇಲ್ಲವೇ? ಎಂದು ತರಾಟೆಗೆ ತೆಗೆದುಕೊಂಡರು.