ವಾಣಿಜ್ಯ

ಎಟಿಎಂಗಳಲ್ಲಿ 2 ಸಾವಿರ ರೂ. ನೋಟು ಬಂದ್!

ರಮೇಶ್​ ಕುಮಾರ್​​ ಬಿ ಎಡಮೋಳೆ

ನವದೆಹಲಿ: ಎರಡು ಸಾವಿರ ರೂಪಾಯಿ ನೋಟಿಗೆ ಚಿಲ್ಲರೆ ಪಡೆಯಲು ಗ್ರಾಹಕರು ಅನುಭವಿಸುತ್ತಿರುವ ಸಂಕಷ್ಟ ತಪ್ಪಿಸುವ ಸಲುವಾಗಿ ಇಂಡಿಯನ್ ಬ್ಯಾಂಕ್ ಮಾ. 1ರಿಂದ ಎಟಿಎಂಗಳಲ್ಲಿ 2 ಸಾವಿರ ರೂ. ನೋಟುಗಳನ್ನು ನೀಡುವುದನ್ನು ಸ್ಥಗಿತಗೊಳಿಸುತ್ತಿದೆ ಎಂದು ತಿಳಿದುಬಂದಿದೆ.

ಎಟಿಎಂಗಳಲ್ಲಿ 2 ಸಾವಿರ ರೂ. ನೋಟಿನ ಶೇಖರಣೆ ಸ್ಥಗಿತಗೊಳಿಸುವಂತೆ ಫೆ.17ರಂದೇ ಇಂಡಿಯನ್ ಬ್ಯಾಂಕ್ ತನ್ನ ಎಲ್ಲ ಶಾಖೆಗಳಿಗೆ ಸೂಚನೆ ನೀಡಿದೆ. ಎಟಿಎಂಗಳಲ್ಲಿನ 2 ಸಾವಿರ ರೂ. ನೋಟು ಜೋಡಿಸುವ ಕ್ಯಾಸೆಟ್​ಗಳನ್ನು ತೆಗೆಯಲು ಆದೇಶಿಸಲಾಗಿದ್ದು, ಇದರ ಬದಲಿಗೆ 200 ರೂ. ನೋಟುಗಳ ಕ್ಯಾಸೆಟ್​ಗಳ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ.

ಗ್ರಾಹಕರು ಎಟಿಎಂನಿಂದ ಪಡೆದ 2 ಸಾವಿರ ರೂ.ವನ್ನು ಚಿಲ್ಲರೆ ಮಾಡಿಸಿಕೊಳ್ಳಲು ಪುನಃ ಬ್ಯಾಂಕ್​ಗೆ ಬರುತ್ತಿದ್ದಾರೆ. ಹೊರಗಡೆ ಚಿಲ್ಲರೆ ಸಮಸ್ಯೆ ಸೃಷ್ಟಿಯಾಗುವುದನ್ನು ತಪ್ಪಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಬ್ಯಾಂಕ್ ಸ್ಪಷ್ಟನೆ ನೀಡಿದೆ. ಇದರ ಹೊರತಾಗಿ ಬ್ಯಾಂಕ್​ನ ಶಾಖೆಗಳಲ್ಲೇ ಹಣ ವಿತ್​ಡ್ರಾ ಮಾಡುವವರಿಗೆ 2 ಸಾವಿರ ರೂ. ನೋಟುಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದೆ. ಇಂಡಿಯನ್ ಬ್ಯಾಂಕ್ ಹೊರತಾಗಿ ಬೇರೆ ಯಾವ ಬ್ಯಾಂಕ್​ಗಳು ಹಾಗೂ ಸರ್ಕಾರಿ ಸಂಸ್ಥೆಗಳೂ ಈ ರೀತಿಯ ಆದೇಶ ಹೊರಡಿಸಿಲ್ಲ.