ವಾಣಿಜ್ಯ

ಫೋನ್​ ಪೇ ಇವತ್ತೇ ಕೆಲಸ ಮಾಡತ್ತಂತೆ!

ಬೆಂಗಳೂರು: ಆರ್ಥಿಕ ಸಂಕಷ್ಟಕ್ಕೆ ಈಡಾಗಿರುವ ಯೆಸ್ ಬ್ಯಾಂಕ್​ ಅನ್ನು ಬ್ಯಾಂಕಿಂಗ್ ಪಾರ್ಟನರ್ ಆಗಿ ಇಟ್ಟುಕೊಂಡಿದ್ದ ಫೋನ್​ ಪೇ ಗುರುವಾರದಿಂದ ಕೆಲಸ ಮಾಡುತ್ತಿರಲಿಲ್ಲ. ಶುಕ್ರವಾರ ಬೆಳಗ್ಗೆಯಿಂದ ಫೋನ್​ ಪೇ ತೆರೆದರೆ ‘ವಿ ಆರ್ ಟೆಂಪರರಿಲಿ ಅನ್​ಅವೇಲೆಬಲ್​’ ಎಂಬ ಶೀರ್ಷಿಕೆಯೊಂದಿಗೆ ಸಂದೇಶವೊಂದು ಪರದೆ ಮೇಲೆ ಕಾಣಿಸಕೊಳ್ಳತೊಡಗಿತ್ತು.

ಶುಕ್ರವಾರ ಬೆಳಗ್ಗೆ ಫ್ಲಿಪ್​ಕಾರ್ಟ್​ನ ಸಮೀರ್ ನಿಗಮ್ ಎಂಬುವರು ಟ್ವೀಟ್ ಮೂಲಕ ಫೋನ್ ಪೇ ಗ್ರಾಹಕರ ಬಳಿಕ ಕ್ಷಮೆಯಾಚಿಸಿ, ಇಡೀ ತಂಡವೇ ಪರಿಸ್ಥಿತಿ ನಿಭಾಯಿಸುವುದಕ್ಕೆ ಕೆಲಸ ಮಾಡುತ್ತಿದ್ದು ರಾತ್ರಿವೇಳೆಗೆ ಎಲ್ಲವೂ ಸರಿ ಹೋಗಲಿದೆ. ಅಲ್ಲಿ ತನಕ ತಾಳ್ಮೆ ವಹಿಸಿ ಎಂದು ಮನವಿ ಮಾಡಿಕೊಂಡಿದ್ದರು. ಈ ಟ್ವೀಟ್​ಗೆ ಉತ್ತರ ಎಂಬಂತೆ, ಫೋನ್​ ಪೇಯ ರಾಹುಲ್ ಚಾರಿ ಆರು ಗಂಟೆಗಳ ಹಿಂದೆ, ಇಂದು ಸಂಜೆಯೊಳಗೆ ವ್ಯಾಪಾರಿಗಳ ಹಣಕಾಸು ಸೆಟಲ್​ಮೆಂಟ್ ಮಾಡಿ, ನಂತರ ಎಲ್ಲ ಬಳಕೆದಾರರಿಗೂ ನಮ್ಮ ಎಲ್ಲ ಸೇವೆಗಳೂ ಲಭ್ಯವಾಗುವಂತೆ ಮಾಡುತ್ತೇವೆ ಎಂದು ಉತ್ತರಿಸಿದ್ದರು. ಈಗ ಒಂದು ಗಂಟೆ ಹಿಂದೆ ಮತ್ತೆ ಅದೇ ಟ್ವೀಟ್​ ಮುಂದುವರಿಸಿ, ನಮ್ಮ ವಾಗ್ದಾನದ ಪ್ರಕಾರವೇ ಎಲ್ಲ ವ್ಯಾಪಾರಿ ಸಂಬಂಧದ ವಹಿವಾಟುಗಳನ್ನು ಪೂರ್ಣಗೊಳಿಸಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ. ಅದೇ ರೀತಿ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್​ ಬಳಸಿ ನಮ್ಮ ಸೇವೆಗಳನ್ನು ಬಳಸಬಹುದು ಎಂಬ ಫೋನ್ ಪೇ ಟ್ವೀಟನ್ನು ಮರುಟ್ವೀಟ್ ಮಾಡಿದ್ದಾರೆ.

ಫೋನ್​ ಪೇ ಮತ್ತು ಅವರ ಸಹವರ್ತಿಗಳ ತಂಡ ಬಹಳ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವ ವಿಶ್ವಾಸ ಬಳಕೆದಾರರಲ್ಲೂ ಕಂಡುಬಂದಿದ್ದು, ಯೆಸ್​ ಬ್ಯಾಂಕ್​ ಮೇಲಿನ ನಿರ್ಬಂಧದ ಕಾರಣಕ್ಕೆ ಸಂಕಷ್ಟಕ್ಕೀಡಾದ ಫೋನ್​ ಪೇ ತನ್ನ ಯುಪಿಐ ಸೇವೆಗಳು ಇವತ್ತೇ ಮತ್ತೆ ಚಾಲ್ತಿಗೆ ಬರಲಿವೆ ಎಂಬ ವಿಶ್ವಾಸವೂ ಮೂಡಿದೆ. (ಏಜೆನ್ಸೀಸ್)